ಬೆಂಗಳೂರು ಗ್ರಾಮಾಂತರ ಜಿಲ್ಲೆ AC, DC ಕೋರ್ಟ್ ನಲ್ಲಿ ಪ್ರಕರಣ ಬಾಕಿ: ತರಾಟೆಗೆ ತೆಗೆದುಕೊಂಡ ಸಿಎಂ ಸಿದ್ದರಾಮಯ್ಯ

Most read

ಬೆಂಗಳೂರು : ಬೆಂಗಳೂರು ಗ್ರಾಮಾಂತರ ಮತ್ತು ಇತರ ಎರಡು ಜಿಲ್ಲೆಗಳಲ್ಲಿ AC ಮತ್ತು DC ಕೋರ್ಟ್ ಗಳಲ್ಲಿ ಐದು ವರ್ಷಕ್ಕೂ ಹಳೆಯದಾದ ಪ್ರಕರಣಗಳು ಬಾಕಿ ಇರುವುದಕ್ಕೆ ಅಸಮಾಧಾನಗೊಂಡ ಮುಖ್ಯಮಂತ್ರಿಗಳು ಸಂಬಂಧಪಟ್ಟ ಜಿಲ್ಲಾಧಿಕಾರಿಗಳನ್ನು  ತರಾಟೆಗೆ ತೆಗೆದುಕೊಂಡಿದ್ದಾರೆ.

ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ವಿಧಾನಸೌದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಸಭೆ ನಡೆಸಿದರು.  ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್‌, ಸಚಿವರಾದ ಕೃಷ್ಣಭೈರೇಗೌಡ, ಚೆಲುವರಾಯಸ್ವಾಮಿ, ಪ್ರಿಯಾಂಕ್‌ ಖರ್ಗೆ, ಕೆ.ಜೆ. ಜಾರ್ಜ್‌ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಮೊದಲಾದವರು ಭಾಗವಹಿಸಿದ್ದರು.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ AC, DC, ತಹಶೀಲ್ದಾರ್ ಕೋರ್ಟ್ ಗಳಲ್ಲಿ ಬಾಕಿ ಕೇಸುಗಳು ಶೀರ್ಘ ವಿಲೇವಾರಿ ಆಗುತ್ತಿರುವುದಕ್ಕೆ ಮೆಚ್ಚುಗೆ ಸೂಚಿಸಿದ ಮುಖ್ಯಮಂತ್ರಿಗಳು ಈ ಮೂರು ಜಿಲ್ಲೆಗಳಲ್ಲಿ ವಿಳಂಬವಾಗುತ್ತಿರುವುದಕ್ಕೆ ಕಿಡಿ ಕಾರಿದರು. Justice delayed is justice denied ಎನ್ನುವ ಮಾತನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಉಳಿದ ಜಿಲ್ಲೆಗಳಲ್ಲಿ ಪ್ರಗತಿ ಕಾಣುವಾಗ ಕೆಲವು ಜಿಲ್ಲೆಗಳಲ್ಲಿ ಮಾತ್ರ ಆಗುತ್ತಿಲ್ಲ‌ ಎಂದರೆ ಸಹಿಸಲು ಸಾಧ್ಯವಿಲ್ಲ ಎಂದರು.  ಈ ಬಗ್ಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಿ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸಿಎಂ ಸೂಚಿಸಿದರು.  ಅಗತ್ಯವಿದ್ದರೆ ಹೇಳಿ ಹಚ್ಚುವರಿ AC, DC ಗಳನ್ನು ಕೊಡಬಹುದು ಎಂದು ತಿಳಿಸಿದರು.

ಅನರ್ಹ ಪಡಿತರ ಚೀಟಿಗಳನ್ನು ರದ್ದುಗೊಳಿಸಲು ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು. ಆದರೆ ಇದರಲ್ಲಿ ನಿರೀಕ್ಷಿತ ಪ್ರಗತಿ ಏಕೆ ಸಾಧ್ಯವಾಗಿಲ್ಲ?. ರಾಜ್ಯದಲ್ಲಿ ಸುಮಾರು ಶೇ. 74ರಷ್ಟು ಬಿಪಿಎಲ್ ಕಾರ್ಡುಗಳಿದ್ದು, ಅನರ್ಹರನ್ನು ಗುರುತಿಸಿ ತೆಗೆದು ಹಾಕುವ ಮೂಲಕ ಅರ್ಹರಿಗೆ ಸವಲತ್ತು ಒದಗಿಸುವ ಕಾರ್ಯ ನಡೆಯಬೇಕಿದೆ ಎಂದು ಸೂಚನೆ ನೀಡಲಾಗಿತ್ತು. ಆದರೂ ಇದರಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿ ಆಗಿಲ್ಲ ಏಕೆ ಎಂದು ಪ್ರಶ್ನಿಸಿದರು.

ನಮ್ಮ  ಸರ್ಕಾರ ಹೊಸದಾಗಿ ಘೋಷಣೆ ಮಾಡಿರುವ ಎಲ್ಲಾ ಇಂದಿರಾ ಕ್ಯಾಂಟೀನ್‌ ಗಳು ಕಾರ್ಯಾರಂಭ ಮಾಡಲು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಂದಿರಾ ಕ್ಯಾಂಟೀನ್‌ ಗಳಿಗೆ ಇನ್ನೂ 5 ಕಡೆ ಸ್ಥಳ ಗುರುತಿಸಬೇಕಾಗಿದೆ. ತಕ್ಷಣ ನಿವೇಶನ ಗುರುತಿಸಬೇಕು. ಹೊಸದಾಗಿ ಘೋಷಣೆ ಮಾಡಲಾಗಿರುವ 186 ಇಂದಿರಾ ಕ್ಯಾಂಟೀನ್‌ ಗಳ ಪೈಕಿ ಕೇವಲ 103 ನಿರ್ಮಾಣ ಕಾರ್ಯ  ಪೂರ್ಣಗೊಂಡಿವೆ. ಆಹಾರ ವಿತರಣೆ 43 ಇಂದಿರಾ ಕ್ಯಾಂಟೀನ್‌ ಗಳಲ್ಲಿ ಮಾತ್ರ ಪ್ರಾರಂಭವಾಗಿದೆ. ಎಲ್ಲಾ ಕಡೆ ಆಹಾರ ವಿತರಣೆ ಪ್ರಾರಂಭಿಸಲು ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಸಿಎಂ ಸೂಚಿಸಿದರು.

More articles

Latest article