ಬೆಂಗಳೂರು : 2026-27ನೇ ವರ್ಷದಲ್ಲಿ ಪೂರ್ವ ನಗರ ಪಾಲಿಕೆಯ ಆದಾಯವು ಪ್ರಾರಂಭಿಕ ಶಿಲ್ಕು ಸೇರಿ ಒಟ್ಟು ಸ್ವೀಕೃತಿ 3890 ಕೋಟಿ ರೂ.ಗಳಷ್ಟು ಇದ್ದು, ಒಟ್ಟು ವೆಚ್ಚ 3889.98 ಕೋಟಿ ರೂ. ಇರಲಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿ ನಗರ ಪಾಲಿಕೆಯಾಗಿ ರಚನೆಯಾದ ನಂತರ ಬೆಂಗಳೂರು ಪೂರ್ವ ನಗರ ಪಾಲಿಕೆಯ ಗರುಡಾಚಾರ್ ಪಾಳ್ಯದ ಎಂ.ಎಲ್.ಆರ್ ಕನ್ವೆಂಷನ್ ಸೆಂಟರ್ ನಲ್ಲಿ ಆಡಳಿತಗಾರರಾದ ಮಹೇಶ್ವರ್ ರಾವ್ ಅಧ್ಯಕ್ಷತೆಯಲ್ಲಿ 2026-27ನೇ ಸಾಲಿನ ಚೊಚ್ಚಲ ಆಯವ್ಯಯವನ್ನು ಆಯುಕ್ತರಾದ ಡಿ.ಎಸ್.ರಮೇಶ್ ಪ್ರಸ್ತುತಪಡಿಸಿದರು.
2026–27ನೇ ಸಾಲಿನಲ್ಲಿ ರೂ.1500 ಕೋಟಿ ಆದಾಯ ಗುರಿ ಹೊಂದಲಾಗಿದ್ದು, ಬೆಂಗಳೂರು ಪೂರ್ವ ನಗರ ಪಾಲಿಕೆಯ ಸ್ವಂತ ಸಂಪನ್ಮೂಲಗಳ ಅಂದಾಜು ಆದಾಯ ರೂ.3354 ಕೋಟಿಗಳಷ್ಟು ಇರಲಿದೆ. ಹೆಚ್ಚುವರಿ ತೆರಿಗೆ ವಿಧಿಸದೆ ಎಸ್ಒಪಿ ಜಾರಿ, ಜಿಬಿಎ ಕಾಯ್ದೆ 2024 ಅನುಸರಣೆ, ಆಸ್ತಿ ತೆರಿಗೆ ಮೌಲ್ಯಮಾಪನ–ವಸೂಲಾತಿ ಬಲಪಡಿಸುವುದು ಹಾಗೂ ತೆರಿಗೆ ಜಾಲದಿಂದ ಹೊರಗಿನ ಆಸ್ತಿಗಳನ್ನು ಗುರುತಿಸಿ ತೆರಿಗೆ ವ್ಯಾಪ್ತಿಗೆ ಒಳಪಡಿಸುವ ಮೂಲಕ ಗುರಿಯನ್ನು ಸಾಧಿಸಲು ಪೂರ್ವ ನಗರ ಪಾಲಿಕೆ ನಿರ್ಧರಿಸಿದೆ.
