ಬೆಂಗಳೂರು: ಈ ವರ್ಷದ ಮೇ ಅಂತ್ಯದವರೆಗೆ ರಾಜ್ಯದಲ್ಲಿ ಒಟ್ಟು 3.37 ಕೋಟಿ ವಾಹನಗಳ ನೋಂದಣಿಯಾಗಿದ್ದು, ಅದರಲ್ಲಿ 1.24 ಕೋಟಿ ಬೆಂಗಳೂರು ನಗರದಲ್ಲಿಯೇ ಇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಸಾರಿಗೆ ಇಲಾಖೆಗೆ ವಾಹನ ತಪಾಸಣೆಗಾಗಿ 40 ಮಹಿಂದ್ರಾ ಬೊಲೆರೊ ವಾಹನಗಳನ್ನು ಹಸ್ತಾಂತರಿಸಿ ಅವರು ಮಾತನಾಡಿದರು.
ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು, ಸಹಜವಾಗಿಯೇ ಮೋಟಾರು ವಾಹನ ನಿರೀಕ್ಷಕರ ಸಂಖ್ಯೆಯೂ ಹೆಚ್ಚಳವಾಗಬೇಕು. ಹಾಗೆಯೇ ತಪಾಸಣೆಗಳೂ ಹೆಚ್ಚಾಗಬೇಕು. ಅದಕ್ಕಾಗಿ ಈಗಾಗಲೇ 129 ನಿರೀಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದರು.
ಸಾರಿಗೆ ಇಲಾಖೆಯಿಂದ ರಸ್ತೆ ಸುರಕ್ಷತೆ ಕುರಿತು ನಿಗಾ ವಹಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಸೂಚನೆಗಳನ್ನು ನೀಡಿ ಜನಸ್ನೇಹಿ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕು ಎಂದು ತಿಳಿಸಿವೆ. ಅದಕ್ಕೆ ಅನುಗುಣವಾಗಿ ಕರ್ತವ್ಯ ನಿರ್ವಹಿಸಲು ವಾಹನ ಖರೀದಿಸಲಾಗಿದೆ ಎಂದರು.
ಸುಪ್ರೀಂಕೋರ್ಟ್ ಆದೇಶದ ಪ್ರಕಾರ ರಚನೆಯಾಗಿರುವ ರಸ್ತೆ ಸುರಕ್ಷತಾ ಸಮಿತಿಯು ನೀಡಿರುವ ಸೂಚನೆಯಂತೆ ರಸ್ತೆ ಅಪಘಾತಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕಾಗಿದೆ. ಸುರಕ್ಷತಾ ಮಾನದಂಡಗಳನ್ನು ಅಳವಡಿಸಿಕೊಳ್ಳದ ವಾಹನಗಳಿಗೆ ದಂಡ ಹಾಕಬೇಕು. ರಾತ್ರಿ ಸಂಚಾರದ ವೇಳೆ ಟೈಲ್ ಲ್ಯಾಂಪ್, ಇಂಡಿಕೇಟರ್ಗಳು ಸುಸ್ಥಿತಿಯಲ್ಲಿ ಇವೆಯೇ ಎಂದು ಪರಿಶೀಲಿಸಬೇಕು. ತಪ್ಪು ಮಾಡಿದ ಚಾಲಕರು, ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಪೊಲೀಸ್, ಆರೋಗ್ಯ, ಲೋಕೋಪಯೋಗಿ, ಶಿಕ್ಷಣ ಇಲಾಖೆಯ ಸಹಯೋಗ ಪಡೆದುಕೊಂಡು ರಸ್ತೆ ಸುರಕ್ಷತಾ ಪ್ರಾಧಿಕಾರವು ಹೆಚ್ಚು ಅಪಘಾತ ಉಂಟಾಗುವ ಸ್ಥಳಗಳನ್ನು ಗುರುತಿಸಿ ಅಪಘಾತಗಳನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕು. ಹೆಲ್ಮೆಟ್ ಧರಿಸದೇ ದ್ವಿಚಕ್ರವಾಹನ ಚಾಲನೆ, ಮದ್ಯಪಾನ ಮಾಡಿ ವಾಹನ ಚಾಲನೆ, ಸೀಟ್ ಬೆಲ್ಟ್ ಧರಿಸದಿರುವ ಸವಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.