ಪ್ರಸಕ್ತ ಜಾಗತಿಕ ಸಂದರ್ಭದಲ್ಲಿ ಭಗವಾನ್ ಶ್ರೀ ಮಹಾವೀರರ ಶಾಂತಿ ಸಂದೇಶ ಜಗತ್ತಿಗೆ ಅವಶ್ಯ: ಸಚಿವ ಶಿವರಾಜ ತಂಗಡಗಿ

Most read

ಬೆಂಗಳೂರು: ಯುದ್ಧ ಮತ್ತು ಅಹಿಂಸೆಗಳಿಂದ ನಲುಗುತ್ತಿರುವ ಪ್ರಸಕ್ತ ಜಾಗತಿಕ ಸಂದರ್ಭದಲ್ಲಿ ಭಗವಾನ್ ಶ್ರೀ ಮಹಾವೀರರ ಶಾಂತಿ ಸಂದೇಶ ಅತ್ಯಂತ ಅವಶ್ಯಕ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅಭಿಪ್ರಾಯಪಟ್ಟಿದ್ದಾರೆ.

ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಭಗವಾನ್ ಶ್ರೀ ಮಹಾವೀರರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಗವಾನ್ ಮಹಾವೀರರು ಬುದ್ಧ ಬಸವ ಅಂಬೇಡ್ಕರ್ ಮಹಾತ್ಮ ಗಾಂಧಿ ಮುಂತಾದ ಮಹನೀಯರು ಜನಿಸಿದ ಭಾರತ ಇಡೀ ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಮಹಾನ್ ಭೂಮಿಯಾಗಿದೆ. ಇದರ ಮಹತ್ವವನ್ನು ಯುವ ಪೀಳಿಗೆಗೆ ಹೇಳುವ ಉದ್ದೇಶದಿಂದಲೇ ನಾವು ಇಂತಹ ಮಹಾಪುರುಷರ ಜಯಂತಿಯನ್ನು ಆಚರಣೆ ಮಾಡುತ್ತಿದ್ದೇವೆ. ಕರ್ನಾಟಕದ ಸಾಂಸ್ಕೃತಿಕ ಪರಂಪರೆಗೆ ಜೈನರ ಕೊಡುಗೆ ಬಹಳ ದೊಡ್ಡದಿದೆ. ಅದನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದು ಅವರು ಹೇಳಿದರು.

ಮಹಾವೀರ ಜಯಂತಿಯನ್ನು ಆಚರಿಸಲು ಈ ಹಿಂದೆ ಶ್ರೀ ಸಿದ್ದರಾಮಯ್ಯನವರು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಆದೇಶ ಮಾಡಿದರು. ಅದರ ಜೊತೆಗೆ ಭಗವಾನ್ ಶ್ರೀ ಮಹಾವೀರರ ಹೆಸರಿನಲ್ಲಿ ರಾಷ್ಟ್ರೀಯ ಶಾಂತಿಪ್ರಶಸ್ತಿಯನ್ನು ಸಹ  ಸ್ಥಾಪನೆ ಮಾಡಲಾಯಿತು. ಈ ವರ್ಷ ಶ್ರೀ ಭಗವಾನ್ ಮಹಾವೀರ ರಾಷ್ಟ್ರೀಯ ಶಾಂತಿ ಪ್ರಶಸ್ತಿಯನ್ನು ಪಂಡಿತರತ್ನ ಎಸ್ ಶಾಂತಿರಾಜ ಶಾಸ್ತ್ರಿ ಟ್ರಸ್ಟ್ ಗೆ ಘೋಷಣೆ ಮಾಡಲಾಗಿದೆ ಸದ್ಯದಲ್ಲಿಯೇ ಮುಖ್ಯಮಂತ್ರಿಗಳ ದಿನಾಂಕ ಪಡೆದು ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು  ನೀಡಲಾಗುವುದು ಎಂದು ಅವರು ಹೇಳಿದರು.

