ಬೆಂಗಳೂರು: ಬೆಂಗಳೂರು ನಗರದಲ್ಲಿ ಅನಧಿಕೃತ ಕಟ್ಟಡ ನಿರ್ಮಾಣಗಳನ್ನು ತೆರವುಗೊಳಿಸುತ್ತಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ನಿನ್ನೆ ನಡೆದ ಕಾರ್ಯಾಚರಣೆಯಲ್ಲಿ ನಾಗರಬಾವಿ ಬಡಾವಣೆಯ ಮಾಳಗಾಳದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಮನೆ, ಶೆಡ್‌ಗಳನ್ನು ತೆರವು ಮಾಡಿ ರೂ. 120 ಕೋಟಿ ಮೌಲ್ಯದ ಆಸ್ತಿಯನ್ನು ವಶ ಪಡಿಸಿಕೊಂಡಿದೆ.
ಬೆಂಗಳೂರು ಉತ್ತರ ತಾಲ್ಲೂಕಿನ ಯಶವಂತಪುರ ಹೋಬಳಿಯ ಮಾಳಗಾಳ ಗ್ರಾಮ ಅಥವಾ ನಾಗರಬಾವಿ ಬಡಾವಣೆಯಲ್ಲಿ  2 ಎಕರೆ 16 ಗುಂಟೆ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ 25 ಸಿಮೆಂಟ್ ಶೀಟ್‌ನ ಮನೆಗಳು, ಎರಡು ಆರ್‌ಸಿಸಿ ಮನೆ ಹಾಗೂ ಇತರ ಕಟ್ಟಡಗಳನ್ನು ತೆರವುಗೊಳಿಸಿದೆ.
ಒತ್ತುವರಿ ತೆರವು ಮಾಡುವಂತೆ ಬಿಡಿಎ ಅಧಿಕಾರಿಗಳು ಮೂರ್ನಾಲ್ಕು ಬಾರಿ ನೋಟಿಸ್ ನೀಡಿದ್ದರೂ ತೆರವು ಮಾಡಿರಲಿಲ್ಲ. ಆದ್ದರಿಂದ ನಾಲ್ಕು ಜೆಸಿಬಿ, ಒಂದು ಹಿಟಾಚಿ ಯಂತ್ರದ ಮೂಲಕ ಕಾರ್ಯಾಚರಣೆ ನಡೆಸಿ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಿ ಭೂಮಿಯನ್ನು ವಶಕ್ಕೆ ಪಡೆದುಕೊಂಡಿದೆ.
ಈ ಪ್ರದೇಶದಲ್ಲಿ ಉತ್ತರ ಕರ್ನಾಟದ 20 ಕುಟುಂಬಗಳು ಸಿಮೆಂಟ್ ಶೀಟ್ ಮನೆಗಳಲ್ಲಿ ವಾಸಿಸುತ್ತಿದ್ದವು. ಕಟ್ಟಡ ನಿರ್ಮಾಣ ಕೆಲಸದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಅವರ ಪರಿಸ್ಥಿತಿ ದಿಕ್ಕು ತೋಚದಂದಾಗಿತ್ತು. ತಮ್ಮ ಮನೆಗಳು ಧ್ವಂಸವಾಗುತ್ತಿರುವುದನ್ನು ಕಂಡು ಕಣ್ಣೀರಿಟ್ಟರು. ಮೊದಲೇ ಮಾಹಿತಿ ನೀಡಿದ್ದರೆ ಮನೆಗಳನ್ನು ಖಾಲಿ ಮಾಡಿ ಬೇರೆ ಕಡೆ ಹೋಗುತ್ತಿದ್ದೆವು. ತಿಂಗಳಿಗೆ 4 ಸಾವಿರ ರೂ. ಬಾಡಿಗೆ ಕೊಡುತ್ತಿದ್ದೆವು. ಈಗ ಮಾಲೀಕ ನಾಪತ್ತೆಯಾಗಿದ್ದಾನೆ ಎಂದು ಅಲ್ಲಿನ ನಿವಾಸಿಗಳು ಅಳಲು ತೋಡಿಕೊಂಡರು..
ಮಕ್ಕಳು ಇಲ್ಲಿಯೇ ಸಮೀಪವಿದ್ದ ಶಾಲೆಗೆ ಹೋಗುತ್ತಿದ್ದರು. ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದೇವೆ. ಈಗ ದಿನಸಿ ಮತ್ತಿತರ ಸಾಮಗ್ರಿಗಳನ್ನು ರಸ್ತೆ ಪಕ್ಕದಲ್ಲಿಯೇ ಇಟ್ಟುಕೊಂಡಿದ್ದೇವೆ. ಮಲಗಲು ಸ್ಥಳವಿಲ್ಲ. ನಮ್ಮ ಜತೆ ವಯೋವೃದ್ಧರು,  ಅಂಗವಿಕಲರು, ಅನಾರೋಗ್ಯ ಪೀಡಿತರು ಇದ್ದಾರೆ. ಈಗ ಹೋಗುವುದಾದರೂ ಎಲ್ಲಿಗೆ ಎಂದು ಕಣ್ಣೀರಿಡುತ್ತಿದ್ದರು.
 ಬಿಡಿಎಗೆ ಸೇರಿದ ಪ್ರದೇಶದಲ್ಲಿ ಅಕ್ರಮವಾಗಿ ಮನೆ ಹಾಗೂ ಶೆಡ್‌ಗಳನ್ನು ನಿರ್ಮಿಸಲಾಗಿತ್ತು. ಆರು ತಿಂಗಳ ಹಿಂದೆಯೇ ಈ ಜಾಗದಲ್ಲಿ ಸರ್ವೇ ನಡೆಸಿ ಬೇಲಿ ಹಾಕಿದ್ದೆವು. ಒತ್ತುವರಿ ತೆರವು ಮಾಡುವಂತೆ ಹಲವು ಬಾರಿ ಸೂಚನೆ ನೀಡಲಾಗಿತ್ತು. ಆದರೂ ಯಾರೊಬ್ಬರೂ ತೆರವು ಮಾಡಿರಲಿಲ್ಲ. ಇದು ಅವರದ್ದೇ ತಪ್ಪು. ನಿಯಮಾವಳಿಗಳ ಪ್ರಕಾರವೇ ಕಾರ್ಯಾಚರಣೆ ನಡೆಸಿ ಜಾಗವನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಬಸವರೆಡ್ಡಿ ತಿಳಿಸಿದ್ದಾರೆ. ಬಿಡಿಎಗೆ ಸೇರಿದ ಈ ಪ್ರದೇಶವನ್ನು ವ್ಯಕ್ತಿಯೊಬ್ಬ ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಿಸಿ ಬಾಡಿಗೆ ನೀಡಿದ್ದ. ಪ್ರತಿ ಮನೆಗೆ ತಲಾ ರೂ. 4 ರಿಂದ 5 ಸಾವಿರ ಬಾಡಿಗೆ ಪಡೆಯುತ್ತಿದ್ದ. ಬಾಡಿಗೆ ನಿವಾಸಿಗಳಿಂದ ಮುಂಗಡ ಹಣವನ್ನು ಪಡೆದು ಈಗ ನಾಪತ್ತೆಯಾಗಿದ್ದಾನೆ ಎಂದು ಅವರು ಹೇಳಿದರು.

                                    