ಕನ್ನಡ ಕಾರ್ಯಕ್ರಮಗಳನ್ನು 15 ದಿನಗಳೊಳಗಾಗಿ ಪುನಾರಂಭಿಸದಿದ್ದರೆ ಉಗ್ರ ಹೋರಾಟ; ಶಂಕರ ವಾಹಿನಿಗೆ ಕರವೇ ಅಧ್ಯಕ್ಷರ ಎಚ್ಚರಿಕೆ

Most read

ಬೆಂಗಳೂರು: ಸ್ಥಗಿತಗೊಳಿಸಿರುವ ಕನ್ನಡ ಕಾರ್ಯಕ್ರಮಗಳನ್ನು 15 ದಿನಗಳ ಒಳಗಾಗಿ ಪುನಾರಂಭಿಸದಿದ್ದರೆ ಉಗ್ರ ಸ್ವರೂಪದ ಹೋರಾಟವನ್ನು ನಡೆಸಬೇಕಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ ಅವರು ಶಂಕರ ವಾಹಿನಿಗೆ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಕಚೇರಿ ಹೊಂದಿರುವ ಶಂಕರ ವಾಹಿನಿ ಈ ಹಿಂದೆ ಕನ್ನಡ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿತ್ತು. ಆದರೆ ಇದೀಗ ಕನ್ನಡ ಕಾರ್ಯಕ್ರಮಗಳ ಪ್ರಸಾರವನ್ನು ಸ್ಥಗಿತಗೊಳಿಸಿ ಕೇವಲ ತಮಿಳು ಕಾರ್ಯಕ್ರಮಗಳನ್ನು ಮಾತ್ರ ಪ್ರಸಾರ ಮಾಡುತ್ತಿದೆ. ಈ ನಿಟ್ಟಿನಲ್ಲಿ ಕರವೇ ಅಧ್ಯಕ್ಷರು ಶಂಕರ ವಾಹಿನಿಯ ಮುಖ್ಯ ನಿರ್ವಾಹಕರಿಗೆ ಪತ್ರ ಬರೆದು ಎಚ್ಚರಿಕೆ ನೀಡಿದ್ದಾರೆ.

ಕನ್ನಡವೇ ಅಧಿಕೃತ ಭಾಷೆಯಾಗಿರುವ ಕರ್ನಾಟಕ ರಾಜ್ಯದಲ್ಲಿ ತಮ್ಮ ವಾಹಿನಿಯನ್ನು ನಡೆಸುತ್ತಿದ್ದೀರಿ ಎಂಬುದನ್ನು ತಾವು ಮರೆತಿರುವ ಹಾಗೆ ಕಾಣಿಸುತ್ತಿದೆ. ತಮ್ಮ ವಾಹಿನಿಯಲ್ಲಿ ಕನ್ನಡ ಕಾರ್ಯಕ್ರಮಗಳನ್ನು ನಿಲ್ಲಿಸಿರುವ ಬಗ್ಗೆ ಅಪಾರ ಸಂಖ್ಯೆಯ ಸಾರ್ವಜನಿಕರೂ ಸಹ ಕರ್ನಾಟಕ ರಕ್ಷಣಾ ವೇದಿಕೆಗೆ ದೂರನ್ನು ನೀಡಿರುತ್ತಾರೆ. ತಮ್ಮ ಈ ನಡೆ ಅನೈತಿಕ, ಅಸಂಬದ್ಧ ಮತ್ತು ಅಕ್ಷಮ್ಯ ಅಪರಾಧವಾಗಿರುತ್ತದೆ. ತಮ್ಮ ಈ ಧೋರಣೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸುತ್ತದೆ.  ನಿಮ್ಮ ನೀತಿ ನಿಲುವುಗಳನ್ನು ಬದಲಾಯಿಸಿಕೊಂಡು ಕನ್ನಡ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬೇಕಾಗಿರುವುದು ಈ ನಾಡಿಗೆ ನೀಡುವ ಗೌರವವಾಗಿರುತ್ತದೆ. ಆದ್ದರಿಂದ ಈ ಪತ್ರವನ್ನು ತಮಗೆ ರವಾನಿಸಿದ 15 ದಿನಗಳ ಒಳಗಾಗಿ ಸ್ಥಗಿತಗೊಳಿಸಿರುವ ಕನ್ನಡ ಕಾರ್ಯಕ್ರಮಗಳನ್ನು  ಮರು ಆರಂಭಿಸಬೇಕು. ಒಂದು ವೇಳೆ ಕನ್ನಡ ಹಾಗೂ ನಾಡ ವಿರೋಧಿ ಧೋರಣೆಯನ್ನು ಮುಂದುವರೆಸಿದರೆ, ತೀವ್ರ ಸ್ವರೂಪದ ಹೋರಾಟವನ್ನು ಎದುರಿಸಬೇಕಾಗಿ ಬರುತ್ತದೆ ಎಂದು ಅಧ್ಯಕ್ಷರು ಎಚ್ಚರಿಕೆ ನೀಡಿದ್ದಾರೆ.

ಒಂದು ವೇಳೆ ಕನ್ನಡ ನಾಡು ನುಡಿಗೆ ಅನಾದರ, ಅಸಡ್ಡೆ ಮುಂದುವರೆಸಿದರೆ ತಮ್ಮ ವಾಹಿನಿಯ ವಿರುದ್ಧ ಕರವೇ ಕಾರ್ಯಕರ್ತರು ಉಗ್ರ ಸ್ವರೂಪದ ಹೋರಾಟ ನಡೆಸಬೇಕಾದೀತು ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ತಾವು ತೆಗೆದುಕೊಂಡ ಕ್ರಮದ ಕುರಿತು ನಮಗೆ ಮರುಟಪಾಲಿನಲ್ಲಿ ಮಾಹಿತಿ ಒದಗಿಸಬೇಕು ಎಂದು ಅಧ್ಯಕ್ಷರು ಮನವಿ ಮಾಡಿಕೊಂಡಿದ್ದಾರೆ.

ಕರವೇ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಧರ್ಮರಾಜ ಗೌಡ ನೇತೃತ್ವದ ಕರವೇ ತಂಡ ಇಂದು ಶಂಕರ ಟಿವಿ ಕಚೇರಿಗೆ ಭೇಟಿ ನೀಡಿ, ಎಚ್ಚರಿಕೆ ಪತ್ರವನ್ನು ನೀಡಿತು.

More articles

Latest article