ಭಾರತ್ ಜೋಡೋ ನ್ಯಾಯ ಯಾತ್ರೆ‌ | 10 ನೇ ದಿನ.

Most read

“ಯಾರನ್ನು ಆಲಿಸಬೇಕು ಎಂದು ನಿರ್ಧರಿಸುವ ಹಕ್ಕು ಕೂಡಾ ನಿಮಗಿಲ್ಲ, ಅದನ್ನು ಬೇರೆಯವರು ನಿರ್ಧರಿಸುತ್ತಿದ್ದಾರೆ, ಇದು ಇಲ್ಲಿ ಮಾತ್ರ ಅಲ್ಲ ದೇಶದಾದ್ಯಂತದ ಶಾಲಾ ಕಾಲೇಜುಗಳಲ್ಲಿ ಇದೆ, ಇದು ಇವರ ನೀತಿ”- ವಿದ್ಯಾರ್ಥಿಗಳೊಂದಿಗೆ ಮಾತುಕತೆಯಲ್ಲಿ ರಾಹುಲ್‌ ಗಾಂಧಿ

ಇಂದು ಯಾತ್ರೆಯು ಮತ್ತೆ ಮೇಘಾಲಯದಿಂದ ಅಸ್ಸಾಂ ಪ್ರವೇಶಿಸಿ ಅಸ್ಸಾಂ ನಲ್ಲಿ ಮುಂದುವರಿದಿದೆ. ಮುಂದೆ ಅಸ್ಸಾಂ ನ ಪಶ್ಚಿಮ ಭಾಗದಲ್ಲಿ ಸಂಚರಿಸಿ ಇದೇ ಜನವರಿ 25 ರಂದು ಅಸ್ಸಾಂ ರಾಜ್ಯವನ್ನು ತೊರೆಯಲಿದೆ.


ಬೆಳಿಗ್ಗೆ ಗುವಾಹಟಿಯಲ್ಲಿ ಸಾರ್ವಜನಿಕ ಸಭೆ ಮತ್ತು ಕಾಮರೂಪ್ ನ ಹಜೋದಲ್ಲಿ ಪತ್ರಿಕಾಗೋಷ್ಠಿ ನಡೆದಿದೆ. ಸಂಜೆ ಅಸ್ಸಾಂ ಬಾರಪೇಟಾ ಕುಕರ್ ಪಾರ್ ನ ಕೊರೆಮತಿ ಪೆಟ್ರೋಲ್ ಪಂಪ್ ನಿಂದ ಯೂನಿಯನ್ ಬ್ಯಾಂಕ್ ವರೆಗೆ ಪಾದಯಾತ್ರೆ ನಡೆಯಿತು. ರಾತ್ರಿ ವಿಶ್ರಾಂತಿ ಅಸ್ಸಾಮ್ ನ ಬಿಷ್ಣುಪುರದಲ್ಲಿ.

ವಿದ್ಯಾರ್ಥಿಗಳೊಂದಿಗೆ ಮಾತುಕತೆ

ಇಂದು ಎರಡು ಪ್ರಮುಖ ಘಟನೆಗಳು ನಡೆದವು. ಎಂದಿನಂತೆ ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಅಸ್ಸಾಂ ಸರಕಾರದ ವತಿಯಿಂದ ತಡೆ ಒಡ್ಡುವ ಕೆಲಸ ಮುಂದುವರಿದೇ ಇದೆ. ರಾಹುಲ್ ಗಾಂಧಿಯವರು ಅಸ್ಸಾಂ ಮೇಘಾಲಯ ಗಡಿಯಲ್ಲಿರುವ USTM ವಿವಿಯ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ವಿವಿಗೆ ರಾಹುಲ್ ಗೆ ಪ್ರವೇಶ ನಿರಾಕರಿಸಲಾಯಿತು. ವಿದ್ಯಾರ್ಥಿಗಳಾದರೋ ಸಾವಿರ ಸಂಖ್ಯೆಯಲ್ಲಿ ಹೊರಬಂದು ರಾಹುಲ್ ಮಾತು ಆಲಿಸಿದರು. “ಯಾರನ್ನು ಆಲಿಸಬೇಕು ಎಂದು ನಿರ್ಧರಿಸುವ ಹಕ್ಕು ಕೂಡಾ ನಿಮಗಿಲ್ಲ, ಅದನ್ನು ಬೇರೆಯವರು ನಿರ್ಧರಿಸುತ್ತಿದ್ದಾರೆ, ಇದು ಇಲ್ಲಿ ಮಾತ್ರ ಅಲ್ಲ ದೇಶದಾದ್ಯಂತದ ಶಾಲಾ ಕಾಲೇಜುಗಳಲ್ಲಿ ಇದೆ, ಇದು ಇವರ ನೀತಿ” ಎಂದು ರಾಹುಲ್ ಹೇಳಿದರು. ಅಲ್ಲದೆ ಅನೇಕ ಇತರ ವಿಷಯಗಳನ್ನು ರಾಹುಲ್ ಅವರೊಂದಿಗೆ ಚರ್ಚಿಸಿದರು. ವಿದ್ಯಾರ್ಥಿಗಳಿಂದ ಒಳ್ಳೆಯ ಸ್ಪಂದನ ದೊರೆಯಿತು.


