ಬೆಂಗಳೂರು: ಕರ್ನಾಟಕ ಭೋವಿ ನಿಗಮದಲ್ಲಿ ನಡೆದಿದ್ದ ಅವ್ಯವಹಾರದಲ್ಲಿ ತನಿಖೆ ಎದುರಿಸಿದ್ದ ವಕೀಲೆ ಹಾಗೂ ಉದ್ಯಮಿ ಜೀವಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಡಿವೈಎಸ್ ಪಿ ಕನಕಲಕ್ಷ್ಮಿ ಅವರನ್ನು ಎಸ್ ಐ ಟಿ ಅಧಿಕಾರಿಗಳು ಬಂಧಿಸಿದ್ದಾರೆ. ವಕೀಲೆ ಜೀವಾ ಅವರು, ನನ್ನ ಆತ್ಮಹತ್ಯೆಗೆ ಡಿವೈಎಸ್ ಪಿ ಕನಕಲಕ್ಷ್ಮಿ ಅವರೇ ಕಾರಣ ಎಂದು 13 ಪುಟಗಳ ಸುದೀರ್ಘ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಇಂದು ಬೆಳಗ್ಗೆ ಕನಕಲಕ್ಷ್ಮಿ ಎಸ್‌ಐಟಿ ವಿಚಾರಣೆಗೆ ಹಾಜರಾಗಿದ್ದಾಗ ಬಂಧಿಸಲಾಗಿದೆ. ಈ ಹಿಂದೆ ಎರಡು ಬಾರಿ ಕನಕಲಕ್ಷ್ಮಿ ಅವರ ಹೇಳಿಕೆಯನ್ನು ಎಸ್ ಐ ಟಿ ದಾಖಲು ಮಾಡಿತ್ತು. ಇಂದು ಬೆಳಗ್ಗೆ ವಿಚಾರಣೆಗೆ ಒಳಪಡಿಸಿ ಬಳಿಕ ಬಂಧಿಸಲಾಗಿದೆ
ಬಿಜೆಪಿ ಸರ್ಕಾರದ ಅವಧಿಯಲ್ಲಿ ಭೋವಿ ನಿಗಮದ ಅಕ್ರಮದ ಕುರಿತು ಕಾಂಗ್ರೆಸ್ ಸರ್ಕಾರ ಸಿಐಡಿ ತನಿಖೆಗೆ ವಹಿಸಿತ್ತು. ಸಿಐಡಿ ಡಿವೈಎಸ್ ಪಿ ಕನಕಲಕ್ಷ್ಮಿ ವಿಚಾರಣೆಯ ನೇತೃತ್ವ ವಹಿಸಿದ್ದರು. ಭೋವಿ ನಿಗಮದಲ್ಲಿ ಒಟ್ಟು 34 ಕೋಟಿ ರೂ. ಅಕ್ರಮ ಹಣ ವರ್ಗಾವಣೆಯಾಗಿದ್ದು, ಇದರಲ್ಲಿ ಜೀವಾ ಮಾಲೀಕತ್ವದ ಸಂಸ್ಥೆ ಅನ್ನಿಕಾ ಎಂಟರ್‌ಪ್ರೆಸಸ್ ಗೆ 7.16 ಕೋಟಿ ರೂ. ಮತ್ತು ಆಕೆಯ ಸಹೋದರಿ ಹೆಸರಲ್ಲಿರುವ ಹರ್ನಿತಾ ಕ್ರಿಯೇಷನ್ಸ್ ಗೆ 3.79 ಕೋಟಿ ರೂ. ವರ್ಗಾವಣೆ ಆಗಿತ್ತು. ಇನ್ನುಳಿದ ಹಣ ನಿಗಮದ ಅಧಿಕಾರಿಗಳ ಆಪ್ತರ ಪಾಲುದಾರಿಕೆಯ ಸಂಸ್ಥೆಗಳಿಗೆ ವರ್ಗವಾಗಿತ್ತು. ಈ ಪ್ರಕರಣದ ಬಗ್ಗೆ ಆಂತರಿಕ ತನಿಖೆ ನಡೆಸಲು ಗೃಹ ಇಲಾಖೆ ಮುಂದಾಗಿತ್ತು.
ಕರ್ನಾಟಕ ಭೋವಿ ನಿಗಮ ಹಗರಣದ ತನಿಖೆ ಎದುರಿಸುತ್ತಿದ್ದಾಗ ಡಿವೈಎಸ್ ಪಿ ಕನಕಲಕ್ಷ್ಮಿ ಅವರು ನನ್ನನ್ನು ವಿವಸ್ತ್ರಗೊಳಿಸಿ ವಿಚಾರಣೆ ನಡೆಸಿ, 25 ಲಕ್ಷ ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ವಕೀಲೆ ಜೀವಾ 13 ಪುಟಗಳ ಡೆತ್ನೋಟ್ ಬರೆದಿಟ್ಟು 2024 ನವೆಂಬರ್ 22ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಜೀವಾ ಸಹೋದರಿ ಸಂಗೀತಾ ಅವರು ಸಿಐಡಿ ಡಿವೈಎಸ್ ಪಿ ಕನಕಲಕ್ಷ್ಮಿ ವಿರುದ್ಧ ದೂರು ನೀಡಿದ್ದರು. ನವೆಂಬರ್ 22, 2024 ರಂದು, ಬನಶಂಕರಿ ಪೊಲೀಸರು ಕನಕಲಕ್ಷ್ಮಿ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7 (ಎ) ಮತ್ತು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 108 ರ ಅಡಿಯಲ್ಲಿ ಜೀವಾ ಅವರ ಸಹೋದರಿ ಸಂಗೀತಾ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿತ್ತು.
ಸಂಗೀತಾ ನೀಡಿರುವ ದೂರಿನ ಪ್ರಕಾರ, ಕನಕ ಲಕ್ಷ್ಮಿ ಅವರು ನವೆಂಬರ್ 14 ಮತ್ತು 21, 2024 ರ ನಡುವೆ ಜೀವಾ ಅವರನ್ನು ವಿಚಾರಣೆಗೆ ಕರೆದಿದ್ದರು. ಈ ಸಂದರ್ಭದಲ್ಲಿ ಅವರು ಸಂಗೀತಾಗೆ ಕಿರುಕುಳ ನೀಡಿ 25 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಹೀಗಾಗಿ ನವೆಂಬರ್ 22 ರ ಬೆಳಿಗ್ಗೆ ಜೀವಾ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಆರೋಪಿಸಲಾಗಿದೆ.