ಸುಮಾರು 4.50 ಲಕ್ಷ ಕಾಗದ ಖಾತೆಗಳ ಡಿಜಿಟಲೀಕರಣದಿಂದ ಸಂಪರ್ಕರಹಿತ ಇ-ಖಾತಾ ವ್ಯವಸ್ಥೆ ಜಾರಿಯಾಗಿದೆ. ಇದುವರೆಗೆ 1.30 ಲಕ್ಷ ಇ-ಖಾತೆಗಳು ವಿತರಣೆಗೊಂಡಿದ್ದು, ಬಾಕಿ 3.20 ಲಕ್ಷ ಇ-ಖಾತೆಗಳನ್ನು ವಿತರಿಸುವ ಗುರಿ ಹೊಂದಲಾಗಿದೆ. ಎಲ್ಲಾ ಆಸ್ತಿಗಳ ಜಿಯೋಟ್ಯಾಗ್ ಮ್ಯಾಪಿಂಗ್ ಮೂಲಕ ಇ-ಆಸ್ತಿ ಜಾರಿ ಮಾಡಿ, ನಾಗರಿಕರಿಗೆ ಆನ್ಲೈನ್ನಲ್ಲಿ ಸ್ವತ್ತಿನ ಮಾಹಿತಿಯನ್ನು ಸುಲಭವಾಗಿ ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದೆ.
ಇ-ಖಾತೆಗೆ ಆಧಾರ್ ಜೋಡಣೆ ಹಾಗೂ ಬ್ಲಾಕ್ಚೈನ್ ಬಳಕೆಯಿಂದ ಸುರಕ್ಷಿತ ಸ್ವಯಂಚಾಲಿತ ಖಾತಾ ವರ್ಗಾವಣೆ (ಮ್ಯುಟೇಷನ್) ಸಾಧ್ಯವಾಗಿದ್ದು, ನಾಗರಿಕರಿಗೆ ಕಛೇರಿ ಸುತ್ತಾಟ ತಪ್ಪುತ್ತದೆ. ಜಿ.ಐ.ಎಸ್ ಆಧಾರಿತ ಆಸ್ತಿ ತೆರಿಗೆ ವ್ಯವಸ್ಥೆಯನ್ನು ಬೆಸ್ಕಾಂ, ಬಿಡಬ್ಲ್ಯೂಎಸ್ಎಸ್ಬಿ ಮುಂತಾದ ಸಂಸ್ಥೆಗಳೊಂದಿಗೆ ಏಕೀಕರಿಸಿ, ಆಸ್ತಿ ತೆರಿಗೆ ಪರಿಷ್ಕರಣೆ ಮೂಲಕ ವರ್ಷಕ್ಕೆ ರೂ.150 ಕೋಟಿ ಹೆಚ್ಚುವರಿ ಆದಾಯ ನಿರೀಕ್ಷಿಸಲಾಗಿದೆ.
3D ಮಾಡೆಲಿಂಗ್ ಮತ್ತು AI ಆಧಾರಿತ ವ್ಯವಸ್ಥೆಯಿಂದ ತೆರಿಗೆ ವ್ಯಾಪ್ತಿಯನ್ನು ವಿಸ್ತರಿಸುವುದು ಹಾಗೂ ನಾಗರಿಕರಿಗಾಗಿ GIS ಆಸ್ತಿ ಮಾಹಿತಿ ವ್ಯವಸ್ಥೆ ಅಭಿವೃದ್ಧಿಪಡಿಸುವ ಪ್ರಸ್ತಾವನೆ ಇದೆ.
AI ಮೂಲಕ ತೆರಿಗೆ ಬಾಕಿದಾರರನ್ನು ಗುರುತಿಸಿ, ವಿವಿಧ ದತ್ತಾಂಶ ಏಕೀಕರಣದ ಮೂಲಕ ತೆರಿಗೆ ಜಾಲ ವಿಸ್ತರಣೆ ಮಾಡಿ ವರ್ಷಕ್ಕೆ ರೂ.100 ಕೋಟಿ ಹೆಚ್ಚುವರಿ ಆದಾಯ ಹೊಂದುವ ಗುರಿಯಿದೆ. ಬಿ-ಖಾತೆಯಿಂದ ಎ-ಖಾತೆಗೆ ಪರಿವರ್ತನೆ ಅಭಿಯಾನ (01-11-2025 ರಿಂದ) ಜಾರಿಯಲ್ಲಿದ್ದು, ಇದರಿಂದ ವರ್ಷಕ್ಕೆ ರೂ.225 ಕೋಟಿ ಹೆಚ್ಚುವರಿ ಆದಾಯ ನಿರೀಕ್ಷಿಸಲಾಗಿದೆ.
