ಬೆಂಗಳೂರು: ಗ್ರೇಟರ್ ಬೆಂಗಳೂರು ಟೌನ್ ಶಿಪ್ ಅಡಿಯಲ್ಲಿ ಬೆಂಗಳೂರಿಗೆ ಹೊಂದಿಕೊಂಡಿರುವ ಬಿಡದಿಯಲ್ಲಿ ಸುಮಾರು 10,000 ಎಕರೆ ಪ್ರದೇಶದಲ್ಲಿ ಟೌನ್ ಶಿಪ್ ಅಭಿವೃದ್ಧಿಪಡಿಸಲು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಸಕ್ತಿ ತೋರುತ್ತಿದಾರೆ. ಅವರ ಕನಸಿನಂತೆ ಈ ಟೌನ್ ಶಿಪ್ ನಿರ್ಮಾಣವಾದರೆ ಅಭಿವೃದ್ದಿ ಮತ್ತು ಮೂಲಭೂತ ಸೌಕರ್ಯದಲ್ಲಿ ಈಗಿನ ಬೆಂಗಳೂರನ್ನು ಹಿಂದಿಕ್ಕಲಿದೆ ಎಂದು ಹೇಳಲಾಗುತ್ತಿದೆ.
ವನೂತನ ಟೌನ್ ಶಿಪ್ ನಿಂದ ಬಿಡದಿ ಆಧುನಿಕ ಮತ್ತು ಮಾದರಿ ನಗರವಾಗಿ ರೂಪುಗೊಳ್ಳಲಿದೆ. ಯೋಜನಾ ಬದ್ಧವಾಗಿ ರಚಿಸಲಾಗಿರುವ ದೆಹಲಿ ಚಂಡೀಗಡ ಮೊದಲಾದ ಅತ್ಯುತ್ತಮ ನಗರಗಳ ಅಧ್ಯಯನ ನಡೆಸಿ ಬಿಡದಿ ಟೌನ ಶಿಪ್ ವಿನ್ಯಾಸ ಮಾಡಲಾಗುತ್ತದೆ.
ಬಿಡದಿ ಟೌನ್ ಶಿಪ್ ಗೆ ಸೇರುವ ಗ್ರಾಮಗಳು:
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಡದಿ ಹೋಬಳಿಗೆ ಸೇರಿರುವ ಬೈರಮಂಗಲ, ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 24 ಗ್ರಾಮಗಳ ಸುಮಾರು 10 ಸಾವಿರ ಎಕರೆ ಜಮೀನಿನ ಸ್ವಾಧೀನಕ್ಕೆ ಪ್ರಕ್ರಿಯೆ ಆರಂಭಿಸಿದೆ. ಈ ಯೋಜನೆಗೆ ಅಳ್ಳಾಲಸಂದ್ರ, ಕಂಚುಗಾರನಹಳ್ಳಿ ಕಾವಲ್, ಕಂಚುಗಾರನಹಳ್ಳಿ, ಗೊಲ್ಲರಪಾಳ್ಯ, ಕೆಂಪಯ್ಯನಪಾಳ್ಯ, ಬನ್ನಿಗೆರೆ, ಬೈರಮಂಗಲ, ಮಂಡಲಹಳ್ಳಿ, ಹೊಸೂರು ಮತ್ತು ವಡೇರಹಳ್ಳಿ ಗ್ರಾಮಗಳ ಭೂಮಿ ಸೇರಲಿದೆ.
ಉದ್ದೇಶಿತ ಟೌನ್‌ಶಿಪ್ ಯೋಜನೆಯಲ್ಲಿ 2,742 ಎಕರೆ ಪ್ರದೇಶದಲ್ಲಿ ಎಕಾನಾಮಿಕ್ ಕಾರಿಡಾರ್ ರಚನೆಯಾಗಲಿದೆ. ನೈಸ್ ರಸ್ತೆ, ಎನ್‌ಹೆಚ್ 204, ಎನ್‌ಹೆಚ್ 275 ಮತ್ತು ಎಸ್‌ಟಿಟಿಆರ್ ಸಂಪರ್ಕಿಸುವಂತೆ ಟೌನ್ ಶಿಪ್ ನಿರ್ಮಾಣವಾಗಲಿದೆ.