ಮುಂದೆ ಗುವಾಹಟಿಯ ಕಾನಾಪರದಲ್ಲಿಯೂ ರಾಹುಲ್ ಯಾತ್ರೆಗೆ ಪೊಲೀಸರು ತಡೆ ಒಡ್ಡಿದರು. “ನೀವು ನಿಮ್ಮ ಕೆಲಸ ಮಾಡುತ್ತಿದ್ದೀರಿ, ನಿಮ್ಮ ಮೇಲೆ ನಮಗೆ ಸಿಟ್ಟಿಲ್ಲ, ಆದರೆ ನೆನಪಿರಲಿ ಇಲ್ಲೊಂದು ಕಡು ಭ್ರಷ್ಟ ಸರಕಾರ ಇದೆ, ಅದನ್ನು ನಾವು ಮುಂದೆ ಕಿತ್ತೊಗೆಯುತ್ತೇವೆ” ಎಂದು ರಾಹುಲ್ ಪೊಲೀಸರಿಗೆ ಹೇಳಿದರು. ಅಲ್ಲದೆ “ನಾವು ನಿಮ್ಮ ತಡೆಬೇಲಿ ಕಿತ್ತೊಗೆದಿದ್ದೇವೆ ,ಆದರೆ ನಾವು ಕಾನೂನು ಮುರಿಯುವುದಿಲ್ಲ” ಎಂದೂ ಹೇಳಿದರು. ಎಲ್ಲವೂ ಅಮಿತ್ ಶಾ ಆದೇಶದ ಮೇರೆಗೆ ನಡೆಯುತ್ತಿದೆ ಎಂದೂ ಅವರು ಆರೋಪಿಸಿದರು. ಇದೇ ಮಾರ್ಗದಲ್ಲಿ ಬಜರಂಗದಳ ಯಾತ್ರೆ ನಡೆದಿದೆ, ಬಿಜೆಪಿ ಅಧ್ಯಕ್ಷ ನಡ್ಡಾ ಅವರ ಯಾತ್ರೆಯೂ ನಡೆದಿದೆ. ಆದರೆ ನಮಗೆ ಮಾತ್ರ ಯಾತ್ರೆಗೆ ಅನುಮತಿ ನೀಡುತ್ತಿಲ್ಲ ಎಂದು ಕಾಂಗ್ರೆಸ್ ಅಸ್ಸಾಂ ಸರಕಾರವನ್ನು ಟೀಕಿಸಿದೆ.


ಮಧ‍್ಯಾಹ್ನ ಅಸ್ಸಾಂ ಕಾಮರೂಪ್ ನ ಹಜೋದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್ ನ ಕನಸಾದ ಐದು ನ್ಯಾಯಗಳ ಬಗ್ಗೆ ಹೇಳಿದರು. ಅವುಗಳೆಂದರೆ, ಯುವನ್ಯಾಯ, ಕಿಸಾನ್ ನ್ಯಾಯ, ನಾರಿ ನ್ಯಾಯ, ಶ್ರಮಿಕ ನ್ಯಾಯ, ಭಾಗೀದಾರಿ ನ್ಯಾಯ. ಇವುಗಳ ಬಗ್ಗೆ ಇನ್ನು ಒಂದು- ಒಂದೂವರೆ ತಿಂಗಳಲ್ಲಿ ಸ್ಪಷ್ಟ ಚಿತ್ರಣ ಮುಂದಿಡಲಾಗುವುದು ಎಂದೂ ಅವರು ಹೇಳಿದರು. ಅಲ್ಲದೆ ಅಸ್ಸಾಂ ಸರಕಾರ ನಮ್ಮ ಯಾತ್ರೆಗೆ ತಡೆ ಒಡ್ಡುತ್ತಿರುವುದು ಒಳ್ಳೆಯ ಬೆಳವಣಿಗೆ. ಇದರಿಂದ ನಮಗೆ ವ್ಯಾಪಕ ಪ್ರಚಾರ ಸಿಗುತ್ತಿದೆ ಎಂದೂ ಅವರು ಹೇಳಿದರು.

ಶ್ರೀನಿವಾಸ ಕಾರ್ಕಳ

ಇದನ್ನು ಓದಿ-ಭಾರತ್ ಜೋಡೋ ನ್ಯಾಯ ಯಾತ್ರೆ | 9 ನೇ ದಿನ.

More articles

Latest article