ಬೆಂಗಳೂರು: ಬೆಡ್‌ಶೀಟ್‌ಗಳನ್ನು ಅಡ್ಡ ಇಟ್ಟುಕೊಂಡು ಮೊಬೈಲ್ ಅಂಗಡಿ ಅಂಗಡಿಗಳಲ್ಲಿ ಕಳ್ಳತನ ಮಾಡುತ್ತಿದ್ದ ಬಿಹಾರದ ‘ಬೆಡ್‌ಶೀಟ್ ಗ್ಯಾಂಗ್’ ನ 8 ಆರೋಪಿಗಳನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಇಮ್ತಿಯಾಜ್ ಆಲಂ (30), ಜಾವೇದ್ ಆಲಂ(32),
ಪವನ್ ಷಾ(29), ಮುನೀಲ್ ಕುಮಾರ್(30) (32), ರಿಜ್ವಾನ್ ದೇವನ್ (30) ರಾಮೇಶ್ವರ
ಗಿರಿ (40) ಹಾಗೂ ಸೂರಜ್ ಕುಮಾರ್ (34) ಬಂಧಿತ ಆರೋಪಿಗಳು
ಆರೋಪಿಗಳಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಇತ್ತೀಚೆಗೆ ನಾಗವಾರಪಾಳ್ಯದ ಸ್ಯಾಮ್‌ಸಂಗ್ ಶೋರೂಂನಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳು
ರೂ. 22 ಲಕ್ಷ ಮೌಲ್ಯದ ಮೊಬೈಲ್‌ಗಳನ್ನು ಕದ್ದು ಪರಾರಿಯಾಗಿದ್ದರು. ಸಿ.ಸಿ.ಟಿ.ವಿ
ಕ್ಯಾಮೆರಾದಲ್ಲಿ ಸೆರೆಯಾಗಿದ್ದ ದೃಶ್ಯಗಳನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. 15 ದಿನಗಳ ಹಿಂದೆಯಷ್ಟೇ ಎಂಟು ಆರೋಪಿಗಳು ನಗರಕ್ಕೆ ಬಂದಿದ್ದರು. ಹಗಲಿನಲ್ಲಿ ಮೊಬೈಲ್ ಅಂಗಡಿ ಗುರುತಿಸಿಕೊಂಡು ನಂತರ ಗ್ರಾಹಕರ ಸೋಗಿನಲ್ಲಿ ಹೋಗಿ ಅಲ್ಲಿ ಯಾವ ಯಾವ ವಸ್ತುಗಳನ್ನು ಎಲ್ಲೆಲ್ಲಿ ಇಟ್ಟಿದ್ದಾರೆ ಎಂಬುದನ್ನು ತಿಳಿದುಕೊಳ್ಳುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ತಡರಾತ್ರಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಅಂಗಡಿ ಬಳಿ ಹೋಗುತ್ತಿದ್ದರು. ಆರೋಪಿಗಳ ಪೈಕಿ ಮೂವರು ಅಂಗಡಿ ಮುಂದೆ ಬೆಡ್‌ಶೀಟ್ ಅಡ್ಡವಾಗಿ ಹಿಡಿದುಕೊಳ್ಳುತ್ತಿದ್ದರು. ಇತರರು ಅಂಗಡಿಯ ರೋಲಿಂಗ್ ಶೆಟರ್ ತೆಗೆದು ಒಳಕ್ಕೆ ಹೋಗಿ ಸಿಕ್ಕಿದ್ದನ್ನು ಕಳವು ಮಾಡುತ್ತಿದ್ದರು. ನಂತರ, ಎಲ್ಲರೂ ಮುಖಕ್ಕೆ ಬೆಡ್‌ಶೀಟ್ ಸುತ್ತಿಕೊಂಡು ಸ್ಥಳದಿಂದ ಪರಾರಿಯಾಗುತ್ತಿದ್ದರು. ಇವರಲ್ಲಿ ಒಬ್ಬ ಬಿಹಾರ ಮೂಲಕ ನೇಪಾಳಕ್ಕೆ ಹೋಗಿ ಮೊಬೈಲ್ ಗಳನ್ನು ಮಾರಾಟ ಮಾಡಿ
ಬಂದಿರುವುದು ಪತ್ತೆಯಾಗಿದೆ. ಈ ಗ್ಯಾಂಗ್ ಉಡುಪಿ ಉತ್ತರ ಕನ್ನಡ ಮೊದಲಾದ
ಜಿಲ್ಲೆಗಳಲ್ಲಿ ಕಳ್ಳತನ ನಡೆಸಿರುವುದು ಬೆರಳಚ್ಚು ಮುದ್ರೆಯಿಂದ ಗೊತ್ತಾಗಿದೆ. ಇವರ ಬಂಧನದಿಂದ ಮೊಬೈಲ್ ಮಾರಾಟಗಾರರು ನಿರಾಳರಾಗಿದ್ದಾರೆ.