ಇಂದು ಅಸ್ಸಾಂ ಬೋರ್ಡುವಾ, ಶ್ರೀ ಶಂಕರದೇವ ಸತ್ರ ದಿಂದ ಯಾತ್ರೆ ಆರಂಭವಾಯಿತು. ಅಸ್ಸಾಂ ನ ಹೈಬರ್ಗಾಂವ್ ದಾಟಿ ಮೊರಿಗಾಂವ್ ನಗಾಂವ್, ಶ್ರೀಮಂತ ಶಂಕರದೇವ್ ಚೌಕದಲ್ಲಿ ಸಾರ್ವಜನಿಕ ಸಭೆ ನಡೆಯಿತು. ಅಲ್ಲಿಂದ ಮೊರಿಗಾಂವ್ ಭಗೋರಾದ ಗಾಯ್ಚಿಯಾ ಮೂಲಕ ಜಗಿರೊಡ್ ತಲಪಿತು.
ಮಧ್ಯಾಹ್ನ 3. 30 ಕ್ಕೆ ಯಾತ್ರೆ ಜೋರ್ಹಾಟ್ ಅಸ್ಸಾಂ ಮತ್ತು ಮೇಘಾಲಯ ಗಡಿಯನ್ನು ತಲಪಿತು. ಅಲ್ಲಿ ಧ್ವಜ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಮೇಘಾಲಯದಲ್ಲಿ ಯಾತ್ರೆಗೆ ಅಭೂತಪೂರ್ವ ಸ್ವಾಗತ ದೊರೆಯಿತು. ಆನಂತರ ಮೇಘಾಲಯದ ನಂಗ್ಪೋ, ಪಹಮ್ಸಿಯೆಮ ಗ್ರಾಮದಿಂದ ಪಹಮ್ಸಿಯೆಮ್ ಗ್ರಾಮದ ನೋನ್ಗಪೋ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಯಿತು. ಯಾತ್ರಿಗಳು ರಾತ್ರಿ ಮೇಘಾಲಯದ ಬೈರ್ನಿ, ರಿ ಭೊಯಿ ಯಲ್ಲಿ ತಂಗಲಿದ್ದಾರೆ.
ಇಂದಿನ ಯಾತ್ರೆಯ ಮುಖ್ಯ ಹೈಲೈಟ್ ಎಂದರೆ ರಾಹುಲ್ ಗಾಂಧಿಯವರನ್ನು ದೇವಸ್ಥಾನ ಪ್ರವೇಶಿಸದಂತೆ ತಡೆದುದು. ಇದು ಬಹುದೊಡ್ಡ ಕೋಲಾಹಲಕ್ಕೆ ಕಾರಣವಾಯಿತು. ಪ್ರಸಿದ್ಧ ಸಮಾಜಸುಧಾರಕ ಸಂತ ಶ್ರೀಮಂತ ಶಂಕರದೇವ ಅವರ ಜನ್ಮಸ್ಥಾನವಾದ ಬತದ್ರವ ಥಾನ್ ಗೆ ಭೇಟಿ ಕೊಡುವ ಕಾರ್ಯಕ್ರಮ ನಿಗದಿಯಾಗಿತ್ತು. ಅಸ್ಸಾಂ ಹೈಬೊರಗಾಂವ್ ನ ಶಂಕರದೇವ ಸತ್ರ ದೇವಸ್ಥಾನದವರೇ ಆಹ್ವಾನಿಸಿದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಯವರು ದೇಗುಲದೆಡೆಗೆ ಸಾಗಿದರು. ಆಗ ರಕ್ಷಣಾಪಡೆಯವರು ಆವರನ್ನು ಕಾನೂನು ಸುವ್ಯವಸ್ಥೆ ಮತ್ತು ಅಲ್ಲಿ ಈಗಾಗಲೇ ಬೇರೆ ಕಾರ್ಯಕ್ರಮ ನಡೆಯುತ್ತಿದೆ ಎಂಬ ನೆಪದಲ್ಲಿ ತಡೆದರು. “ನಾನೇನು ತಪ್ಪು ಮಾಡಿದ್ದೇನೆ ನನ್ನನ್ನು ಯಾಕೆ ಬಿಡುತ್ತಿಲ್ಲ?” ಎಂದು ರಾಹುಲ್ ಪ್ರಶ್ನಿಸಿದರು. ಸಮಸ್ಯೆ ಪರಿಹಾರವಾಗದಿದ್ದಾಗ ರಾಹುಲ್ ಅಲ್ಲಿಯೇ ಧರಣಿ ನಡೆಸಿದರು. ಅವರೊಂದಿಗಿದ್ದವರು ರಾಮನ ಹಾಡುಗಳನ್ನು ಹಾಡುತ್ತಾ ಅವರಿಗೆ ಜತೆಯಾದರು. ಇದು ದೆಹಲಿಯಿಂದ ಬಂದ ಒತ್ತಡದ ಮೇರೆಗೆ ಅಸ್ಸಾಂ ಮುಖ್ಯಮಂತ್ರಿಯ ಆದೇಶದ ಮೇಲೆ ನಡೆದುದು ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದರು. ಸಮಯಾವಕಾಶವಾದಾಗ ಮತ್ತೆ ತಾನು ದೇಗುಲಕ್ಕೆ ಭೇಟಿ ನೀಡುತ್ತೇನೆ ಎಂದು ಹೇಳಿ ರಾಹುಲ್ ಗಾಂಧಿ ತಮ್ಮ ಯಾತ್ರೆ ಮುಂದುವರಿಸಿದರು.
ಈ ನಡುವೆ ದೇಗುಲಕ್ಕೆ ಭೇಟಿ ನೀಡಿದ ಸ್ಥಳಿಯ ಸಂಸದ ಗೌರವ್ ಗೊಗೋಯಿ ಮತ್ತು ಶಾಸಕ ಅಲ್ಲಿ ಯಾವ ಇತರ ಕಾರ್ಯಕ್ರಮವೂ ಇರಲಿಲ್ಲ, ಜನಸಂದಣಿಯೂ ಇರಲಿಲ್ಲ, ಉದ್ದೇಶ ಪೂರ್ವಕವಾಗಿ ರಾಹುಲ್ ಗಾಂಧಿಯವರನ್ನು ತಡೆಯಲಾಯಿತು ಎಂದು ತಿಳಿಸಿದ್ದಾರೆ.
ಶ್ರೀನಿವಾಸ ಕಾರ್ಕಳ