ಬೆಂಗಳೂರು: ನಗರದಲ್ಲಿ ಅಕ್ರಮ ಕಟ್ಟಡ ನಿರ್ಮಾಣಗಳನ್ನು ಪತ್ತೆ ಹಚ್ಚಲು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿಕೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. 2025- 26ನೇ ಸಾಲಿನ ಬಿಬಿಎಂಪಿ ಬಜೆಟ್ ಕುರಿತು ಬೆಂಗಳೂರು ನಗರದ ಶಾಸಕರ ಜೊತೆ ಸಭೆ ನಡೆಸಿದ ನಂತರ ಅವರು ಮಾತನಾಡಿದರು.
ನಗರದಲ್ಲಿ ಅನುಮತಿ ನೀಡಿದ್ದಕ್ಕಿಂತ ಹೆಚ್ಚು ವಿಸ್ತೀರ್ಣ ಹಾಗೂ ಮಹಡಿಗಳನ್ನು ಅಕ್ರಮವಾಗಿ ಕಟ್ಟಿಕೊಂಡಿದ್ದಾರೆ. ಇಂತಹ ಅಕ್ರಮಗಳನ್ನು ʼಎಐʼ ತಂತ್ರಜ್ಞಾನದ ಮೂಲಕ ಪತ್ತೆಹಚ್ಚಲಾಗುತ್ತದೆ. ಅನೇಕರು, ನಿರ್ಮಾಣಕ್ಕೆ ತಕ್ಕಂತೆ ತೆರಿಗೆ ಪಾವತಿ ಮಾಡುತ್ತಿಲ್ಲ. ನಗರದ ಎಲ್ಲ ಮನೆಗಳು ತೆರಿಗೆ ವ್ಯಾಪ್ತಿಗೆ ಬರಲೇಬೇಕು, ಅವರು ತೆರಿಗೆ ಕಟ್ಟಲೇಬೇಕು. ಇದರಲ್ಲಿ ರಾಜಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮನೆ, ನಿವೇಶನಗಳ ಮಾಲೀಕರ ಜೊತೆ ಒಳಒಪ್ಪಂದ ಮಾಡಿಕೊಂಡು ಕಂದಾಯ ಬಡಾವಣೆಗಳ ಅಕ್ರಮಗಳಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಲು ಉನ್ನತ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಮನೆ ಬಾಗಿಲಿಗೆ ತೆರಳಿ ಉಚಿತವಾಗಿ ಖಾತೆ ನೀಡುವ ವಿನೂತನ ವ್ಯವಸ್ಥೆಯನ್ನು ದೇಶದಲ್ಲಿಯೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಜಾರಿಗೆ ತರಲಾಗಿದೆ. ಈ ಕಾರ್ಯಕ್ರಮಕ್ಕೆ ಏಪ್ರಿಲ್‌ನಿಂದ ಚಾಲನೆ ದೊರೆಯಲಿದೆ ಎಂದು ಹೇಳಿದರು.
ದಾಖಲೆ ಅನುದಾನ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಿಬಿಎಂಪಿಗೆ ನೀಡುತ್ತಿರುವ ಅನುದಾನವನ್ನು ರೂ. 4 ಸಾವಿರ ಕೋಟಿಯಿಂದ ರೂ. 7 ಸಾವಿರ ಕೋಟಿಗೆ ಹೆಚ್ಚಿಸಿದೆ. ಎಫ್ ಎ ಆರ್, ಜಾಹೀರಾತಿನಿಂದ ಪಾಲಿಕೆಗೆ ಆದಾಯ ಬರುತ್ತದೆ ಎಂದು ಅಂದಾಜು ಮಾಡಲಾಗಿತ್ತು. ನ್ಯಾಯಾಲಯ ಜಾಹೀರಾತು ವಿಚಾರದಲ್ಲಿ ಮಧ್ಯಪ್ರವೇಶ ಮಾಡಿದ್ದರಿಂದ ನಿರೀಕ್ಷಿತ ಆದಾಯವನ್ನು ನಿರೀಕ್ಷಿಸುವಂತಿಲ್ಲ. ನ್ಯಾಯಲಯ ಈ ಹಿಂದೆ ಎರಡು ಮೂರು ವಿಚಾರದಲ್ಲಿ ಹೀಗೆ ಮಧ್ಯಪ್ರವೇಶ ಮಾಡಿರುವುದರಿಂದ ನಾವು ಜಾಗೃತರಾಗಿ ಬಜೆಟ್ ಮಂಡಿಸಬೇಕಾಗುತ್ತದೆ ಎಂದರು.
27,565 ಬೀದಿಬದಿ ವ್ಯಾಪಾರಿಗಳು ಪಾಲಿಕೆಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ನೋಂದಣಿ ಅವಧಿಯನ್ನು ಏಪ್ರಿಲ್‌ವರೆಗೆ ವಿಸ್ತರಿಸಲಾಗುವುದು. ಗಡುವು ಕೊನೆಗೊಂಡ ಬಳಿಕ ನೋಂದಣಿಯಾಗದವರನ್ನು ತೆರವುಗೊಳಿಸಲಾಗುವುದು. ಈ ವರ್ಷ ಪಾಲಿಕೆಯಿಂದ ಸುಮಾರು 10 ಸಾವಿರ ತಳ್ಳುವ ಗಾಡಿ ನೀಡಲು ಉದ್ದೇಶಿಸಲಾಗಿದೆ. ನಾಲ್ಕು ಮಾದರಿಯ ತಳ್ಳುಗಾಡಿಗಳನ್ನು ಪಾಲಿಕೆ ಸಿದ್ಧಪಡಿಸಿದೆ. ಒಂದು ಕುಟುಂಬಕ್ಕೆ ಒಂದು ಗಾಡಿಯನ್ನು ಮಾತ್ರ ನೀಡಲಾಗುತ್ತದೆ ಎಂದು ತಿಳಿಸಿದರು.
ಸಚಿವರಾದ ರಾಮಲಿಂಗಾರೆಡ್ಡಿ, ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್, ಜಮೀರ್ ಅಹ್ಮದ್ ಖಾನ್, ಶಾಸಕರಾದ ಎಸ್.ಟಿ. ಸೋಮಶೇಖರ್, ರಿಜ್ವಾನ್ ಅರ್ಷದ್, ಎನ್.ಎ. ಹ್ಯಾರಿಸ್, ಎ.ಸಿ. ಶ್ರೀನಿವಾಸ್, ನಾಗರಾಜ್ ಯಾದವ್, ಬಿಬಿಎಂಪಿ ಆಡಳಿತಾಧಿಕಾರಿ ಉಮಾಶಂಕರ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಉಪಸ್ಥಿತರಿದ್ದರು.