2026-27ನೇ ಸಾಲಿನಲ್ಲಿ ಪ್ರಾರಂಭಿಕ ಶಿಲ್ಕು ರೂ.1.58 ಕೋಟಿಗಳು ಮತ್ತು ಬೆಂಗಳೂರು ಪೂರ್ವ ನಗರ ಪಾಲಿಕೆಯ ಸ್ವಂತ ಸಂಪನ್ಮೂಲಗಳ ಅಂದಾಜು ಆದಾಯ ರೂ.3354 ಕೋಟಿಗಳಷ್ಟು ಇರಲಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನಗಳು ರೂ.534 ಕೋಟಿಗಳಷ್ಟು ಅಂದಾಜಿಸಲಾಗಿರುತ್ತದೆ. ಒಟ್ಟಾರೆ, ರೂ.3890 ಕೋಟಿಗಳು ಸ್ವೀಕೃತಿಗಳಾಗಿದ್ದು, ಒಟ್ಟು ವೆಚ್ಚ ರೂ.3889.98 ಕೋಟಿಗಳಾಗಿದ್ದು, ರೂ.1.56 ಲಕ್ಷಗಳ ಅಖೈರು ಶಿಲ್ಕನ್ನು ಹೊಂದಿರುತ್ತದೆ.
- ಲೆಗಸಿ ಜಾಹೀರಾತು, ಎಲ್ಇಡಿ ಸ್ಕೈವಾಕ್, ಬಸ್ ಶೆಲ್ಟರ್ ಮತ್ತು ಅಂಡರ್ಪಾಸ್ಗಳ ಮೂಲಕ ಒಟ್ಟು ಸುಮಾರು ರೂ.68 ಕೋಟಿ ಆದಾಯ ಗುರಿ ಹೊಂದಲಾಗಿದೆ.
- ವಿವಿಧ ಆರ್ಟಿರಿಯಲ್ ಮತ್ತು ಸಬ್-ಆರ್ಟಿರಿಯಲ್ ರಸ್ತೆ ವಿಸ್ತರಣೆಗೆ ಪರಿತ್ಯಜಿಸಲಾದ 56,722.6 ಚ.ಮೀ (14 ಎಕರೆ) ಭೂಮಿಯನ್ನು ಪಾಲಿಕೆ ವಶಕ್ಕೆ ಪಡೆದು, ಸುಮಾರು ರೂ.510 ಕೋಟಿ ಮೌಲ್ಯದ ಸಾರ್ವಜನಿಕ ಆಸ್ತಿಯನ್ನು ರಸ್ತೆ ವಿಸ್ತರಣೆಗಾಗಿ ಕಾಯ್ದಿರಿಸಲಾಗಿದೆ.
- ಕಟ್ಟಡ ನಕ್ಷೆ ಮಂಜೂರಾತಿ, ಪ್ಲಿಂತ್ ಪ್ರಮಾಣಪತ್ರ, ಸ್ವಾಧೀನಾನುಭವ ಪ್ರಮಾಣಪತ್ರ, ವಿವಿಧ ಶುಲ್ಕಗಳು ಹಾಗೂ ಇತರ ಮೂಲಗಳಿಂದ ಸುಮಾರು ರೂ.982 ಕೋಟಿ ಆದಾಯ ನಿರೀಕ್ಷಿಸಲಾಗಿದೆ.
- 1605 ಪೌರಕಾರ್ಮಿಕರ ಆರೋಗ್ಯ ಮತ್ತು ಕಲ್ಯಾಣ ಕಾರ್ಯಕ್ರಮಗಳನ್ನು ಮುಂದುವರಿಸಲಾಗುತ್ತಿದ್ದು, ಇದುವರೆಗೆ 1330 ಪೌರಕಾರ್ಮಿಕರನ್ನು ಖಾಯಂಗೊಳಿಸಲಾಗಿದೆ.
