ಕೆಂಪೇಗೌಡ ವಿಮಾನ ನಿಲ್ದಾಣ: ಸಿಯಾಮಾಂಗ್ ಗಿಬ್ಬನ್ ಮಂಗಗಳ ರಕ್ಷಣೆ

Most read

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಕಸ್ಟಮ್ಸ್ ಅಧಿಕಾರಿಗಳು ಮಲೇಷ್ಯಾದಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಸೂಟ್‌ ಕೇಸ್‌ ನೊಳಗೆ ಉಸಿರುಗಟ್ಟಿಸುವ ಸ್ಥಿತಿಯಲ್ಲಿದ್ದ ಕಳ್ಳಸಾಗಣೆ ಮಾಡುತ್ತಿದ್ದ ಎರಡು ಅಳಿವಿನಂಚಿನಲ್ಲಿರುವ ಮಂಗಗಳನ್ನು ರಕ್ಷಿಸಿದ್ದಾರೆ. ಆರೋಪಿಗಳು ಈ ಮಂಗಗಳನ್ನು ಕಳ್ಳಸಾಗಣೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ನಾಲ್ಕು ಸಿಯಾಮಾಂಗ್ ಗಿಬ್ಬನ್ ಮಂಗಗಳು ಮತ್ತು ಎರಡು ನಾರ್ತ್ ಪಿಗ್‌ ಟೇಲ್ಡ್ ಮ್ಯಾಕ್ವಾಕ್ ಗಳನ್ನು ರಕ್ಷಿಸಿ ಮಲೇಶಿಯಾ ದೇಶಕ್ಕೆ ಹಿಂತಿರುಗಿಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ಕೌಲಾಲಂಪುರದಿಂದ ಕೆಐಎಯ ಟರ್ಮಿನಲ್ 2 ಗೆ ರಾತ್ರಿ 11.30 ಕ್ಕೆ ಆಗಮಿಸಿದ ಮಲೇಷ್ಯಾದ ಏರ್‌ಲೈನ್ಸ್ ವಿಮಾನ MH 192 ರಲ್ಲಿ ಕಳ್ಳ ಸಾಗಣೆ ಮಾಡಲಾಗುತ್ತಿತ್ತು.

ತಮಿಳುನಾಡು ಮೂಲದ ಪ್ರಯಾಣಿಕನನ್ನು ಪತ್ತೆಹಚ್ಚಿದ್ದೇವೆ. ಆರು ಮಂಗಗಳನ್ನು ಒಂದೇ ಟ್ರಾಲಿ ಸೂಟ್‌ಕೇಸ್‌ನೊಳಗೆ ಚಾಕೊಲೇಟ್‌ ಗಳು ಮತ್ತು ಬಟ್ಟೆಗಳ ನಡುವೆ ತುಂಬಿಸಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಂಗಗಳನ್ನು ಮಲೇಷ್ಯಾಕ್ಕೆ ಹಿಂತಿರುಗಿಸಲಾಗಿದೆ. ಒಂದು ವರ್ಷದಿಂದೀಚೆಗೆ ಬೆಂಗಳೂರಿಗೆ ವಿದೇಶಿ ಜಾತಿಗಳ ಪ್ರಾಣಿಗಳನ್ನು ಕಳ್ಳಸಾಗಣೆ ಮಾಡುವ ಪ್ರಕರಣಗಳು ಹೆಚ್ಚುತ್ತಿವೆ ಎಂದು ಕಸ್ಟಮ್ಸ್‌ ಮೂಲಗಳು ತಿಳಿಸಿವೆ.

More articles

Latest article