ಗೋವಾದಲ್ಲಿ ಬೆಂಗಳೂರು ಮೂಲದ ಯುವಕನ ಬಂಧನ, ರೂ. 11.6 ಕೋಟಿ ಮೌಲ್ಯದ ಡ್ರಗ್ಸ್ ವಶ

Most read



ಬೆಂಗಳೂರು: ರೂ. 11.6 ಕೋಟಿ ಮೌಲ್ಯದ ಡ್ರಗ್ಸ್ ಸಾಗಿಸುತ್ತಿದ್ದ ಆರೋಪದ ಮೇಲೆ ಬೆಂಗಳೂರು ಮೂಲದ 23 ವರ್ಷದ ಯುವಕನೊಬ್ಬನನ್ನು ಗೋವಾ ಪೊಲೀಸರು  ಬಂಧಿಸಿ ಈತನ ಬಳಿ ಇದ್ದ 11 ಕೆಜಿ ಗಾಂಜಾವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಡ್ರಗ್ಸ್‌ ವಿರುದ್ಧ ನಡೆಸಿದ ಕಾರ್ಯಾಚರಣೆ ಇತಿಹಾಸದಲ್ಲಿ ಒಂದೇ ದಿನದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ಜಪ್ತಿ ಮಾಡಿಕೊಂಡಿದ್ದು ಇದೇ ಮೊದಲು ಎಂದು ಗೋವಾ ಪೊಲೀಸರು ಹೇಳಿದ್ದಾರೆ.

ನೇಪಾಳದಿಂದ ಭಾರತಕ್ಕೆ ಮಾದಕ ದ್ರವ್ಯಗಳನ್ನು ಸಾಗಿಸುತ್ತಿದ್ದ ಈ ಯುವಕನ ಚಲನವಲನದ ಮೇಲೆ ರಾಜ್ಯ ಗುಪ್ತಚರ ಇಲಾಖೆ ಕಳೆದ ಒಂದು ತಿಂಗಳಿನಿಂದ ನಿಗಾ ವಹಿಸಿತ್ತು. ಮಾದಕ ವಸ್ತುವಿನೊಂದಿಗೆ ಗೋವಾಕ್ಕೆ ಬಂದಿದ್ದ ಯುವಕನ ಬಗ್ಗೆ ರಾಜ್ಯ ಗುಪ್ತರಚರ ಇಲಾಖೆ ನೀಡಿದ
ಖಚಿತ ಮಾಹಿತಿ ಆಧರಿಸಿ, ಗುಯಿರಿಮ್‌ನಲ್ಲಿ ಯುವಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾದಕ ದ್ರವ್ಯ ವಿರುದ್ಧ ನಡೆಸಿದ್ದ ಕಾರ್ಯಾಚರಣೆ ಇತಿಹಾಸದಲ್ಲೇ ಇದುವರೆಗಿನ ಅತಿದೊಡ್ಡ ಮಾದಕ ದ್ರವ್ಯ ಜಪ್ತಿ ಇದಾಗಿದೆ. ಯುವಕನ ವಿರುದ್ಧ ಎನ್ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಗುಪ್ತಾ ಹೇಳಿದ್ದಾರೆ.

ಪ್ರಈ ಕರಣ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಾತನಾಡಿ, ಗೋವಾ ಸರ್ಕಾರವು ಮಾದಕ ದ್ರವ್ಯ ಸರಬರಾಜು ಮತ್ತು ಸೇವಿಸುವರ ವಿರುದ್ಧ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದೆ. ಮಾದಕ ದ್ರವ್ಯ ಕಳ್ಳಸಾಗಣಿಕೆದಾರರ ವಿರುದ್ಧ ಕ್ರಮ
ಕೈಗೊಳ್ಳಲಾಗುತ್ತಿದೆ. ಮತ್ತು ಎನ್‌ ಡಿ ಪಿ ಎಸ್ ಕಾಯ್ದೆಯಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಗೋವಾ ರಾಜ್ಯದಲ್ಲಿ ಮಾದಕ ವ್ಯಾಪಾರವನ್ನು ಮಟ್ಟ ಹಾಕಲು ಗೋವಾ ಪೊಲೀಸರು ‘ಆಪರೇಷನ್ ಪ್ರಹಾರ್‘ ಅನ್ನು ಪ್ರಾರಂಭಿಸಿದ್ದಾರೆ. 2025 ರ ಮೊದಲ ಎರಡು ತಿಂಗಳಲ್ಲಿ ಉತ್ತರ ಗೋವಾದಲ್ಲಿ 18 ಜನರನ್ನು ಬಂಧಿಸಿ  40 ಲಕ್ಷ ರೂ. ಮೌಲ್ಯದ ಮಾದಕವಸ್ತುಗಳನ್ನು
ವಶಪಡಿಸಿಕೊಳ್ಳಲಾಗಿತ್ತು. ಬಂಧಿತ 18 ಜನರಲ್ಲಿ 10 ಮಂದಿ ವಿವಿಧ ರಾಜ್ಯಗಳಿಗೆ ಸೇರಿದವರಾಗಿದ್ದರೆ ಏಳು ಮಂದಿ ಗೋವಾದವರು ಮತ್ತು ಓರ್ವ ವಿದೇಶಿ ಪ್ರಜೆ ಎಂದು ಪೊಲೀಸರು ತಿಳಿಸಿದ್ದಾರೆ.

ಗೋವಾ ಪೊಲೀಸರು 2024 ರಲ್ಲಿ  ರೂ.10 ಕೋಟಿ ಮೌಲ್ಯದ 274 ಕೆಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡು 188 ಆರೋಫಿಗಳನ್ನು ಬಂಧಿಸಿದ್ದರು. ಇವರಲ್ಲಿ  54 ಮಂದಿ ಗೋವಾ, ಇತರ ರಾಜ್ಯಗಳ 111 ಮಂದಿ ಹಾಗೂ 23  ವಿದೇಶಿಗರು ಸೇರಿದ್ದಾರೆ ಎಂದು ಪೊಲೀಸರು ಮಾಹಿತಿ
ನೀಡಿದ್ದಾರೆ.

More articles

Latest article