ಬಿಬಿಎಂಪಿ ವ್ಯಾಪ್ತಿಯಲ್ಲಿ ತೆರಿಗೆ ಪಾವತಿಸದ ಆಸ್ತಿಗಳ ಹರಾಜು ಫೆ.10 ರಿಂದ ಆರಂಭ

Most read

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಎಂಟು ವಲಯಗಳಲ್ಲಿ ದೀರ್ಘಕಾಲದಿಂದ
ಆಸ್ತಿ ತೆರಿಗೆ ಪಾವತಿಸದ 608 ಆಸ್ತಿಗಳನ್ನು ಹರಾಜು ಹಾಕಲು ಪಾಲಿಕೆ ಮುಂದಾಗಿದೆ.

ಆಸ್ತಿ ತೆರಿಗೆ ಸಂಗ್ರಹಿಸುವ ವಿಷಯವಾಗಿ, ಹಲವು ಬಾರಿ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಬೇಡಿಕೆ ನೋಟಿಸ್, ಆಸ್ತಿಗಳ ಮುಟ್ಟುಗೋಲು, ವಸತಿಯೇತರ ಆಸ್ತಿಗಳಿಗೆ ಬೀಗಮುದ್ರೆ ಸೇರಿದಂತೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದ್ದರೂ  ಆಸ್ತಿಗಳ ಮಾಲೀಕರು ದೀರ್ಘಕಾಲದಿಂದ ಪಾಲಿಕೆಗೆ ಆಸ್ತಿ ತೆರಿಗೆ ಪಾವತಿಸುತ್ತಿಲ್ಲ. ಈ ಸಂಬಂಧ ಆಸ್ತಿ ತೆರಿಗೆ ಬಾಕಿ ವಸೂಲಿ ಮಾಡಲು ಸುಸ್ತಿದಾರರ ಸ್ಥಿರ ಆಸ್ತಿಗಳನ್ನು ತುರ್ತಾಗಿ ಮಾರಾಟ
ಮಾಡಲು, ಹರಾಜು ಪ್ರಕ್ರಿಯೆಯನ್ನು ಆರಂಭಿಸಲಾಗುತ್ತಿದೆ ಎಂದು  ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್‌ ಮೌದ್ಗಿಲ್‌ ತಿಳಿಸಿದ್ದಾರೆ.

ಬಿಬಿಎಂಪಿ ಕಾಯ್ದೆ 2020ರ ಸೆಕ್ಷನ್ 156 ಉಪಪ್ರಕರಣ 5ರ ಅಡಿಯಲ್ಲಿ ಹರಾಜು ಮಾಡಲಾಗುತ್ತದೆ. ಹರಾಜಿನಲ್ಲಿ ಲಭ್ಯವಾಗುವ ಮೊತ್ತದಲ್ಲಿ ಪಾಲಿಕೆಗೆ ಸಂದಾಯವಾಗಬೇಕಿರುವ ಪೂರ್ಣ ಬಾಕಿಯನ್ನು ವಸೂಲಿ ಮಾಡಿದ ಬಳಿಕ ಉಳಿಯುವ ಮೊತ್ತವನ್ನು ಮಾಲೀಕರ ಬ್ಯಾಂಕ್
ಖಾತೆಗೆ ಜಮೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಆರ್.ಆರ್ ನಗರ ವಲಯದಲ್ಲಿ 65 ಆಸ್ತಿಗಳನ್ನು ಆಸ್ತಿಗಳು ಫೆಬ್ರುವರಿ 10ರಂದು ಹರಾಜು ಹಾಕಲಾಗುತ್ತದೆ. ಪೂರ್ವ ವಲಯದಲ್ಲಿ 118 ಆಸ್ತಿಗಳನ್ನು ಫೆ. 13ರಂದು ಹರಾಜು ಮಾಡಲಾಗುತ್ತದೆ. ಪಶ್ಚಿಮ ವಲಯದಲ್ಲಿ 120 ಆಸ್ತಿಗಳ ಹರಾಜು ಫೆಬ್ರವರಿ 13ರಂದು ನಡೆಯಲಿದೆ ಮಹದೇವಪುರ ವಲಯದಲ್ಲಿ 70 ಆಸ್ತಿಗಳ ಹರಾಜು ಫೆ. 13ರಂದು ನಡೆಯಲಿದೆ. ಯಲಹಂಕ ವಲಯದಲ್ಲಿ 41 ಆಸ್ತಿಗಳನ್ನು ಫೆ. 13ರಂದು ಹರಾಜು ಮಾಡಲಾಗುತ್ತದೆ. ದಾಸರಹಳ್ಳಿ ವಲಯದಲ್ಲಿ 41  ಆಸ್ತಿಗಳ ಹರಾಜು ಪ್ರಕ್ರಿಯೆ ಫೆ. 13ರಂದು ನಡೆಯಲಿದೆ. ದಕ್ಷಿಣ
ವಲಯದಲ್ಲಿ 109 ಆಸ್ತಿಗಳನ್ನು ಆಸ್ತಿಗಳನ್ನು ಫೆ. 14ರಂದು ಹರಾಜು ಮಾಡಲಾಗುತ್ತದೆ. ಬೊಮ್ಮನಹಳ್ಳಿ ವಲಯದಲ್ಲಿ 70 ಆಸ್ತಿಗಳು ಫೆ.14ರಂದು ಹರಾಜಾಗಲಿವೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ರೂ. 2 ಲಕ್ಷಕ್ಕಿಂತ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರಿಂದ ಸುಮಾರು ರೂ.390 ಕೋಟಿ ಪಾವತಿಯಾಗಬೇಕಿದೆ. ಹರಾಜಿನಂತಹ ಬಲವಂತದ ವಸೂಲಾತಿ ಕ್ರಮವನ್ನು ತಪ್ಪಿಸುವ ಸಲುವಾಗಿ ಎಲ್ಲಾ ಆಸ್ತಿ ತೆರಿಗೆದಾರರು ತಕ್ಷಣವೇ
ತಮ್ಮ ಆಸ್ತಿ ತೆರಿಗೆ ಬಾಕಿಗಳನ್ನು ಪಾವತಿಸಬೇಕು ಪಾಲಿಕೆ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

More articles

Latest article