ಬೆಂಗಳೂರು: ಹೊಸ ವರ್ಷಾಚರಣೆಗೆ ನೀವು ಎಂಜಿ ರಸ್ತೆಗೆ ಹೊರಟಿದ್ದರೆ ಒಮ್ಮೆ ಈ ಸುದ್ದಿಯನ್ನು ಓದಿ ಹೊರಡಿ. ಇಂದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬೆಂಗಳೂರು ಪೊಲೀಸರು ಕಟ್ಟಚ್ಚರ ವಹಿಸಿದ್ದಾರೆ. ವಿಶೇಷವಾಗಿ ಹೊಸ ವರ್ಷಾಚರಣೆಗೆ ಹೆಚ್ಚು ಜನರು ಸೇರುವ ಇಂದಿರಾನಗರ, ಕೋರಮಂಗಲ, ಎಂ ಜಿ ರಸ್ತೆ, ಬಿಗ್ರೇಡ್ ರಸ್ತೆಯಲ್ಲಿ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ. ಈ ಪ್ರದೇಶಗಳಲ್ಲಿ ಮಹಿಳೆಯರ ಸುರಕ್ಷತೆಗೆ ಹೈಲ್ಯಾಂಡ್ ಮತ್ತು ವಾಚ್ ಟವರ್ ಸ್ಥಾಪಿಸಲಾಗಿದೆ. ಶ್ವಾನ ದಳ, ಡ್ರೋನ್ ಕ್ಯಾಮರಾ ಮೂಲಕ ಹೆಚ್ಚಿನ ನಿಗಾ ವಹಿಸಲಾಗಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗಿದೆ.
ಇನ್ನು ಬ್ರಿಗೇಡ್ ರಸ್ತೆಗೆ ಕಾವೇರಿ ಎಂಪೋರಿಯಂ ಕಡೆಯಿಂದ ಮಾತ್ರ ಪ್ರವೇಶ ಕಲ್ಪಿಸಲಾಗಿದ್ದು, ಏಕಮುಖ ಸಂಚಾರ ಮಾತ್ರ ಇರುತ್ತದೆ. ರಾತ್ರಿ 1 ಗಂಟೆಯವರೆಗೆ ಹೊಸ ವರ್ಷ ಆಚರಣೆಗೆ ಸಮಯ ನಿಗದಿ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಹಿನ್ನಲೆಯಲ್ಲಿ 11 ಗಂಟೆ ನಂತರ ಎಂ.ಜಿ. ರಸ್ತೆ ಮೆಟ್ರೊ ಸ್ಟೇಷನ್ ಬಂದ್ ಮಾಡಲಾಗುತ್ತದೆ. ಕೇವಲ ಬರುವವರಿಗೆ ಮಾತ್ರ ಅವಕಾಶ ಇರುತ್ತದೆ. ಮರಳಿ ಹೋಗಲು ಹೋಗಲು ಟ್ರಿನಿಟಿ ಸರ್ಕಲ್ ಅಥವಾ ಕಬ್ಬನ್ ಪಾರ್ಕ್ ಸ್ಟೇಷನ್ ಗೆ ಹೋಗಬೇಕಾಗುತ್ತದೆ.
ಅನುಚಿತ ವರ್ತನೆ ತೋರುವರಿಗೆ ಕಠಿಣ ಶಿಕ್ಷೆ ಕಾದಿರುತ್ತದೆ. ಬೈಕ್ಗಳಲ್ಲಿ ಪದೇ ಪದೇ ಓಡಾಡುವಂತಿಲ್ಲ. ವಿಷ್ ಮಾಡುವ ನೆಪದಲ್ಲಿ ಕೂಗಾಟ, ಪೀಪಿ ಊದುವಂತಿಲ್ಲ. ವಿಚಿತ್ರ ರೀತಿಯ ಮಾಸ್ಕ್ ಧರಿಸುವಂತಿಲ್ಲ. ಮಕ್ಕಳು, ವೃದ್ಧರು ಮತ್ತು ಹೆಣ್ಣುಮಕ್ಕಳಿಗೆ ತೊಂದರೆ ನೀಡುವಂತಿಲ್ಲ ಎಂದು ಅಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನ ಎಲ್ಲಾ ಮೇಲ್ಸೇತುವೆಗಳನ್ನು ಮುಚ್ಚಲಾಗುತ್ತದೆ. ಓಲಾ, ಊಬರ್ ಪ್ರತಿನಿಧಿಗಳ ಜತೆಯೂ ಸಭೆ ನಡೆಸಿದ್ದು, ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ ಬಳಿ ಪಿಕಪ್ ಮತ್ತು ಡ್ರಾಪ್ ಪಾಯಿಂಟ್ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಹಣಕ್ಕೆ ಬೇಡಿಕೆ ಇಡದಂತೆ ಸೂಚನೆ ಕೊಡಲಾಗಿದೆ. ಆ್ಯಂಡ್ ಡ್ರೈವ್ ಮತ್ತು ವ್ಹೀಲಿಂಗ್ ಮಾಡುವರ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಕುಡಿದು ವಾಹನ ಓಡಿಸುವವರ ಚಾಲನಾ ಪರವಾನಗಿಯನ್ನು ರದ್ದು ಗೊಳಿಸಲಾಗುತ್ತದೆ.