ಕಾಂಗ್ರೆಸ್ ಪಕ್ಷಕ್ಕೆ ಹಸ್ತದ ಚಿನ್ಹೆ ನೀಡಿದ್ದು ಜೈನ ಮುನಿಗಳು:

ಕಾಂಗ್ರೆಸ್ ಪಕ್ಷಕ್ಕೆ ಹಸ್ತದ ಚಿನ್ಹೆಯನ್ನು ನೀಡಿದ್ದು ಸಹ ಜೈನ ಮುನಿಗಳೇ ಎಂಬುದನ್ನು ಸಚಿವರುಗಿ ಸ್ಮರಿಸಿದರು. 1978ರಲ್ಲಿ ಕರ್ನಾಟಕದ ಶ್ರೀ ಕ್ಷೇತ್ರ ಸಿಂಹನಗದ್ದೆ ಮಠದಲ್ಲಿ  ಶ್ರೀ ಜ್ವಾಲಾ ಮಾಲಿನಿ ದೇವಿಯ ಅನುಗ್ರಹ ಪಡೆಯಲು ಜೈನ ಮಠಕ್ಕೆ ಭೇಟಿ ಕೊಟ್ಟ ಇಂದಿರಾಗಾಂಧಿಯವರಿಗೆ ದಿಗಂಬರ ಜೈನ ಆಚಾರ್ಯ ಶ್ರೀ 108 ವಿದ್ಯಾನಂದ ಮುನಿ ಮಹಾರಾಜರು ಆಶೀರ್ವಾದ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಅಭಯಹಸ್ತವನ್ನು ಅನುಗ್ರಹಿಸಿದರು ಎಂದು ನಾನು ಕೇಳಲ್ಪಟ್ಟಿದ್ದೇನೆ ಎಂದು ಅವರು ಹೇಳಿದರು.

ಸಮಾರಂಭದಲ್ಲಿ ಮಾತನಾಡಿದ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ .ಸುಧಾಕರ್ ಅವರು ಮಾತನಾಡಿ ನಮ್ಮ ಸರ್ಕಾರ ಜೈನ ಸಮುದಾಯದ ಪರವಾಗಿದೆ ,ಪ್ರಸಕ್ತ ವರ್ಷ 100 ಕೋಟಿ ರೂಪಾಯಿಗಳನ್ನು ಜೈನ ಸಮುದಾಯದ ಅಭಿವೃದ್ಧಿಗೆ ಬಳಸಲು ಉದ್ದೇಶಿಸಿದೆ. ಜೈನ ಬಸದಿಗಳ ಜೀರ್ಣೋದ್ಧಾರಕ್ಕೆ ನಮ್ಮ ಸರ್ಕಾರ ಮುಂದಾಗಿದೆ ಎಂದು ಅವರು ಹೇಳಿದರು.

ಶ್ರೀ ಕ್ಷೇತ್ರ ಸಿಂಹನಗದ್ದೆ ಜೈನಮಠ, ನರಸಿಂಹ ರಾಜಪುರ ದ ಸ್ವಾಮೀಜಿಗಳಾದ ಪರಮಪೂಜ್ಯ ಸ್ವಸ್ತಿಶ್ರೀ ಲಕ್ಷ್ಮಿಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ, ರಾಜ್ಯಸಭೆ ಸದಸ್ಯ ಲೆಹರ್ ಸಿಂಗ್ ಸಿರೋಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ. ಎಂ.ಗಾಯಿತ್ರಿ ಹಾಗೂ ಕರ್ನಾಟಕ ಜೈನ್ ಅಸೋಸಿಯೇಷನ್ ಅಧ್ಯಕ್ಷ ಎಸ್ ಜಿತೇಂದ್ರ ಕುಮಾರ್ ಉಪಸ್ಥಿತರಿದ್ದರು.

More articles

Latest article