ಬೆಂಗಳೂರು ನಗರದ ವಿಸ್ತರಣೆಯ ಭಾಗವಾಗಿ 2031ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಬಿಎಂಆರ್ ಡಿಎ ಈ ಯೋಜನೆ ರೂಪಿಸಿದೆ. ಅಭಿವೃದ್ಧಿ ಕಾರ್ಯಗಳ ಜತೆಗೆ ಮೂಲ ಸೌಕರ್ಯಗಳನ್ನೂ ಕಲ್ಪಿಸಲಾಗುತ್ತದೆ.
ಮಾಜಿ ಪ್ರಧಾನಿ ದೇವೇಗೌಡರ ವಿರೋಧ; ಡಿಕೆಶಿ ಸಮರ್ಥನೆ:
ಬಿಡದಿ ಯೋಜನೆಯನ್ನು ಕೈಬಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಪತ್ರ ಬರೆದಿದ್ದಾರೆ. ರಾಮನಗರ ಜಿಲ್ಲೆಯ ರಾಮನಗರ ಮತ್ತು ಕನಕಪುರ ತಾಲ್ಲೂಕುಗಳಲ್ಲಿ ಈಗಾಗಲೇ ರಾಜ್ಯ ಸರ್ಕಾರ ಕೈಗಾರಿಕಾಭಿವೃದ್ಧಿಗಾಗಿ ಸಾವಿರಾರು ಎಕರೆ ರೈತರ ಭೂಮಿಯನ್ನು ವಶಪಡಿಸಿಕೊಂಡು ಕೈಗಾರಿಕಾಭಿವೃದ್ಧಿ ಪ್ರದೇಶವನ್ನು ಸ್ಥಾಪಿಸಿದೆ. ಉಳಿದ ಕೃಷಿ ಭೂಮಿಯಲ್ಲಿ ರೈತರು ತಮ್ಮ ಜೀವನ ನಿರ್ವಹಣೆಗೆ ಹೈನುಗಾರಿಕೆ, ರೇಷ್ಮೆ, ತೋಟಗಾರಿಕೆ ನಡೆಸುತ್ತಿದ್ದಾರೆ. ಬಹುಪಾಲು ರೈತರು ಅತೀ ಸಣ್ಣ ಮತ್ತು ಸಣ್ಣ ಹಿಡುವಳಿದಾರರಾಗಿದ್ದು ಬಡ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಇಂತಹ ಪ್ರದೇಶವನ್ನು ಟೌನ್ ಶಿಪ್ ಯೋಜನೆಗೆ ಸ್ವಾಧೀನಪಡಿಸಿಕೊಂಡರೆ ಪರಿಸರಕ್ಕೆ ಅಪಾರ ಹಾನಿ ಉಂಟಾಗುತ್ತದೆ ಎಂದು ಎಚ್ ಡಿ ದೇವೇಗೌಡ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಬಿಡದಿ ಸೇರಿದಂತೆ ಬೆಂಗಳೂರು ಸುತ್ತ 7 ಟೌನ್ ಶಿಪ್ ಯೋಜನೆಗೆ ಭೂಮಿ ಸ್ವಾದೀನಕ್ಕೆ ಮುಂದಾಗಿದ್ದು, 2007ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ. ಇದೀಗ ಅವರ ತಂದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರೇ ಟೌನ್ ಶಿಪ್ ಯೋಜನೆಯನ್ನು ವಿರೋಧಿಸುತ್ತಿರುವುದು ಏಕೆ ಎಂದು ಶಿವಕುಮಾರ್ ಪ್ರಶ್ನಿಸಿದ್ದಾರೆ.
ಸರ್ಕಾರ ಈಗಾಗಲೇ ಸ್ವಾಧೀನಪಡಿಸಿಕೊಂಡಿರುವ ಜಮೀನನ್ನು ಉಳಿಸಿಕೊಳ್ಳಲಿದೆ. ಈ ಯೋಜನೆಯಿಂದ ರೈತಿಗೆ ತೊಂದರೆಯಾಗುವುದಿಲ್ಲ. ರೈತರಿಗೆ ಹಣ ಇಲ್ಲವೇ ಅಭಿವೃದ್ಧಿ ಪಡಿಸಿದ ಭೂಮಿಯನ್ನು ನೀಡಲಾಗುತ್ತದೆ. ಅವರ ಕಾಳಜಿ ಸಮಸ್ಯೆಗಳನ್ನು ಸರ್ಕಾರ ಅರ್ಥ ಮಾಡಿಕೊಳ್ಳಲಿದೆ ಮತ್ತು ಪರಿಹರಿಸಲಿದೆ ಎಂದು ಶಿವಕುಮಾರ್ ಭರವಸೆ ನೀಡಿದ್ದಾರೆ.