Sunday, September 8, 2024

ಶೈಕ್ಷಣಿಕ ಸಂಸ್ಥೆಗಳು ಶೇ. 25 ರಷ್ಟು ಸೇವಾ ಶುಲ್ಕ ಪಾವತಿಸಿ ಒಂದು ಬಾರಿ ಪರಿಹಾರ ಯೋಜನೆಯ ಲಾಭ ಪಡೆಯಿರಿ: ತುಷಾರ್ ಗಿರಿ ನಾಥ್

Most read

ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಶೈಕ್ಷಣಿಕ ಸಂಸ್ಥೆಗಳಿಗೆ ಒಂದು ಪರಿಹಾರ ಯೋಜನೆಯಡಿ ಶೇ. 25 ರಷ್ಟು ಸೇವಾ ಶುಲ್ಕವನ್ನು ಪಾವತಿಸಬೇಕಾಗಿದ್ದು, ಈ ಯೋಜನೆ ಜುಲೈ 31ಕ್ಕೆ ಮುಗಿಯಲಿದ್ದು, ಈ ಕೂಡಲೆ ಎಲ್ಲರೂ ಬಾಕಿ ಇರುವ ಶೇವಾ ಶುಲ್ಕವನ್ನು ಪಾವತಿಸಲು ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಪ್ರತಿನಿಧಿಗಳಿಗೆ ಸೂಚನೆ ನೀಡಿದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಾಕಿ ಆಸ್ತಿ ತೆರಿಗೆದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಒಂದು ಬಾರಿ ಪರಿಹಾರ ಯೋಜನೆಯ ಕುರಿತು ವೈದ್ಯಕೀಯ ಕಾಲೇಜು, ಇಂಜಿನಿಯರಿಂಗ್ ಕಾಲೇಜು ಸೇರಿದಂತೆ ಇನ್ನಿತರೆ ಶೈಕ್ಷಣಿಕ ಸಂಸ್ಥೆಗಳ ಜೊತೆ ಇಂದು ಟೌನ್ ಹಾಲ್ ನಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ನಗರದಲ್ಲಿ ಒಂದು ಪರಿಹಾರ ಯೋಜನೆಯನ್ನು ಕಾಯ್ದೆ ಅನುಸಾರ ಜಾರಿ ಮಾಡಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಒಂದು ಬಾರಿ ಪರಿಹಾರ ಯೋಜನೆಯಡಿ ಬಾಕಿ ಇರುವ ಆಸ್ತಿ ತೆರಿಗೆಯಲ್ಲಿ ಸಾಕಷ್ಟು ವಿನಾಯ್ತಿಯನ್ನು ನೀಡಲಾಗಿದೆ. ಶೈಕ್ಷಣಿಕ ಸಂಸ್ಥೆಗಳು ಕೂಡಲೆ ಇದರ ಸದುಪಯೋಗವನ್ನು ಪಡೆದುಕೊಂಡು ಕೂಡಲೆ ಬಾಕಿ ಇರುವ ಶೇವಾ ಶುಲ್ಕವನ್ನು ಪಾವತಿಸಲು ಮನವಿ ಮಾಡಿದರು.

ಶೈಕ್ಷಣಿಕ ಸಂಸ್ಥೆಗಳು ಆಸ್ತಿ ತೆರಿಗೆಯಿಂದ ವಿನಾಯಿತಿ ಕೋರಿ ಶೇ. 25 ರಷ್ಟು ಸೇವಾ ಶುಲ್ಕ ಪಾವತಿಸಲು ಅರ್ಜಿ ಸಲ್ಲಿಸಿ ಅನುಮೋದನೆಯ ನಂತರ ಪಾವತಿಸಲು ಅವಕಾಶ ಕಲ್ಪಿಸಲಾಗಿತ್ತು. ಪ್ರಸ್ತುತ ಒಂದು ಬಾರಿ ಪರಿಹಾರ ಯೋಜನೆ ಅವಧಿಯಲ್ಲಿ ಶೈಕ್ಷಣಿಕ ಸಂಸ್ಥೆಯ ಸ್ವತ್ತುಗಳು ಸರ್ಕಾರದಿಂದ ಮಾನ್ಯತೆ ಪಡೆದಿದ್ದಲ್ಲಿ ಸೇವಾ ಶುಲ್ಕವನ್ನು ಪಾವತಿಸಲು ಶೈಕ್ಷಣಿಕ ಉದ್ದೇಶಕ್ಕೆ ಬಳಸುತ್ತಿರುವ ಅವಧಿಯಿಂದ ಅನ್ವಯವಾಗುವಂತೆ ಅವಕಾಶ ಕಲ್ಪಿಸಲಾಗಿರುತ್ತದೆ. ಇದೇ ಜುಲೈ 31ರ ವರೆಗೂ ಮಾತ್ರ ಒಂದು ಬಾರಿ ಪರಿಹಾರ ಯೋಜನೆ ಚಾಲ್ತಿಯಲ್ಲಿರಲಿದ್ದು, ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಸೇವಾ ಶುಲ್ಕ ಪಾವತಿ ಮಾಡಬಹದು ಎಂದು ಹೇಳಿದರು.

