ಹಲವು ವೈಶಿಷ್ಠ್ಯಗಳನ್ನು ಒಳಗೊಂಡ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ; ಸಾಧುಕೋಕಿಲ

Most read

ಬೆಂಗಳೂರು: ವಿಶ್ವ ವಿಖ್ಯಾತ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಇದೇ ಮಾರ್ಚ್ 1 ರಿಂದ 8ರವರೆಗೆ ನಡೆಯಲಿದೆ. 16ನೇ ಚಲನಚಿತ್ರೋತ್ಸವ ಇದಾಗಿದ್ದು, ಹಲವು ವಿಶೇಷತೆಗಳನ್ನು ಒಳಗೊಂಡಿರುತ್ತದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲ ತಿಳಿಸಿದ್ದಾರೆ.  ಅವರು ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಾರಿಯ ಚಲನಚಿತ್ರೋತ್ಸವದ ವಿಶೇಷತೆಗಳನ್ನು ಕುರಿತು ಮಾಹಿತಿ ನೀಡಿದರು.

ಈ ಬಾರಿ ಟೆಂಟ್ ಮಾದರಿಯಲ್ಲಿ ಆಯ್ದ ಕೆಲ ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತದೆ. ದಶಕಗಳ ಹಿಂದೆ ಹೇಗೆ ಟೆಂಟ್​ಗಳಲ್ಲಿ ಪ್ರೊಜೆಕ್ಟರ್​ಗಳನ್ನು ಬಳಸಿ ಸಿನಿಮಾ ತೋರಿಸಲಾಗುತ್ತಿತ್ತೊ ಅದೇ ಮಾದರಿಯಲ್ಲಿ ತೆರೆದ ಮೈದಾನದಲ್ಲಿ ಈ ಬಾರಿ ಕೆಲವು ಆಯ್ದ ಸಿನಿಮಾಗಳನ್ನು ಸಿನಿಮಾ ತೋರಿಸಲಾಗುತ್ತದೆ. ‘ಭೂತಯ್ಯನ ಮಗ ಅಯ್ಯು’, ‘ಬಂಗಾರದ ಮನುಷ್ಯ’, ‘ಗಂಧದ ಗುಡಿ’ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳನ್ನು ಟೆಂಟ್ ಮಾದರಿಯಲ್ಲಿ ಪ್ರದರ್ಶಿಸಲು ನಿರ್ಧರಿಸಲಾಗಿದೆ ಎಂದರು.

ಈ ಬಾರಿ ಸಿನಿಮಾಗಳಲ್ಲಿ ಎಐ ಬಳಕೆ ಬಗ್ಗೆ ಕಾರ್ಯಗಾರವನ್ನು ಚಿತ್ರೋತ್ಸವದ ಭಾಗವಾಗಿ ಆಯೋಜಿಸಲಾಗಿದೆ. ಅದರ ಜೊತೆಗೆ ಸಮಕಾಲಿನ ಹೆಸರಾಂತ ನಿರ್ದೇಶಕರುಗಳು, ಸಿನಿಮಾಟೊಗ್ರಾಫರ್​ಗಳನ್ನು ಕರೆಸಿ ಸಂವಾದ ಏರ್ಪಡಿಸಲಾಗಿದೆ. ಅಮರನ್’, ‘ಮಂಜುಮೆಲ್ ಬಾಯ್ಸ್’ ಸೇರಿದಂತೆ ಇತ್ತೀಚೆಗೆ ಹೆಸರು ಮಾಡಿದ ಹಲವು ಸಿನಿಮಾಗಳ ನಿರ್ದೇಶಕರು ತ್ಮ ಅನುಭವ ಕಥನಗಳನ್ನು ಹಂಚಿಕೊಳ್ಳಲಿದ್ದಾರೆ. ಸಿನಿಮಾಟೊಗ್ರಾಫರ್​ಗಳಾದ ರವಿವರ್ಮನ್, ಸಂತೋಶ್ ಶಿವನ್ ಇನ್ನಿತರೆ ಪ್ರಮುಖರು ಸಹ ಆಗಮಿಸಲಿದ್ದಾರೆ. ಆಸ್ಕರ್ ವಿಜೇತ ಎಂಎಂ ಕೀರವಾಣಿ ಅವರೂ ಭಾಗವಹಿಸಲಿದ್ದಾರೆ.

ಸರ್ವಜನಾಂಗದ ಶಾಂತಿಯ ತೋಟ’ ಥೀಮ್​ನ ಅಡಿ ಭ್ರಾತೃತ್ವ ಸಾರುವ ಕೆಲವು ಸಿನಿಮಾಗಳನ್ನು ಸಹ ಪ್ರದರ್ಶಿಸಲಾಗುತ್ತಿದೆ. ಕೆಲವು ಹಳೆಯ ಸಿನಿಮಾಗಳನ್ನು ಡಿಜಿಟಲೈಜ್ ಮಾಡಿ ಅವುಗಳನ್ನು ಸಹ ಸಿನಿಮೋತ್ಸವದಲ್ಲಿ ಪ್ರದರ್ಶಿಸಲಾಗುತ್ತದೆ.

ಅಧ್ಯಕ್ಷ ಸಾಧು ಕೋಕಿಲ ನೀಡಿರುವ ಮಾಹಿತಿಯಂತೆ ಸಿನಿಮೋತ್ಸವದಲ್ಲಿ ಪ್ರದರ್ಶಿಸಲಾಗುವ ಸಿನಿಮಾಗಳ ಆಯ್ಕೆ ಈಗಾಗಲೇ ಆಗಿದೆ. ಕಾರ್ಯಗಾರ, ಸಂವಾದಗಳಲ್ಲಿ ಭಾಗವಹಿಸುವ ಅತಿಥಿಗಳ ಆಯ್ಕೆಯೂ ಆಗಿದೆ. ಮುಖ್ಯ ಕಾರ್ಯಕ್ರಮಗಳಲ್ಲಿ ಭಾಗಿ ಆಗಬೇಕಿರುವ ಅತಿಥಿಗಳ ಆಯ್ಕೆ ಆಗಬೇಕಿದೆ. 16ನೇ ಬೆಂಗಳೂರು ಚಲನಚಿತ್ರೋತ್ಸವವು ಮಾರ್ಚ್ 1 ರಿಂದ 8ರ ವರೆಗೆ ಒರಾಯಿನ್ ಮಾಲ್​ನಲ್ಲಿ ನಡೆಯಲಿದೆ. ಪಾಸ್​ಗಳು ಆನ್​ಲೈನ್ ಮತ್ತು ಆಫ್​ಲೈನ್​ನಲ್ಲಿ ಸಿಗಲಿವೆ.

More articles

Latest article