ನನ್ನ ಮಧ್ಯಸ್ಥಿಕೆಯಿಂದ ಭಾರತ–ಪಾಕ್ ಪರಮಾಣು ಯುದ್ಧ ತಪ್ಪಿದೆ: ಡೊನಾಲ್ಡ್‌ ಟ್ರಂಪ್‌ ಪುನರುಚ್ಚಾರ

Most read

ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಭವನೀಯ ಯುದ್ಧವನ್ನು ನಾನು ಮಧ್ಯಸ್ಥಿಕೆ ವಹಿಸಿ ನಿಲ್ಲಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ಉಭಯ ದೇಶಗಳ ಸಂಘರ್ಷದ ವೇಳೆ ಐದು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದು ಸತ್ಯ ಎಂದೂ ಅವರು ತಿಳಿಸಿದ್ದಾರೆ.

ಶ್ವೇತಭವನದಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಟ್ರಂಪ್‌, ನಾನು ಮಧ್ಯಸ್ಥಿಕೆ ವಹಿಸದಿದ್ದರೆ, ಬಹುಶಃ ಭಾರತ-ಪಾಕ್‌ ಸಂಘರ್ಷ ಪರಮಾಣು ಯುದ್ಧದಲ್ಲಿ ಕೊನೆಗೊಳ್ಳುತ್ತಿತ್ತು ಎಂದು ಹೇಳಿದ್ದಾರೆ.

ಅಣ್ವಸ್ತ್ರ ಹೊಂದಿರುವ ಎರಡು ದೇಶಗಳು ಪರಸ್ಪರ ದಾಳಿ ನಡೆಸುತ್ತಿದ್ದವು. ಆ ರಾಷ್ಟ್ರಗಳ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿತ್ತು. ವ್ಯಾಪಾರ ಸಂಬಂಧದ ಮೂಲಕ ಆ ಸಂಘರ್ಷವನ್ನು ನಾವು ಬಗೆಹರಿಸಿದ್ದೇವೆ. ನೀವು ಪರಸ್ಪರರ ಮೇಲೆ ಕ್ಷಿಪಣಿ, ಅಣ್ವಸ್ತ್ರಗಳಿಂದ ದಾಳಿ ಮಾಡುತ್ತಾ ಇದ್ದಲ್ಲಿ, ನಾವು ಯಾವುದೇ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದೆ ಎಂದು ಎಂದು ಟ್ರಂಪ್‌ ಹೇಳಿದ್ದಾರೆ.

ಮೇ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದ ವೇಳೆ ಐದು ಯುದ್ಧವಿಮಾನಗಳನ್ನು ಹೊಡೆದುರುಳಿಸಲಾಗಿತ್ತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಆದರೆ ಈ ಯುದ್ಧವಿಮಾನಗಳು ಯಾವ ದೇಶಕ್ಕೆ ಸೇರಿದವು ಎಂದು ಮಾತ್ರ ಟ್ರಂಪ್‌ ಅವರು ನಿರ್ದಿಷ್ಟವಾಗಿ ಹೇಳಿರಲಿಲ್ಲ.

ಕಾಂಗ್ರೆಸ್‌ ಮುಖಂಡ ಜೈರಾಂ ರಮೇಶ್‌ ಸಂಘರ್ಷವನ್ನು ಕೊನೆಗೊಳಿಸಿದ್ದು ಯಾರು ಮತ್ತು ಯಾವ ದೇಶಕ್ಕೆ ಸೇರಿದ ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ಸ್ಪಷ್ಟಪಡಿಸುವಂತೆ ಪ್ರಧಾನಿ ಮೋದಿ ಅವರನ್ನು ಆಗ್ರಹಪಡಿಸುತ್ತಲೇ ಬಂದಿದ್ದಾರೆ. ಆದರೆ ಪ್ರಧಾನಿ ಮೋದಿ ಮಾತ್ರ ಇದುವರೆಗೂ ಸ್ಪಷ್ಟನೆ ನೀಡಿಲ್ಲ.

More articles

Latest article