ಡಿಡಿ ಮೂಲಕ ಬಾಕಿ ಆಸ್ತಿ ತೆರಿಗೆ ಪಾವತಿಸಲು ಅವಕಾಶ:

ನಗರದಲ್ಲಿ ಶೈಕ್ಷಣಿಕ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಒಂದೊಂದು ಸಂಸ್ಥೆಯಲ್ಲಿ ಒಂದೊಂದು ರೀತಿಯ ಸಮಸ್ಯೆಯಿದೆ. ಅದನ್ನು ಪರಿಶೀಲಿಸಿದಾಗ ಆಸ್ತಿ ತೆರಿಗೆ ತಂತ್ರಾಂಶದಲ್ಲಿ ಬದಲಾವಣೆ ಮಾಡಿಕೊಂಡು ಆನ್ಲೈನ್ ನಲ್ಲಿ ಪಾವತಿಸಲು ಸಮಸ್ಯೆಯಾಗುತ್ತಿರುತ್ತದೆ. ಈ ನಿಟ್ಟಿನಲ್ಲಿ ಆನ್ ಲೈನ್ ನಲ್ಲಿ ಪಾವತಿ ಮಾಡಲು ಸಾಧ್ಯವಿಲ್ಲದವರಿಗೆ ಆಸ್ತಿ ತೆರಿಗೆ ಬ್ಯಾಂಕರ್ಸ್ ಚೆಕ್/ಫೇ ಆರ್ಡರ್/ಡಿಮಾಂಡ್ ಡ್ರಾಫ್ಟ್ ಮೂಲಕ ಪಾವತಿಸಲು ಅವಕಾಶ ನೀಡಲಾಗುವುದು. ಆಯಾ ವಲಯ ಜಂಟಿ ಆಯುಕ್ತರಿಗೆ ನಿಮ್ಮ ಸಂಸ್ಥೆಗಳ ಬಾಕಿ ಆಸ್ತಿ ತೆರಿಗೆಯ ಡಿಮಾಂಡ್ ಡ್ರಾಫ್ಟ್ ಗಳನ್ನು ಸಲ್ಲಿಸಬಹುದೆಂದು ತಿಳಿಸಿದರು.

ವಿಶೇಷ ಆಯುಕ್ತರಾದ ಶ್ರೀ ಮುನೀಶ್ ಮೌದ್ಗಿಲ್ ರವರು ಮಾತನಾಡಿ, ಸರ್ಕಾರದ ವತಿಯಿಂದ ಪಾಲಿಕೆಯಲ್ಲಿ ಜಾರಿಗೆ ತಂದಿರುವ ಒಂದು ಬಾರಿ ಪರಿಹಾರ ಯೋಜನೆಯ ಲಾಭವನ್ನು ಶೈಕ್ಷಣಿಕ ಸಂಸ್ಥೆಗಳು ಪಡೆದುಕೊಳ್ಳಲು ಮನವಿ ಮಾಡಿದ ಅವರು, ಸದರಿ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಮಾದರಿ ಕಾರ್ಯವಿಧಾನವನ್ನು ನೀಡಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಚರ್ಚೆಯಾದ ಪ್ರಮುಖ ಅಂಶಗಳು:

