Saturday, December 7, 2024

ಭಾರತ ಜೋಡೋ ನ್ಯಾಯ ಯಾತ್ರೆ | 6 ನೇ ದಿನ

Most read

ದೇಶದ ವೈವಿಧ್ಯವನ್ನು ರಕ್ಷಿಸಬೇಕು, ಈಶಾನ್ಯ ರಾಜ್ಯಗಳನ್ನೂ ಸಮಾನವಾಗಿ ಅಭಿವೃದ್ಧಿ ಮಾಡಬೇಕು, ಅಲ್ಲಿನ ಭಾಷೆ ಸಂಸ್ಕೃತಿ ರಕ್ಷಿಸುವುದು ಅತ್ಯಗತ್ಯ, ಅಸ್ಸಾಂ ಅನ್ನು ದಿಲ್ಲಿಯಿಂದ ಆಳುವುದಲ್ಲ,ಅಸ್ಸಾಂ ಅನ್ನು ಅಸ್ಸಾಂ ನಿಂದ ಆಳಬೇಕು, ಒಂದು ಭಾಷೆ ಒಂದು ಲೀಡರ್- ಇದು ಬಿಜೆಪಿ ಕಾರ್ಯಸೂಚಿ – ರಾಹುಲ್‌ ಗಾಂಧಿ

ರಾಹುಲ್ ಗಾಂಧಿ ನೇತೃತ್ವದ ಭಾರತ ಜೋಡೋ ನ್ಯಾಯ ಯಾತ್ರೆಯು ಅಸ್ಸಾಂ ನಲ್ಲಿ ಮುಂದಿನ 25 ನೇ ದಿನಾಂಕದ ವರೆಗೂ ಮುಂದುವರಿಯಲಿದ್ದು 17 ಜಿಲ್ಲೆಗಳಲ್ಲಿ ಒಟ್ಟು 833 ಕಿಲೋಮೀಟರ್ ದೂರವನ್ನು ಕ್ರಮಿಸಲಿದೆ.


ಯಾತ್ರೆಯ 6 ನೇ ದಿನವಾದ ಇಂದು (19.01.2024) ಯಾತ್ರಾರ್ಥಿಗಳು ಅಸ್ಸಾಂ ಜೋರ್ಹಾಟ್ ನ ನಿಮತಿ ಘಾಟ್ ನಿಂದ ಯಾತ್ರೆ ಆರಂಭಿಸಿದರು. ಬ್ರಹ್ಮಪುತ್ರಾ ನದಿಯನ್ನು ನಾವೆಯ ಮೂಲಕ ಸಂಚರಿಸಿ ನಿಮತಿ ಘಾಟ್ ನಿಂದ ಅಪಾಲಾ ಘಾಟ್ ತಲಪಿದ ಅವರು ಶ್ರೀ ಔನಿಯಾತಿ ಸತ್ರದ ದರ್ಶನ ಮಾಡಿದರು. ಸಾಂಸ್ಕೃತಿಕ ರೂಪದಲ್ಲಿ ಸಮೃದ್ಧವಾದ ಶಂಕರ ದೇವ ಅವರ ಭೂಮಿ, ಅಸ್ಸಾಂ ನ ಎಲ್ಲರನ್ನೂ ಒಟ್ಟಿಗೆ ಒಯ್ಯುವ ಜೀವನ ದರ್ಶನ ಕಲಿಸುತ್ತದೆ, ಇಲ್ಲಿಗೆ ಭೇಟಿ ನೀಡಿದ್ದು ಸಂತೋಷ ತಂದಿದೆ ಎಂದು ರಾಹುಲ್ ಗಾಂಧಿ ಈ ಭೇಟಿಯ ಬಗ್ಗೆ ಹೇಳಿದ್ದಾರೆ.

ಬ್ರಹ್ಮಪುತ್ರಾ ನದಿಯನ್ನು ನಾವೆಯ ಮೂಲಕ ದಾಟುತ್ತಿರುವುದು

ರಾಹುಲ್ ಗಾಂಧಿಯವರ ಯಾತ್ರೆಯ ಜತೆ ಜತೆಯಲ್ಲಿಯೇ ರಾಜಕೀಯ ಮಾತಿನ ಚಕಮಕಿಯೂ ಜೋರಾಗಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ವಿಶ್ವ ಶರ್ಮಾ ಅವರು ದೇಶದ ಕಡು ಭ್ರಷ್ಟ ವ್ಯಕ್ತಿ ಎಂದು ರಾಹುಲ್ ಹೇಳಿದರೆ, ಇದಕ್ಕೆ ಪ್ರತಿಕ್ರಿಯಿಸಿದ ಶರ್ಮಾ ಅವರು ಗಾಂಧಿ ಕುಟುಂಬ ಭ್ರಷ್ಟ ಕುಟುಂಬ ಎಂದುದಲ್ಲದೆ ಇದು ನ್ಯಾಯ ಯಾತ್ರೆಯಲ್ಲ ‘ಮಿಯಾ ಯಾತ್ರೆ’ ಎಂದು ಅದಕ್ಕೆ ಮುಸ್ಲಿಂ ಬಣ್ಣವನ್ನೂ ಹಚ್ಚಿ ವಿವಾದ ಎಬ್ಬಿಸಿದ್ದಾರೆ.

