ಬೆಂಗಳೂರು: ಹಾರೋಹಳ್ಳಿ ಸಮೀಪದ ಬನವಾಸಿ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ; ದೂರು ದಾಖಲಿಸದ ಪೊಲೀಸರು

Most read

ಹಾರೋಹಳ್ಳಿ: ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣಗೊಳ್ಳಲು ಸಿದ್ದವಾಗಿರುವ ರಾಮನಗರ ಜಿಲ್ಲೆ ಹಾರೋಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬನವಾಸಿ ಗ್ರಾಮದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ಈ ಗ್ರಾಮದ

ಮಾರಮ್ಮನ ಜಾತ್ರೆಯಲ್ಲಿ ಭಾಗವಹಿಸಲು ತಮಗೂ ಸಮಾನ ಅವಕಾಶ ನೀಡಬೇಕು ಎಂದು ಬೇಡಿಕೆ ಇಟ್ಟ ಬನವಾಸಿ ಗ್ರಾಮದ ದಲಿತರಿಗೆ ಸವರ್ಣೀಯರು ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ, ದಲಿತರು ಹಾರೋಹಳ್ಳಿ ಪೊಲೀಸ್ ಠಾಣೆಗೆ ಏಳು ಮಂದಿ ಸವರ್ಣಿಯರ ವಿರುದ್ಧ ದೂರು ನೀಡಿ ಎರಡು ದಿನಗಳಾದರೂ ಇದುವರೆಗೂ ಪ್ರಕರಣ ದಾಖಲಿಸಿಕೊಂಡಿಲ್ಲ.

ಈ ಗ್ರಾಮದ ಅಂಗಡಿಗಳಲ್ಲಿ ದಲಿತರಿಗೆ ಸಾಮಾನು ಮಾರಾಟ ಮಾಡಬಾರದು, ಡೇರಿಗಳಲ್ಲಿ ಹಾಲು ಹಾಕಿಸಿಕೊಳ್ಳಬಾರದು ಮತ್ತು ನೀಡಬಾರದು, ಶುದ್ಧ ಕುಡಿಯುವ ನೀರು ಮುಟ್ಟಲು ಬಿಡಬಾರದು ಹಾಗೂ ಕೃಷಿ ಕೆಲಸಗಳಿಗೆ ದಲಿತರನ್ನು ಕರೆಯಬಾರದು ಎಂಬ ಷರತ್ತು ಹಾಕಿದ್ದಾರೆ. ಈ ನಿಯಮವನ್ನು ಉಲ್ಲಂಘಿಸಿದರೆ ರೂ.10 ಸಾವಿರ ದಂಡ ಕಟ್ಟಬೇಕು ಎಂದು ದಲಿತ ವ್ಯಕ್ತಿಯಿಂದಲೇ ಗ್ರಾಮದಲ್ಲಿ ಡಂಗೂರ ಸಾರಿಸಿದ್ದಾರೆ ಎಂದು ತಿಳಿದು ಬಂದಿದೆ.

ಮೇ 18ರಂದು ಈ ಘಟನೆ ನಡೆದಿದ್ದು, ತಹಶೀಲ್ದಾರ್ ಮತ್ತು ಪೊಲೀಸರಿಗೆ ದಲಿತರು ದೂರು ನೀಡಿದ್ದರೂ ಪ್ರಕರಣ ದಾಖಲಾಗಿಲ್ಲ. ವಿಷಯ ತಿಳಿದು ಸಮಾಜ ಕಲ್ಯಾಣ ಇಲಾಖೆಯ ಕನಕಪುರ ತಾಲ್ಲೂಕಿನ ಸಹಾಯಕ ನಿರ್ದೇಶಕರು ಸಹ ಗ್ರಾಮಕ್ಕೆ ದೌಡಾಯಿಸಿ ದಲಿತರ ಅಹವಾಲು ಆಲಿಸಿದ್ದಾರೆ.

ಹಬ್ಬದ ಆಚರಣೆ ಕುರಿತು ಬನವಾಸಿ, ಜುಟ್ಟೇಗೌಡನವಲಸೆ ಹಾಗೂ ವಡೇರಹಳ್ಳಿ ಗ್ರಾಮದ ಮುಖಂಡರ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಭಾಗವಹಿಸಿದ್ದ ಸವರ್ಣೀಯ ಮುಖಂಡರು ಹಿಂದಿನಿಂದ ನಡೆದುಕೊಂಡು ಬಂದಿರುವಂತೆ ದಲಿತರು ಹಬ್ಬದಲ್ಲಿ ಭಾಗವಹಿಸಬಾರದು ಎಂದು ಆದೇಶಿಸಿದ್ದರು.

ಈ ನಿಯಮಕ್ಕೆ ಆಕ್ಷೇಪಿಸಿದ್ದ ದಲಿತರು, ಈ ರೀತಿ ತಾಕೀತು ಮಾಡುವುದು ಕಾನೂನಿಗೆ ವಿರುದ್ಧವಾಗುತ್ತದೆ. ನಾವೂ ಸಹ ನಿಮ್ಮೊಂದಿಗೆ ಸಾಮರಸ್ಯದಿಂದ ಹಬ್ಬದಲ್ಲಿ ಪಾಲ್ಗೊಳ್ಳಲು ಅವಕಾಶ ಕೊಡಿ ಎಂದು ವಾದಿಸಿದ್ದರು. ಇದರಿಂದ ಕೆರಳಿದ ಸವರ್ಣೀಯರು ದಲಿತರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಇದರಿಂದ ನೊಂದ ದಲಿತರು ಸಭೆಯಿಂದ ಹೊರನಡೆದಿದ್ದರು.

ಮೂರು ಗ್ರಾಮಗಳ ಸವರ್ಣೀಯ ಮುಖಂಡರು, ಬನವಾಸಿಯ 12 ದಲಿತ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದರು. ಇದರಿಂದ ಕೆರಳಿದ ದಲಿತರು ಅದೇ ಗ್ರಾಮದ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ರವಿಕುಮಾರ್ ಸೇರಿದಂತೆ ಸವರ್ಣೀಯ ಮುಖಂಡರ ವಿರುದ್ಧ ತಹಶೀಲ್ದಾರ್ ಮತ್ತು ಹಾರೋಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸಾಮಾಜಿಕ ಬಹಿಷ್ಕಾರ ಹಾಕಿರುವ ಗ್ರಾಮಕ್ಕೆ ಭೇಟಿ ನೀಡಿ ದಲಿತ ಸಮುದಾಯದವರ ಜೊತೆ ಸಭೆ ನಡೆಸಿದ್ದೇನೆ. ಅಲ್ಲಿನ ವಾಸ್ತವ ಸ್ಥಿತಿ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದಿರುವೆ. ನಾಳೆ ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ  ಎಂದು ಕನಕಪುರ  ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಜೈಪ್ರಕಾಶ್ ತಿಳಿಸಿದ್ದಾರೆ.  

ದೂರು ನೀಡಿಲ್ಲ ಎಂದು ಪೊಲೀಸರು ವಾದಿಸುತ್ತಿದ್ದರೆ ದೂರು ಕೊಟ್ಟರೂ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದೆ ನಿರ್ಲಕ್ಷ್ಯ ತೋರಿದ್ದಾರೆ. ತಕ್ಷಣ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಎಸ್‌ಪಿ ಕಚೇರಿ ಎದುರು ಪ್ರತಿಭಟಿಸಲಾಗುವುದು ದಲಿತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

More articles

Latest article