  • ಶೈಕ್ಷಣಿಕ ಸಂಸ್ಥೆಗಳು ಈಗಾಗಲೇ ಆಸ್ತಿ ತೆರಿಗೆ ಜಾಲದಲಿದ್ದು, ಸ್ವಯಂ ಘೋಷಣಾ ಪದ್ಧತಿ(ಎಸ್.ಎ.ಎಸ್) ಅಡಿಯಲ್ಲಿ ಅರ್ಜಿ ಸಂಖ್ಯೆ ಹೊಂದಿರುವ ಪ್ರಕರಣಗಳಲ್ಲಿ ಆನ್ಲೈನ್ ಮೂಲಕ ಶೇ. 25 ರಷ್ಟು ಸೇವಾ ತೆರಿಗೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.
  • ಇದುವರೆಗೂ ಆಸ್ತಿ ತೆರಿಗೆ ಪಾವತಿಸದ/ಎಸ್.ಎ.ಎಸ್ ಅರ್ಜಿ ಸಂಖ್ಯೆ ಹೊಂದಿರದ ಎಲ್ಲಾ ಶೈಕ್ಷಣಿಕ ವಿದ್ಯಾ ಸಂಸ್ಥೆಗಳು ಬಾಕಿ ಇರುವ ಸಾಲಿನಿಂದ ಸೇವಾ ಶುಲ್ಕವನ್ನು ಕಟ್ಟಡದ ಅನುಸಾರ ಶೇ. 25 ರಷ್ಟು ಸೇವಾ ಶುಲ್ಕ ಲೆಕ್ಕಾಚಾರ ಮಾಡಿ ಮನವಿ ಪತ್ರದೊಂದಿಗೆ, ಡಿಮ್ಯಾಂಡ್ ಡ್ರಾಫ್ಟ್ ಹಾಗೂ ಸರ್ಕಾರದಿಂದ ಶೈಕ್ಷಣಿಕ ಸಂಸ್ಥೆಗೆ ಮಾನ್ಯತೆ ಪಡೆದಿರುವ ಪ್ರಮಾಣ ಪತ್ರದೊಂದಿಗೆ ಸಂಬಂಧಪಟ್ಟ ಆಯಾ ವಲಯ ಜಂಟಿ ಆಯುಕ್ತರಿಗೆ ಅರ್ಜಿ ಸಲ್ಲಿಸುವುದು.
  • ಬಿಬಿಎಂಪಿ ಕಾಯಿದೆಯಲ್ಲಿ 2021-22ನೇ ಸಾಲಿನ ಖಾಸಗಿ ಶೈಕ್ಷಣಿಕ ಸಂಸ್ಥೆಗಳಿಗೆ ಆಸ್ತಿ ತೆರಿಗೆಯಲ್ಲಿ ಯಾವುದೇ ವಿನಾಯಿತಿ ಇರುವುದಿಲ್ಲ. ನ್ಯಾಯಾಲಯದ ಪ್ರಕರಣಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ಶೈಕ್ಷಣಿಕ ಸಂಸ್ಥೆಗಳು ಮೊತ್ತದ ಆಸ್ತಿ ತೆರಿಗೆಯನ್ನು ಪಾವತಿ ಮಾಡಬೇಕಾಗಿರುತ್ತದೆ.
  • ಒಂದು ಬಾರಿ ಪರಿಹಾರ ಯೋಜನೆಯು ಇದೇ 31ನೇ ಜುಲೈ ವರೆಗೂ ಜಾರಿಯಲ್ಲಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶೈಕ್ಷಣಿಕ ವಿದ್ಯಾ ಸಂಸ್ಥೆಗಳು ಇದರ ಲಾಭವನ್ನು ಪಡೆದುಕೊಂಡು ಶೇ. 25 ರಷ್ಟು ಸೇವಾ ಶುಲ್ಕವನ್ನು ಪಾವತಿಸಬಹುದಾಗಿದ್ದು, ಬಡ್ಡಿ ಮೊತ್ತಕ್ಕೆ ಸಂಪೂರ್ಣ ವಿನಾಯ್ತಿ ಇರಲಿದೆ.

ಈ ವೇಳೆ ವಲಯ ಆಯುಕ್ತರಾದ ಕರೀಗೌಡ, ರಮ್ಯಾ, ಕಂದಾಯ ವಿಭಾಗದ ಜಂಟಿ ಆಯುಕ್ತರಾದ ಲಕ್ಷ್ಮಿದೇವಿ, ವಲಯ ಜಂಟಿ ಆಯುಕ್ತರು, ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರು, ಪ್ರತಿನಿಧಿಗಳು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

More articles

Latest article