ಬೆಂಗಳೂರು: ಜೂನ್ 4 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಪಡಲು ಆರ್ ಸಿಬಿ ವ್ಯವಸ್ಥಾಪಕರೇ ಕಾರಣ ಎಂದು ಹೈಕೋರ್ಟ್ ಗೆ ಸಲ್ಲಿಸಿರುವ ವರದಿಯಲ್ಲಿ ರಾಜ್ಯ ಸರ್ಕಾರ ಹೇಳಿದೆ.
ಆರ್ ಸಿಬಿ ಮ್ಯಾನೇಜ್ ಮೆಂಟ್, ಡಿಎನ್ ಎ ನೆಟ್ ವರ್ಕ್ ಮತ್ತು ಕೆಎಸ್ ಸಿಎ ಏಕಪಕ್ಷೀಯವಾಗಿ ಸಂಭ್ರಮಾಚರಣೆ ಹಮ್ಮಿಕೊಳ್ಳಲು ತೀರ್ಮಾನಿಸಿದ್ದವು. ಇಂತಹ ಸಂಭ್ರಮಾಚರಣೆ ನಡೆಸಲು ಪೂರ್ವಭಾವಿಯಾಗಿ ಪೊಲೀಸರನ್ನು ಸಂಪರ್ಕಿಸಲಿರಲಿಲ್ಲ ಮತ್ತು ಅಗತ್ಯ ಪರವಾನಗಿಯನ್ನು ಪಡೆದುಕೊಂಡಿರಲಿಲ್ಲ ಎಂದು ವರದಿಯಲ್ಲಿ ತಿಳಿಸಿದೆ. ರಾಜ್ಯ ಸರ್ಕಾರ ಈ ವರದಿಯನ್ನು ಜೂನ್12 ರಂದು ಹೈಕೋರ್ಟ್ ಗೆ ಸಲ್ಲಿಸಿದೆ. ಹೈಕೋರ್ಟ್ ಈ ವರದಿಯನ್ನು ಜುಲೈ 8 ರಂದು ಬಹಿರಂಗಪಡಿಸಿದೆ.
ಜತೆಗೆ ಆರ್ ಸಿ ಬಿ ತನ್ನ ಸಾಮಾಜಿಕ ಜಾಲತಾಣದಲ್ಲಿ ವಿರಾಟ್ ಕೊಹ್ಲಿ ಮಾತನಾಡಿದ್ದ ವಿಡಿಯೋವನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದೂ ಸಹ ಭಾರಿ ಸಂಖ್ಯೆಯಲ್ಲಿ ಜನ ಸೇರಲು ಕಾರಣವಾಯಿತು ಎಂದೂ ತಿಳಿಸಿದೆ.
ಡಿಎನ್ ಎ ಪರವಾಗಿ ಕೆಎಸ್ ಸಿಎ ಜೂನ್ 3ರಂದು ಸಂಜೆ 6.30ಕ್ಕೆ ಕಬ್ಬನ್ ಪಾರ್ಕ್ ಪೊಲೀಸರಿಗೆ ಇಂದಿನ ಪಂದ್ಯದಲ್ಲಿ ಆರ್ ಸಿಬಿ ಗೆಲುವು ಸಾಧಿಸಿದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿ ತಂಡಕ್ಕೆ ಸಂಭ್ರಮಾಚರಣೆ ಹಮ್ಮಿಕೊಳ್ಳುವುದಾಗಿ ಮಾಹಿತಿ ನೀಡಿತ್ತು. ಆದರೆ ಪೊಲೀಸರು ಸಿಬ್ಬಂದಿ ಕೊರತೆಯಿಂದಾಗಿ ಅನುಮತಿ ನೀಡಲು ನಿರಾಕರಿಸಿದ್ದರು. ಆದರೂ ಸಹ ಮರುದಿನ ಬೆಳಗ್ಗೆ 7.01 ನಿಮಿಷಕ್ಕೆ ಆರ್ ಸಿಬಿ ಯು ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ವಿಜಯೋತ್ಸವ ಮೆರವಣಿಗೆ ಹಮ್ಮಿಕೊಂಡಿರುವುದಾಗಿ ಸಾಮಾಜಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿತ್ತು.
ಸಂಭ್ರಮಾಚರಣೆ ಕುರಿತು ಆರ್ ಸಿಬಿ ಮಾಹಿತಿ ನೀಡಿತ್ತೇ ಹೊರತು ಅನುಮತಿ ಪಡೆದುಕೊಂಡಿರಲಿಲ್ಲ. ತಯಾರಿ ಮಾಡಿಕೊಳ್ಳಲು ಎಷ್ಟು ಅಭಿಮಾನಿಗಳು ಸೇರಬಹುದು ಎನ್ನುವುದೂ ಸೇರಿದಂತೆ ಯಾವುದೇ ವಿಷಯವನ್ನು ಸಂಬಂಧಪಟ್ಟ ಇಲಾಖೆಗಳೊಂದಿಗೆ ಹಂಚಿಕೊಂಡಿರಲಿಲ್ಲ ಎಂದೂ ರಾಜ್ಯ ಸರ್ಕಾರ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.