ರಾಮನಗರ: ಬೆಂಗಳೂರು- ಮೈಸೂರು ರಸ್ತೆಯ ಬಿಡದಿಯಲ್ಲಿರುವ ಟೊಯೋಟಾ ಬೋಷೂಕೂ ಆಟೋಮೇಟಿವ್ ಇಂಡಿಯಾ ಕಂಪನಿಯ ಕಾರ್ಖಾನೆಯ ಶೌಚಾಲಯದಲ್ಲಿ ಪಾಕಿಸ್ತಾನ ಪರ ಬರಹ ಬರೆದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಿಡದಿ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಉತ್ತರ ಕರ್ನಾಟಕ ಮೂಲದ ಹೈಮದ್ ಹುಸೇನ್ (24) ಮತ್ತು ಸಾದಿಕ್ (20) ಬಂಧಿತ ಆರೋಪಿಗಳು. ಇವರು ಟೊಯೋಟಾ ಕಾರ್ಖಾನೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಶೌಚಾಲಯದ ಗೋಡೆ ಮೇಲೆ ಪಾಕಿಸ್ತಾನದ ಪರ ಬರಹ ಬರೆಯುವುದರ ಜತೆಗೆ ಕನ್ನಡಿಗರ ಬಗ್ಗೆಯೂ ಅವಹೇಳನ ಪದ ಬಳಸಿದ್ದರು. ದೇಶದ್ರೋಹದ ಆರೋಪದಡಿಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಕಾರ್ಖಾನೆಯ ಶೌಚಾಲಯದ ಗೋಡೆ ಮೇಲೆ ಪಾಕಿಸ್ತಾನ ಕೀ ಜೈ, ಪಾಕಿಸ್ತಾನಕ್ಕೆ ಜಯವಾಗಲಿ ಎಂದು ಬರೆದಿದ್ದರು.
ಈ ಕಾರ್ಖಾನೆಯಲ್ಲಿ 2 ಸಾವಿರಕ್ಕೂ ಹೆಚ್ಚು ಕಾರ್ಮಿಕರಿದ್ದು, ಮೂರು ಪಾಳಿಗಳಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಪ್ರತಿ ಪಾಳಿಯಲ್ಲಿ 600 ಕಾರ್ಮಿಕರು ಕೆಲಸ ಮಾಡುತ್ತಿದ್ದು, ಮಾರ್ಚ್ 16ರಂದು ಮೊದಲನೇ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಕಿಡಿಗೇಡಿಗಳು, ಈ ರೀತಿ ಬರೆದಿದ್ದಾರೆ. ಇವರ ಬರಹದ ಫೋಟೋ ವೈರಲ್ ಆಗಿದ್ದು, ಬಿಡದಿ ಪೋಲಿಸರು ಭೇಟಿ ನೀಡಿ ಪರಿಶೀಲಿಸಿ ಕಿಡಿಗೇಡಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದರು.
ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ಕನ್ನಡಪರ ಸಂಘಟನೆಗಳು ಕಾರ್ಖಾನೆ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿ ಕಂಪನಿಯ ಆಡಳಿತ ಮಂಡಲಿ ವಿರುದ್ದ ಘೋಷಣೆ ಕೂಗಿದ್ದರು. ದೇಶದ್ರೋಹಿ ಪದ ಬಳಸಿದ ಹಾಗೂ ಕನ್ನಡಿಗರನ್ನು ನಿಂದಿಸಿರುವ ಕಿಡಿಗೇಡಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಆರೋಪಿಗಳನ್ನು ಕೆಲಸದಿಂದ ವಜಾಗೊಳಿಸಿ ಗಡಿಪಾರು ಮಾಡಬೇಕು ಎಂದು ಆಗ್ರಹಪಡಿಸಿದ್ದರು.
ಕಂಪನಿಯ ಶೌಚಾಲಯದ ಗೋಡೆಯ ಮೇಲೆ “ಪಾಕಿಸ್ತಾನ ಜೈ” ಕನ್ನಡಿಗರು ಸೂ…ಮಕ್ಕಳು ಎಂದು ಬರೆಯಲಾಗಿತ್ತು. ಯಾವಾಗ ಯಾರು ಬರೆದಿದ್ದಾರೆ ಎಂಬ ಮಾಹಿತಿ ಆರಂಭದಲ್ಲಿ ಇರಲಿಲ್ಲವಾದರೂ ಮಾರ್ಚ್ 15 ರಂದು ಬೆಳಕಿಗೆ ಬಂದಿತ್ತು.