- ಎಸ್.ಸಿ/ಎಸ್.ಟಿ, ಹಿಂದುಳಿದ ವರ್ಗದವರಿಗೆ ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ವೈದ್ಯಕೀಯ ವೆಚ್ಚ ಮರುಪಾವತಿ ಸೌಲಭ್ಯ ಒದಗಿಸಲಾಗುತ್ತದೆ.
- ಸ್ವಚ್ಛತಾ ಸಿಬ್ಬಂದಿಗಳಿಗಾಗಿ ಸುವಿಧಾ ವಿಶ್ರಾಂತಿ ಮತ್ತು ಸೌಲಭ್ಯ ಕೇಂದ್ರಗಳ ನಿರ್ಮಾಣಕ್ಕೆ ರೂ.2 ಕೋಟಿ ಮೀಸಲಿರಿಸಲಾಗಿದೆ.
- ಸಾರ್ವಜನಿಕರಲ್ಲಿ ಆರೋಗ್ಯ ಮತ್ತು ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲು ಐಇಸಿ ಚಟುವಟಿಕೆಗಳಿಗೆ ರೂ.1.90 ಕೋಟಿ ಮೀಸಲು ಮಾಡಲಾಗಿದೆ.
- ಪಾಲಿಕೆಯ ಯೋಜನೆಗಳು, ಅಭಿವೃದ್ಧಿ ಕಾಮಗಾರಿಗಳು ಹಾಗೂ ಕಲ್ಯಾಣ ಕಾರ್ಯಕ್ರಮಗಳ ಮಾಹಿತಿಯನ್ನು ವಿವಿಧ ಮಾಧ್ಯಮಗಳ ಮೂಲಕ ಜನರಿಗೆ ತಲುಪಿಸಲು ಡಿಜಿಟಲ್ ವ್ಯವಸ್ಥೆಯ ಸಾರ್ವಜನಿಕ ಸಂಪರ್ಕ ಕೇಂದ್ರ ಸ್ಥಾಪಿಸಲು ಯೋಜಿಸಲಾಗಿದೆ.
- ರಾಜ್ಯ ಹಾಗೂ ಕೇಂದ್ರ ಹಣಕಾಸು ಆಯೋಗಗಳಿಂದ ರೂ.73 ಕೋಟಿ ಮತ್ತು ರೂ.114 ಕೋಟಿ ಅನುದಾನ ನಿರೀಕ್ಷಿಸಲಾಗಿದೆ.
- ವಿಪತ್ತು ಪರಿಹಾರ ಮತ್ತು ಕಲ್ಯಾಣ ಕಾರ್ಯಕ್ರಮಗಳ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲು DBT ವ್ಯವಸ್ಥೆ ಜಾರಿಗೊಳಿಸಲಾಗಿದೆ.
- ಪಾಲಿಕೆಯ ಅಡಿಯಲ್ಲಿ ಬರುವ ಎಲ್ಲಾ ರಸ್ತೆಗಳು ಮತ್ತು ಚರಂಡಿಗಳ ಸಮಗ್ರ ಅಭಿವೃದ್ದಿ ಮತ್ತು ನಿರ್ವಹಣೆಗಾಗಿ (50 ವಾರ್ಡಗಳು) ಒಟ್ಟು ರೂ.112.50 ಕೋಟಿಗಳನ್ನು ಮೀಸಲಿರಿಸಲಾಗಿದೆ.
