ಬೆಂಗಳೂರು: ಉತ್ತರ ಕರ್ನಾಟಕದ ಪ್ರಮುಖ ಶ್ರದ್ಧಾಕೇಂದ್ರ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಭಕ್ತರ ಅನುಕೂಲಕ್ಕಾಗಿ ಮೂಲಸೌಕರ್ಯ ಕಲ್ಪಿಸುವ ಸಮಗ್ರ ಯೋಜನೆ ಸಿದ್ಧಗೊಂಡಿದ್ದು, ಕಾಲಮಿತಿಯಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ ತಿಳಿಸಿದರು.
ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ರಾಜ್ಯಮಟ್ಟದ ಸಮಿತಿಯ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಪ್ರಸ್ತುತ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಸವದತ್ತಿಯಲ್ಲಮ್ಮನ ಗುಡ್ಡದಲ್ಲಿ ಸಮಗ್ರ ಅಭಿವೃದ್ಧಿಯ ಬದ್ಧತೆಯನ್ನು ಪ್ರಕಟಿಸಲಾಗಿತ್ತು. ಭಾರತ ಹುಣ್ಣಿಮೆಯ ಸಂದರ್ಭದಲ್ಲಿ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಬದಲಾವಣೆ ಕಾಣುತ್ತೆವೆ ಎಂಬುದು ಭಕ್ತರಿಗೆ ವಿಧಿತವಾಯಿತು ಎಂದು ಸಚಿವರು ಬೆಳಗಾವಿ ಜಿಲ್ಲಾ ಆಡಳಿತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಳೆದ ಭಾರತ ಹುಣ್ಣಿಮೆ ಸಂದರ್ಭದಲ್ಲಿ 3 ಲಕ್ಷ ಭಕ್ತರಿಗೆ ಮಜ್ಜಿಗೆ ದಾಸೋಹ ಕೈಗೊಂಡಿದ್ದು, ಭಕ್ತರನ್ನು ಸರ್ಕಾರ ಕಾಳಜಿ ಮಾಡುತ್ತಿದೆ ಎಂಬ ಭಾವನೆ ಮೂಡಿತು. ಈ ಸಲ ಭಾರತ ಹುಣ್ಣಿಮೆಯ ಸಂದರ್ಭದಲ್ಲಿ ಎಲ್.ಇ.ಡಿ ಸ್ಕ್ರೀನ್ ಗಳನ್ನು ಅಳವಡಿಸಿದ್ದರಿಂದ ಭಕ್ತಾದಿಗಳು ಆ ಸ್ಕ್ರೀನ್ ಗಳಿಗೆ ಪೂಜೆ ಮಾಡಿದ್ದು ಸಹ ಕಂಡು ಬಂದಿತು ಎಂದು ಸಚಿವರು ಹೇಳಿದರು.
ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ, ತಿರುಪತಿ ಮಾದರಿಯಲ್ಲಿ ಕ್ಯೂ ಕಾಂಪ್ಲೆಕ್ಸ್ ಉಳಿದುಕೊಳ್ಳಲು ವ್ಯವಸ್ಥೆ, ಚಕ್ಕಡಿ ಕಟ್ಟಿಕೊಂಡು ಬರುವವರಿಗೆ ಪಶು ಆಹಾರಕ್ಕಾಗಿ ಮೇವು ದಾಸೋಹ, ರಿಂಗ್ ರಸ್ತೆ, ವಯಸ್ಸಾದವರಿಗೆ ದರ್ಶನಕ್ಕೆ ವ್ಯವಸ್ಥೆ ಮುಂತಾದವು ಸೇರಿದಂತೆ ಎಲ್ಲಾ ಮೂಲಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಸವದತ್ತಿ ಶಾಸಕ ವಿಶ್ವಾಸ ವೈದ್ಯ, ಪ್ರವಾಸೋದ್ಯಮ ಕಾರ್ಯದರ್ಶಿ, ಸಲ್ಮಾ ಫಾಹೀಮ್, ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಟಿ.ವೆಂಕಟೇಶ, ಬೆಳಗಾವಿ ಜಿಲ್ಲಾಧಿಕಾರಿ ರೋಶನ್ ಮುಂತಾದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.