ಎಂಜಿ ರಸ್ತೆ, ಬಿಗ್ರೇಡ್ ರಸ್ತೆ, ಕ್ಲಬ್, ಪಬ್ ಗಳು, ರೆಸ್ಟೋರೆಂಟ್ ಗಳಲ್ಲಿ ಯಾರೊಬ್ಬರೂ ಫೇಸ್ ಮಾಸ್ಕ್ ಧರಿಸುವಂತಿಲ್ಲ. ಡಿಸೆಂಬರ್ 31 ರಾತ್ರಿ 8 ಗಂಟೆಯಿಂದ ಜನವರಿ 1ರ ಬೆಳಗ್ಗೆವರೆಗೆ ಎಂ.ಜಿ. ರಸ್ತೆಯಿಂದ ಅನಿಲ್ ಕುಂಬ್ಳೆ ಸರ್ಕಲ್, ಮೇಯೋ ಹಾಲ್ ಬಳಿಯ ರೆಸಿಡೆನ್ಸಿ ರಸ್ತೆ ಜಂಕ್ಷನ್ ವರೆಗೆ ಸಂಚಾರ ನಿಷೇಧಿಸಲಾಗಿದೆ. ಸಿಸಿಟಿವಿ ಮತ್ತು ಭದ್ರತಾ ಕ್ರಮಗಳನ್ನು ಅನುಸರಿಸುವಂತೆ ಬಾರ್ ಆ್ಯಂಡ್ ರೆಸ್ಟೋರೆಂಟ್ ಮಾಲೀಕರಿಗೆ ಸೂಚನೆ ನೀಡಲಾಗಿದೆ. ನಗರದ ಹೊರವಲಯಗಳಲ್ಲಿ ನಡೆಯುವ ರೇವ್ ಪಾರ್ಟಿಗಳ ಮೇಲೆ ನಿಗಾ ಇಡಲಾಗಿದೆ.
ಭದ್ರತೆಗಾಗಿ 5 ಡಿಸಿಪಿ, 18 ಎಸಿಪಿ, 41 ಪೊಲೀಸ್ ಇನ್ಸ್ಪೆಕ್ಟರ್ ಸೇರಿದಂತೆ 2572 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಪೊಲೀಸ್ ಕಿಯೋಸ್ಕ್ಗಳನ್ನ ನಿರ್ಮಾಣ ಮಾಡಲಾಗುತ್ತದೆ. ಇಡೀ ಬೆಂಗಳೂರಿನಲ್ಲಿ ಭದ್ರತೆಗೆ 11830 ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, 2 ಹೆಚ್ಚುವರಿ ಪೊಲೀಸ ಆಯುಕ್ತರು, 1 ಜಂಟಿ ಪೊಲೀಸ್ ಆಯುಕ್ತರು, 15 ಡಿಸಿಪಿ, 44 ಎಸಿಪಿಗಳು, 135 ಇನ್ಸ್ಪೆಕ್ಟರ್ಗಳು, ಸಿವಿಲ್ ಡಿಫೆನ್ಸ್ 800, 1048 ಮಹಿಳಾ ಸಿಬ್ಬಂದಿ, 72 ಕೆಎಸ್ಆರ್ಪಿ ತುಕಡಿ, 21 ಸಿಎಆರ್ ತುಕಡಿಯನ್ನು ಬಂದೋಬಸ್ತ್ ವ್ಯವಸ್ಥೆಗೆ ನಿಯೋಜಿಸಲಾಗಿದೆ.