- ಸಿಲ್ಕ್ಬೋರ್ಡ್ ಜಂಕ್ಷನ್ನಿಂದ ಕೆ.ಆರ್.ಪುರಂವರೆಗೆ ಹೊರ ವಲಯ ರಸ್ತೆಯನ್ನು ದೀರ್ಘಕಾಲಿಕವಾಗಿ ಅಭಿವೃದ್ಧಿಪಡಿಸಲು ಕರ್ನಾಟಕ ಸರ್ಕಾರದ ವತಿಯಿಂದ ರೂ.450 ಕೋಟಿ ಯೋಜನೆ ರೂಪಿಸಲಾಗಿದ್ದು, 2026–27ರಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ.
- ಪ್ರಮುಖ ರಸ್ತೆಗಳ ಜಂಕ್ಷನ್, ಸ್ಕೈವಾಕ್ ಹಾಗೂ ಪಾದಚಾರಿ ಮಾರ್ಗಗಳನ್ನು ಅಭಿವೃದ್ದಿ ಪಡಿಸುವ ಯೋಜನೆಗಳಿಗೆ ರೂ.50 ಕೋಟಿ ಮೀಸಲು ಮಾಡಲಾಗಿದೆ.
- 100 ಕಿ.ಮೀ. ಉದ್ದದ ಪಾದಚಾರಿ ಮಾರ್ಗಗಳ ಅಭಿವೃದ್ಧಿ ಪಡಿಸುವ ಗುರಿ ಹೊಂದಲಾಗಿದೆ.
- ರಸ್ತೆ ಅಗಲೀಕರಣ ಕಾಮಗಾರಿಗಳಿಗೆ ರೂ.40 ಕೋಟಿ ಮೀಸಲು ಇಡಲಾಗಿದೆ.
- ಬೀದಿ ದೀಪಗಳ ನಿರ್ವಹಣೆಗೆ ರೂ.17 ಕೋಟಿ ಮೀಸಲು ಇರಿಸಲಾಗಿದೆ.
- ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ರೂ.5 ಕೋಟಿ ಮೀಸಲು ಇರಿಸಲಾಗಿದೆ.
- ವಿಶ್ವ ಬ್ಯಾಂಕ್ ಅನುದಾನದ ಅಡಿಯಲ್ಲಿ ರೂ.629 ಕೋಟಿ ವೆಚ್ಚದಲ್ಲಿ ಮಹದೇವಪುರ ಮತ್ತು ಕೆ.ಆರ್.ಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಾಜಕಾಲುವೆಗಳ ಅಭಿವೃದ್ದಿಕಾಮಗಾರಿಯನ್ನು ಪ್ರಾರಂಭಿಸಲಾಗಿರುತ್ತದೆ.
10 ಕೆರೆಗಳಿಗೆ ಚೈನ್ ಲಿಂಕ್ ಬೇಲಿ ನಿರ್ಮಾಣಕ್ಕೆ ₹5 ಕೋಟಿ ಅನುದಾನವನ್ನು ಕಾಯ್ದಿರಿಸಲಾಗಿದೆ.·
4 ಕೆರೆಗಳ ಅಭಿವೃದ್ಧಿಗೆ ₹25 ಕೋಟಿ ಅನುದಾನ ಮೀಸಲಿಡಲಾಗಿದೆ - ಮಹದೇವಪುರ ಮತ್ತು ಕೆ.ಆರ್.ಪುರ ವಲಯಗಳಲ್ಲಿ ಒಟ್ಟು 54 ಉದ್ಯಾನವನಗಳಿದ್ದು, 35 ಅಭಿವೃದ್ಧಿಗೊಂಡ ಉದ್ಯಾನವನಗಳು, 12 ಕೆರೆ ಉದ್ಯಾನವನಗಳು ಹಾಗೂ 7 ಮೀಡಿಯನ್ ಉದ್ಯಾನವನಗಳು ಇವುಗಳ ವಾರ್ಷಿಕ ನಿರ್ವಹಣೆ ಹಾಗೂ ಅಭಿವೃದ್ಧಿಗೆ ರೂ.10 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ.

