ಬೆಂಗಳೂರು: ಬೆಂಗಳೂರು ನಗರದ ಕಲಾಸಿಪಾಳ್ಯ ಬಿಎಂಟಿಸಿ ಬಸ್ ನಿಲ್ದಾಣದ ಆವರಣದಲ್ಲಿರುವ ಶೌಚಾಲಯದ ಸಮೀಪ ಬ್ಯಾಗ್ ವೊಂದರಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾಗಿದ್ದು, ಕೆಲ ಸಮಯ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಸ್ಥಳದಲ್ಲಿ ಇಡಲಾಗಿದ್ದ ಬ್ಯಾಗ್ ನಲ್ಲಿ ಜಿಲೆಟಿನ್ ಕಡ್ಡಿಗಳು ಹಾಗೂ ಡಿಟೊನೇಟರ್ ಪತ್ತೆಯಾಗಿದೆ. ಸ್ಥಳಕ್ಕೆ ಕಲಾಸಿಪಾಳ್ಯ ಠಾಣೆಯ ಪೊಲೀಸರು, ಬಾಂಬ್ ತಪಾಸಣೆ ದಳ ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಆಗಮಿಸಿ ತಪಾಸಣೆ ನಡೆಸಿದರು.
ಈ ಸ್ಫೋಟಕವನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ಚುರುಕುಗೊಳಿಸಿದ್ದಾರೆ. ಬಸ್ ನಿಲ್ದಾಣದಲ್ಲಿ ಯಾರು ಜಿಲೆಟಿನ್ ಕಡ್ಡಿಗಳನ್ನು ತಂದಿಟ್ಟರು ಎನ್ನುವುದನ್ನು ಪತ್ತೆ ಮಾಡಲು ಸುತ್ತಮುತ್ತಲಿನ ಸಿಸಿಟಿವಿಗಳ ಪರಿಶೀಲನೆ ನಡೆಸಲಾಗುತ್ತಿದೆ. ಪಶ್ಚಿಮ ವಿಭಾಗ ಡಿಸಿಪಿ ಗಿರೀಶ್ ಮಾತನಾಡಿ, 6 ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ. ವ್ಯಕ್ತಿಯೊಬ್ಬ ಈ ಬ್ಯಾಗ್ ನ ಜೊತೆ ಕುಳಿತಿರುವುದು ಕಂಡುಬಂದಿದ್ದು, ಬಂಡೆ ಹೊಡೆಯುವ ಕಾರ್ಮಿಕರು ಬಿಟ್ಟುಹೋಗಿರುವ ಅನುಮಾನ ಉಂಟಾಗಿದೆ. ಉದ್ದೇಶಪೂರ್ವಕವಾಗಿ ಬಿಟ್ಟು ಹೋಗಿದ್ದಾನೆಯೇ ಅಥವಾ ಮರೆತು ಹೋಗಿದ್ದಾನೆಯೇ ಎಂದು ಪರಿಶೀಲಿಸಲಾಗುತ್ತಿದೆ. ಜೆಲೆಟಿನ್ ಕಡ್ಡಿ ಹೊರತುಪಡಿಸಿ ಬೇರೆ ಸ್ಫೋಟಕ ವಸ್ತುಗಳು ಕಂಡು ಬಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.