ಭಾರತ್ ಬಂದ್ ಗೆ ಮಿಶ್ರ ಪ್ರತಿಕ್ರಿಯೆ: ಕಾರ್ಮಿಕ ಸಂಘಟನೆಗಳ ಬೇಡಿಕೆಗಳೇನು?

Most read

ಬೆಂಗಳೂರು: ಕೇಂದ್ರ ಬಿಜೆಪಿ ಸರ್ಕಾರದ ಕಾರ್ಮಿಕ ನೀತಿಗಳನ್ನು ವಿರೋಧಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ಇಂದು ಕರೆ ನೀಡಿರುವ ಭಾರತ್‌ ಬಂದ್‌ ಗೆ ದೇಶಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸುಮಾರು 25 ಕೋಟಿ ಕಾರ್ಮಿಕರು ಈ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ.

ಉದ್ಯಮಿಗಳ ಪರವಾಗಿರುವ ಸರ್ಕಾರದ ನೀತಿಗಳಿಂದ ರೈತರು, ಬಡವರು ಹಾಗೂ ಕಾರ್ಮಿಕರಿಗೆ ತೀವ್ರ ಅನ್ಯಾಯವಾಗುತ್ತಿದೆ ಎಂದು ಕಾರ್ಮಿಕ ಸಂಘಟನೆಗಳು ಆರೋಪಿಸಿವೆ. ಗ್ರಾಮೀಣ ಮತ್ತು ಕೃಷಿ ಕಾರ್ಮಿಕ ಸಂಘಟನೆಗಳೂ ಮುಷ್ಕರಕ್ಕೆ ಬೆಂಬಲ ಸೂಚಿಸಿವೆ. 

ಐಎನ್‌ ಟಿಯುಸಿ, ಎಐಟಿಯುಸಿ, ಸಿಐಟಿಯುಸಿ, ಎಚ್ ಎಂಎಸ್‌, ಎಸ್‌ ಇಡಬ್ಲೂಎ, ಎಐಯುಟಿಯುಸಿ, ಎಐಸಿಸಿಟಿಯು, ಎಲ್‌ ಪಿಎಫ್‌, ಯುಟಿಯುಸಿ ಮತ್ತು ಟಿಯುಸಿಸಿ ಸಂಘಟನೆಗಳು ಮುಷ್ಕರದಲ್ಲಿ ಭಾಗವಹಿಸಿವೆ. 

ಕಾರ್ಮಿಕ ಸಂಘಟನೆಗಳ ಆರೋಪಗಳೇನು?

ರೈಲ್ವೆ, ಎನ್‌ ಎಂಡಿಸಿ, ಉಕ್ಕು ಕೈಗಾರಿಕೆ, ಶಿಕ್ಷಣ ಮೊದಲಾದ ಇಲಾಖೆಗಳಲ್ಲಿ ನಿವೃತ್ತರಾದವರನ್ನು ಮತ್ತೆ ಗುತ್ತಿಗೆ ಆಧಾರದಲ್ಲಿ ಮರು ನೇಮಕ ಮಾಡಿಕೊಳ್ಳುತ್ತಿರುವುದರಿಂದ ನಿರಿದ್ಯೋಗ ಹೆಚ್ಚುತ್ತಿದೆ. ಇದರಿಂದ ದೇಶದಲ್ಲಿ 35ರೊಳಗಿನ ವಯೋಮಾನದವರ ಸಂಖ್ಯೆ ಶೇ 65ರಷ್ಟಿದ್ದು ಉದ್ಯೋಗ ವಂಚಿತರಾಗುತ್ತಿದ್ದಾರೆ ಎಂದು ಸಂಘಟನೆಗಳು ಆರೋಪಿಸಿವೆ.

ಸರ್ಕಾರಿ ನೌಕರಿ ಹೆಚ್ಚಿಸಬೇಕು, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಇನ್ನಷ್ಟು ವಿಸ್ತರಿಸಿ ಹೆಚ್ಚು ಮಾನವ ದಿನಗಳನ್ನು ಸೃಷ್ಟಿಸಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಪ್ರದೇಶಗಳಲ್ಲೂ ಜಾರಿಗೆ ತರಬೇಕು ಎಂದೂ ಒತ್ತಾಯಿಸಲಾಗಿದೆ. ಒಟ್ಟು 17 ಅಂಶಗಳ ಪಟ್ಟಿಯನ್ನು ಕಾರ್ಮಿಕ ಸಂಘಟನೆಗಳು ಕಾರ್ಮಿಕ ಸಚಿವರಿಗೆ ಸಲ್ಲಿಸಿ ವರ್ಷ ಕಳೆದಿದ್ದರೂ ಸರ್ಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎಂದು ಆರೋಪಿಸಿವೆ.

ಪಶ್ಚಿಮ ಬಂಗಾಳದಲ್ಲಿ ರೈಲ್ವೆ ನಿಲ್ದಾಣಕ್ಕೆ ನುಗ್ಗಿದ ಕಾರ್ಮಿಕರು, ರೈಲು ತಡೆ ನಡೆಸಿದ್ದಾರೆ. ಕೆಲವು ರಾಜ್ಯಗಳಲ್ಲಿ ಬಸ್‌ ಚಾಲಕರು ಹೆಲ್ಮೆಟ್‌ ಧರಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

More articles

Latest article