ಬೆಂಗಳೂರು: ಬೆಂಗಳೂರಿನ ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವ ಈಗಾಗಲೇ ಆರಂಭವಾಗಿದೆ. ಏಪ್ರಿಲ್ 13, ಭಾನುವಾರ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಕರಗ ಮೆರವಣಿಗೆ ಹಾದುಹೋಗಲಿದೆ. ಹೀಗಾಗಿ ಸಂಚಾರ ದಟ್ಟಣೆ ನಿಯಂತ್ರಿಸಲು ಹಾಗೂ ಸುಗಮ ಸಂಚಾರಕ್ಕಾಗಿ ಬೆಂಗಳೂರು ಸಂಚಾರಿ ಪೊಲೀಸರು ಕೆಲವು ಕ್ರಮಗಳನ್ನು ಕೈಗೊಂಡಿದ್ದಾರೆ.
ಇತಿಹಾಸದ ಪ್ರಸಿದ್ದ ಬೆಂಗಳೂರು ಕರಗ ಉತ್ಸವದ ಮೆರವಣಿಗೆ ಏಪ್ರಿಲ್ 12 ಮತ್ತು 13 ರಂದು ಸಿಟಿ ಮಾರ್ಕೆಟ್, ಚಾಮರಾಜಪೇಟೆ ಹಾಗೂ ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆಯಲಿದೆ. ಹೀಗಾಗಿ ಕೆಲವು ರಸ್ತೆಗಳಲ್ಲಿ ಸಂಚಾರ ನಿರ್ಭಂಧಿಸಲಾಗಿದ್ದು ಪರ್ಯಾಯ ಮಾರ್ಗವನ್ನು ಬಳಸಲು ಸಂಚಾರಿ ಪೊಲೀಸ್ ವಿಭಾಗ ಕೋರಿದೆ.
ಸಿಟಿ ಮಾರ್ಕೆಟ್, ಚಾಮರಾಜಪೇಟೆ ಹಾಗೂ ಉಪ್ಪಾರಪೇಟೆ ವ್ಯಾಪ್ತಿಯಲ್ಲಿ ಹಾಗೂ ಧರ್ಮರಾಯಸ್ವಾಮಿ ದೇವಸ್ಥಾನ ವ್ಯಾಪ್ತಿಯಲ್ಲಿ ಕರಗ ಮೆರವಣಿಗೆ ಸಾಗುವಾಗ ವಾಹನ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಅವೆನ್ಯೂ ರಸ್ತೆ, ಮಾರುಕಟ್ಟೆ ವೃತ್ತ, ಕಾಟನ್ ಪೇಟೆ, ಕೆಂಪೇಗೌಡ ರಸ್ತೆ ಮತ್ತು ಚಿಕ್ಕಪೇಟೆಯಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಏಪ್ರಿಲ್ 12 ಶನಿವಾರ ರಾತ್ರಿ 10 ಗಂಟೆಯಿಂದ ಏಪ್ರಿಲ್ 13 ರ ಭಾನುವಾರ ಸಂಜೆ 6 ರ ವರೆಗೆ ಸಂಚಾರ ನಿರ್ಬಂಧ ಚಾಲ್ತಿಯಲ್ಲಿರಲಿದೆ.
ಪರ್ಯಾಯ ಮಾರ್ಗಗಳು
- ಮಾರ್ಕೆಟ್ ವೃತ್ತದಿಂದ ಕೆ.ಜಿ. ರಸ್ತೆ, ಆನಂದರಾವ್ ವೃತ್ತದ ಮೂಲಕ ಮೆಜೆಸ್ಟಿಕ್ ಕಡೆಗೆ ಚಲಿಸುವುದು.
- ಎ ಎಸ್ ಚಾರ್ ಸ್ಟ್ರೀಟ್ ನಿಂದ ಸಿಸಿಬಿ ಜಂಕ್ಷನ್, ಮೆಡಿಕಲ್ ಜಂಕ್ಷನ್, ಮಿನರ್ವ ವೃತ್ತ ಮತ್ತು ಜೆಸಿ ರಸ್ತೆ ಮೂಲಕ ಟೌನ್ ಹಾಲ್ ಕಡೆಗೆ ಚಲಿಸುವುದು.
- ಶಾಂತಲಾ ಜಂಕ್ಷನ್ ನಿಂದ ಖೋಡೆ ಜಂಕ್ಷನ್, ಹುಣಸೆಮರ ಜಂಕ್ಷನ್ ಟ್ಯಾಂಕ್ ಬಂಡ್ ರಸ್ತೆ ಮೂಲಕ ಮೈಸೂರು ರಸ್ತೆಯ ಕಡೆಗೆ ಚಲಿಸುವುದು.
ಬೆಂಗಳೂರಿನ ಇತಿಹಾಸ ಸಾರುವ ಐತಿಹಾಸಿಕ ಕರಗ ಒಟ್ಟು 11 ದಿನಗಳ ಕಾಲ ನಡೆಯುತ್ತಿದ್ದು, ಏಪ್ರಿಲ್ 14 ರಂದು ಮುಕ್ತಾಯಗೊಳ್ಳಲಿದೆ.