ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವವರು ನಿಮ್ಮ ಕಣ್ಣಿಗೆ ಗೋಚರಿಸುತ್ತಿದ್ದಾರೆಯೇ? ಹಾಗಾದರೆ ಇನ್ನು ಸುಮ್ಮನಿರಬೇಡಿ, ಕಸ ಎಸೆಯುವವರ ಫೋಟೋ ತೆಗೆದು 9448197197 ಈ ನಂಬರ್ಗೆ ಕಳಿಸಿದರೆ ಬಿಬಿಎಂಪಿ ಕ್ರಮ ತೆಗೆದುಕೊಳ್ಳಲಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸದಾ ಶ್ರಮವಹಿಸುವ ಪೌರಕಾರ್ಮಿಕರು ದಿನ ಬಿಟ್ಟು ದಿನ ಕಸ ಸಂಗ್ರಹಕ್ಕೆ ಮನೆಮನೆಗೆ ಬರುತ್ತಾರೆ. ಆದರೂ, ನಗರದ ನಿವಾಸಿಗಳು ಕಸಸಂಗ್ರಹದ ವಾಹನ ಬರುವ ವೇಳೆಗೆ ಮಲಗಿರುತ್ತಾರೆ ಇಲ್ಲವೇ ಕೆಲಸಕ್ಕೆ ಹೋಗಿರುತ್ತಾರೆ., ಇವರೆಲ್ಲಾ ರಾತ್ರಿ ವೇಳೆ ರಸ್ತೆಯಲ್ಲಿ ಕಸ ಎಸೆದು ಕಣ್ಮರೆಯಾಗುತ್ತಾರೆ. ಇದರಿಂದ ನಗರದ ಸೌಂದರ್ಯಕ್ಕೆ ಧಕ್ಕೆಯುಂಟಾಗುತ್ತದೆ. ಹಾಗಾಗಿ ಕಸದ ಸಮಸ್ಯೆ ಉಲ್ಬಣವಾಗುತ್ತಿದೆಯೇ ಹೊರತು ಕಡಿಮೆಯಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ.
ಪಾಲಿಕೆಯ ತನ್ನ 8 ವಲಯಗಳಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡುವುದನ್ನು ಶಾಶ್ವತವಾಗಿ ತಪ್ಪಿಸಲು ಕ್ರಮ ಕೈಗೊಂಡಿದೆ. ಎಲ್ಲೆಂದರಲ್ಲಿ ಕಸ ಎಸೆದು ಹೋಗುವವರನ್ನು ಪತ್ತೆಹಚ್ಚಲು ಬಿಬಿಎಂಪಿ ವಾಟ್ಸಾಪ್ ಸಂಖ್ಯೆಯೊಂದನ್ನು ಮೀಸಲಿಟ್ಟಿದೆ.
ರಸ್ತೆ ಬದಿ, ಪಾದಚಾರಿ ಮಾರ್ಗ, ಖಾಲಿ ಸ್ಥಳ ಹಾಗೂ ರಾಜಕಾಲುವೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದು ಸಮಾನ್ಯ ದೃಶ್ಯಗಳಾಗಿವೆ. ಕಸದ ಜತೆಗೆ ಕಟ್ಟಡಗಳ ತ್ಯಾಜ್ಯವನ್ನೂ ಎಲ್ಲೆಂದರಲ್ಲಿ ಸುರಿಯುತ್ತಾರೆ. ಕಸ ಸುರಿಯುವ ಸ್ಥಳ (ಬ್ಲಾಕ್ ಸ್ಪಾಟ್) ಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡುವ ಗುರಿ ಹೊಂದಿರುವ ಬಿಬಿಎಂಪಿ, ಇದಕ್ಕಾಗಿ ದೂರು ಕೇಂದ್ರ ಸ್ಥಾಪಿಸಿದ್ದು, ಪ್ರತ್ಯೇಕ ವಾಟ್ಸಾಪ್ ಸಂಖ್ಯೆಯನ್ನು ನೀಡಿದೆ. ಸಾರ್ವಜನಿಕರು ಈ ಮೊಬೈಲ್ ನಂಬರ್ ಗೆ ಫೋಟೋ ಸಹಿತ ಮಾಹಿತಿ ನೀಡಬಹುದಾಗಿದೆ.