Friday, December 6, 2024

ಬಿಬಿಎಂಪಿ ಬೀದಿ ವ್ಯಾಪರಿಗಳ ಎತ್ತಂಗಡಿ : ಹೈಕೋರ್ಟ್ ಮಧ್ಯ ಪ್ರವೇಶ

Most read

ಬೆಂಗಳೂರು : ನಗರದಲ್ಲಿ ಫುಟ್‌ಪಾತ್‌ಗಳ ಒತ್ತುವರಿ ತೆರವು ವಿಚಾರವಾಗಿ ಕ್ರಮ ಕೈಗೊಳ್ಳದ ಬಿಬಿಎಂಪಿಗೆ ಹೈಕೋರ್ಟ್ ತರಾಟೆ ತೆಗೆದುಕೊಂಡಿದೆ. ಫೆಬ್ರವರಿ 1ರಂದು ಬಿಬಿಎಂಪಿ ಮುಖ್ಯ ಆಯುಕ್ತರೇ ಖುದ್ದಾಗಿ ವಿಚಾರಣೆಗೆ ಹಾಜರಾಗಬೇಕೆಂದು ಆದೇಶ ನೀಡಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಗರದ ಜನಗಳಿಂದ ಸಾಕಷ್ಟು ತೆರಿಗೆ ಪಾವತಿಸಿಕೊಳ್ಳುತ್ತದೆ ಆದರೆ ಸರಿಯಾದ ರಸ್ತೆ ಹಾಗು ಫುಟ್‌ಪಾತ್‌ ನಿರ್ಮಿಸುವಲ್ಲಿ ವಿಫಲವಾಗಿದೆ. ಎಲ್ಲಾ ಫುಟ್‌ಪಾತ್‌ಗಳ ಒತ್ತುವರಿಗಳನ್ನು ತೆರವುಗೊಳಿಸಬೇಕು ಮತ್ತು ಒತ್ತುವರಿ ತೆರವಿಗೆ ಸ್ವಯಂಪ್ರೇರಿತ ಪಿಐಎಲ್‌ ದಾಖಲಿಸುತ್ತೇವೆ ಎಂದು ಹೈಕೋರ್ಟ್‌ನ ಹಂಗಾಮಿ ಸಿಜೆ‌ ಪಿ.ಎಸ್.ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡರಿದ್ದ ಪೀಠದಿಂದ ಸೂಚನೆ ನೀಡಲಾಗಿದೆ.

ಬಿಬಿಎಂಪಿ ವ್ಯಾಪ್ತಿಗೆ ಬರುವ ಫುಟ್‌ಪಾತ್‌ಗಳನ್ನು ಕೆಲವರು ಕಾರು ಪಾರ್ಕಿಂಗ್‌ಗಾಗಿ ಬಳಸುತ್ತಿದ್ದಾರೆ. ಇನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ನಾಲ್ಕು ವಲಯಗಳಾದ ಬೆಂಗಳೂರು ಪಶ್ಚಿಮ, ಯಲಹಂಕ, ಆರ್.ಆರ್ ನಗರ ಮತ್ತು ಬೆಂಗಳೂರು ದಕ್ಷಿಣ ವಲಯದಲ್ಲಿ ಬೀದಿ ಬದಿ ವ್ಯಾಪಾರಿಗಳ ಜೊತೆಗೆ ರಸ್ತೆ ಬಳಿ ನಿಲ್ಲಿಸಿದ್ದ ತಳ್ಳುವ ಗಾಡಿ ರೀತಿಯ ವಾಹನಗಳನ್ನು ಬಿಬಿಎಂಪಿ ಅಧಿಕಾರಿಗಳು ಇತ್ತೀಚೆಗೆ ತೆರವು ಮಾಡಿಸಿದ್ದರು.

ಇತ್ತೀಚೆಗೆ ‘ಬಿಬಿಎಂಪಿ ಅವರು ಕಾನೂನು ಉಲ್ಲಂಘನೆ ಮಾಡಿ ನಮ್ಮ ವ್ಯಾಪಾರಿಗಳನ್ನ ಎತ್ತಂಗಡಿ ಮಾಡುತ್ತಿದ್ದಾರೆ. ಎತ್ತಂಗಡಿ ಮಾಡಲು ಯಾವುದೇ ನೋಟಿಸ್ ನೀಡಿಲ್ಲ. ಕಾನೂನನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ಅವರ ವಿರುದ್ದ ಎಫ್‌ಐ‌ಆರ್ ದಾಖಲಿಸಬೇಕು’ ಎಂದು ಬೀದಿಬದಿ ವ್ಯಾಪಾರಿಗಳ ಒಕ್ಕೂಟ ಸಂಘಟನೆ ಮುಖಂಡ ಬಾಬು ಆಕ್ರೋಶ ಹೊರಹಾಕಿದ್ದರು.

ನಮ್ಮ ಬೀದಿಬದಿ ವ್ಯಾಪರಿಗಳ ಜೊತೆ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ರಾಹುಲ್ ಗಾಂಧಿ ಅವರ ಜೊತೆ ಸಂವಾದವನ್ನು ಏರ್ಪಡಿಸಿತ್ತು. ಆಗ ಬೀದಿಬದಿ ವ್ಯಾಪಾರಿಗಳು ನಮ್ಮ ಬೆಂಗಳೂರಿನ ಆಸ್ತಿ ಎಂದು ರಾಹುಲ್ ಗಾಂಧಿ  ಹೇಳಿದ್ದರು. ಆದರೆ ರಾಜ್ಯ ಕಾಂಗ್ರೆಸ್ ಪಕ್ಷ ಇದರ ಬಗ್ಗೆ ಸ್ವಲ್ಪವೂ ಗಮನ ಕೊಡುತ್ತಿಲ್ಲಎಂದು ಆರೋಪ ಮಾಡಿದರು.

ಬೀದಿಬದಿ ವ್ಯಾಪರಕ್ಕೆ ಸರ್ಕಾರವೇ ಗುರುತಿನ‌ ಚೀಟಿ ಕೊಟ್ಟಿದೆ. ಇನ್ನೂ ಮುಂದುವರೆದು ಸರ್ಕಾರವು ಸಾಲ ಸೌಲಭ್ಯ ಕೊಡುತ್ತೆ. ಆದರೆ ಬಿಬಿಎಂಪಿಯ ಅಧಿಕಾರಿಗಳು ಕಾನೂನು ಬಾಹಿರ ಎತ್ತಂಗಡಿ ಮಾಡುತ್ತಿರುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದರು.

More articles

Latest article