ಮಾತ್ರವಲ್ಲ ಜೋರ್ಹಾಟ್ ನಲ್ಲಿ ನಿಗದಿತ ಮಾರ್ಗ ಬಿಟ್ಟು ಬೇರೆ ಮಾರ್ಗದಲ್ಲಿ ಸಂಚರಿಸಿದ್ದಾರೆ ಎಂದು ಹೇಳಿ ಅಸ್ಸಾಂ ಪೊಲೀಸರು ಯಾತ್ರೆಯ ಆಯೋಜಕರ ಮೇಲೆ ಎಫ್ ಐ ಆರ್ ಕೂಡಾ ದಾಖಲಿಸಿದ್ದಾರೆ. ಯಾತ್ರೆಯ ಯಶಸ್ಸು ಕಂಡು ಅಸ್ಸಾಂ ಮುಖ್ಯಮಂತ್ರಿ ವಿಚಲಿತರಾಗಿದ್ದಾರೆ, ನಮ್ಮನ್ನು ಬಂಧಿಸುತ್ತಾರಾದರೆ ಬಂಧಿಸಲಿ ನೋಡೋಣ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಸವಾಲು ಹಾಕಿದ್ದಾರೆ.


ಸಂಜೆಗಾಗುವಾಗ ಯಾತ್ರಾ ತಂಡ ಗೊಗಾಮುಖವನ್ನು ತಲಪಿದೆ. ಅಲ್ಲಿ ರಾಹುಲ್ ಗಾಂಧಿಯವರು ಸಾರ್ವಜನಿಕರನ್ನು ಉದ್ದೆಶಿಸಿ ಮಾತನಾಡಿದರು. ಭಾರತವನ್ನು ಜಾತಿ ಧರ್ಮದ ಮೂಲಕ ಒಡೆಯುವುದನ್ನು ವಿರೋಧಿಸಿದ ಅವರು ಎಲ್ಲರನ್ನೂ ಜತೆಗೆ ಒಯ್ಯುವ ಅಗತ್ಯದ ಬಗ್ಗೆ ಮಾತನಾಡಿದರು.

ಹಾಗೆಯೇ ದೇಶದ ವೈವಿಧ್ಯವನ್ನು ರಕ್ಷಿಸಬೇಕು, ಈಶಾನ್ಯ ರಾಜ್ಯಗಳನ್ನೂ ಸಮಾನವಾಗಿ ಅಭಿವೃದ್ಧಿ ಮಾಡಬೇಕು, ಅಲ್ಲಿನ ಭಾಷೆ ಸಂಸ್ಕೃತಿ ರಕ್ಷಿಸುವುದು ಅತ್ಯಗತ್ಯ, ಅಸ್ಸಾಂ ಅನ್ನು ದಿಲ್ಲಿಯಿಂದ ಆಳುವುದಲ್ಲ, ಒಂದು ಭಾಷೆ ಒಂದು ಲೀಡರ್ ಇದು ಬಿಜೆಪಿ ಕಾರ್ಯಸೂಚಿ, ಅಸ್ಸಾಂ ಅನ್ನು ಅಸ್ಸಾಂ ನಿಂದ ಆಳಬೇಕು, ಈಗಿನ ಇಲ್ಲಿನ ಮುಖ್ಯಮಂತ್ರಿ ಅತ್ಯಂತ ಭ್ರಷ್ಟ ವ್ಯಕ್ತಿ, ದಿಲ್ಲಿಯಿಂದ ಏನೇ ಆದೇಶ ಬರಲಿ ಅದಕ್ಕೆ ಅನುಸಾರವಾಗಿ ಇಲ್ಲಿ ಕೆಲಸ ಮಾಡುತ್ತಾರೆ, ಮಣಿಪುರದಲ್ಲಿ ಅನೇಕ ತಿಂಗಳುಗಳಿಂದ ಹಿಂಸೆ ನಡೆಯುತ್ತಿದೆ ಆದರೆ ಪ್ರಧಾನಿಗಳು ಇದು ತನಕ ಅಲ್ಲಿಗೆ ಹೋಗಿಲ್ಲ ಎಂದರು.


ಇಂದು ಗೋಗಾಮುಖ ಕಾಲನಿ ಆಟದ ಮೈದಾನದಲ್ಲಿ ವಿರಮಿಸಲಿರುವ ತಂಡ ನಾಳೆ ಏಳನೆ ದಿನದ ಯಾತ್ರೆ ಆರಂಭಿಸಲಿದೆ.

ಶ್ರೀನಿವಾಸ ಕಾರ್ಕಳ

ಇದನ್ನೂ ಓದಿ-ಲಿಂಗಾಯತ ಧರ್ಮದ ಸುತ್ತ ಪುರೋಹಿತಶಾಹಿಗಳ ಹುತ್ತ

More articles

Latest article