ಬ್ಯಾಂಕ್‌ ಮೇನೇಜರ್‌ ಲಾಕರ್‌ ನಲ್ಲಿದ್ದ ಚಿನ್ನಾಭರಣಗಳೇ ಕಳವು; ಕದ್ದವರು ಯಾರು ಎನ್ನುವದೇ ವಿಸ್ಮಯ!  

Most read

ಬ್ಯಾಂಕ್‌ ಮೇನೇಜರ್‌ ಲಾಕರ್‌ ನಲ್ಲಿದ್ದ ಚಿನ್ನಾಭರಣಗಳೇ ಕಳವು; ಕದ್ದವರು ಯಾರು ಎನ್ನುವದೇ ವಿಸ್ಮಯ!  

ಬೆಂಗಳೂರು: ಬ್ಯಾಂಕ್‌ ವ್ಯವಸ್ಥಾಪಕಿಯೊಬ್ಬರು ತಾವು ಕಾರ್ಯ ನಿರ್ವಹಿಸುತ್ತಿದ್ದ ತಮ್ಮದೇ ಬ್ಯಾಂಕ್‌ ಶಾಖೆಯ ಲಾಕರ್‌ ನಲ್ಲಿ ಇರಿಸಿದ್ದ ಚಿನ್ನದ ಆಭರಣಗಳು ಕಳುವಾಗಿವೆ ಎಂದು ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಬ್ಯಾಂಕ್‌ ಉದ್ಯೋಗಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

32 ವರ್ಷದ ಬ್ಯಾಂಕ್‌ ಮೇನೇಜರ್‌ ರಾಗಿಣಿ (ಹೆಸರು ಬದಲಾಯಿಸಲಾಗಿದೆ) ಬಸವೇಶ್ವರನಗರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ತಾವು ಕಾರ್ಯ ನಿರ್ವಹಿಸುತ್ತಿದ್ದ ಶಾಖೆಯಲ್ಲೇ ಬ್ಯಾಂಕ್‌ ಲಾಕರ್‌ ಅನ್ನು ಬಾಡಿಗೆಗೆ ಪಡೆದು 250 ಗ್ರಾಂ ಚಿನ್ನಾಭರಣ, ಚೆಕ್‌ ಬುಕ್‌ ಮತ್ತು ಇತರ ದಾಖಲೆಗಳನ್ನು ಲಾಕರ್‌ ನಲ್ಲಿ ಇಟ್ಟಿದ್ದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. 2024 ಮೇ ತಿಂಗಳಲ್ಲಿ ಪರಿಶೀಲಿಸಿದಾಗ ಎಲ್ಲವೂ ಸರಿಯಾಗಿಯೇ ಇತ್ತು. ಮತ್ತೊಮ್ಮೆ ಅಕ್ಟೋಬರ್‌ ನಲ್ಲಿ ಪರಿಶೀಲಿಸಲು ನೋಡಿದಾಗ ಬೀಗದ ಕೀ ನಾಪತ್ತೆಯಾಗಿತ್ತು. ಬ್ಯಾಂಕ್‌ ನ ಎಲ್ಲ ಭಾಗಗಳಲ್ಲಿ ಹುಡುಕಿದರೂ ಕೀ ಪತ್ತೆಯಾಗಿರಲಿಲ್ಲ. ನಂತರ ಡಿಸೆಂಬರ್‌ 30 ರಂದು ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಲಾಕರ್‌ ಅನ್ನು ಒಡೆದು ನೋಡಿದಾಗ ಚೆಕ್‌ ಬುಕ್‌ ಬಿಟ್ಟು ಚಿನ್ನಾಭರಣ ಕಳುವಾಗಿತ್ತು ಎಂದು ತಿಳಿಸಿದ್ದಾರೆ.

ಬ್ಯಾಂಕ್‌ ಲಾಕರ್‌ ಹೇಗೆ ಕೆಲಸ ಮಾಡುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುತ್ತದೆ. ಸಾಮಾನ್ಯವಾಗಿ ಗ್ರಾಹಕರ ಬಳಿ ಇರುವ ಕೀ ಮತ್ತು ಬ್ಯಾಂಕ್‌ ನಲ್ಲಿರುವ ಮಾಸ್ಟರ್‌ ಕೀ ಬಳಸಿದರೆ ಮಾತ್ರ ಲಾಕರ್‌ ಅನ್ನು ತೆರೆಯಲು ಸಾಧ್ಯ. ಬೇರೆ ಯಾರೊಬ್ಬರಿಗೂ ಲಾಕರ್‌ ತೆರೆಯುವ ಅವಕಾಶ ಇರುವುದಿಲ್ಲ. ಲಾಕರ್‌ ತೆರೆಯಬೇಕೆಂದರೆ ಲಾಕರ್‌ ಮಾಸ್ಟರ್‌ ಕೀ ಮತ್ತು ಕಬ್ಬಿಣದ ಸುರಕ್ಷತಾ ಬಾಗಲಿನ ಕೀ ಇದ್ದರೆ ಮಾತ್ರ ಸಾಧ್ಯ. ಮಾಸ್ಟರ್‌ ಕೀ ಮತ್ತು ಕಬ್ಬಿಣದ ಬಾಗಿಲಿನ ಕೀಗಳನ್ನು ಕ್ಯಾಷ್‌ ಬಾಕ್ಸ್‌ ನಲ್ಲಿ ಇರಿಸಲಾಗುತ್ತದೆ. ಲಾಕರ್‌ ನ ಕೀಯನ್ನು ರಾಗಿಣಿ ಅವರು ತಮ್ಮ ಬ್ಯಾಗ್‌ ನಲ್ಲಿಯೇ ಇರಿಸಿಕೊಳ್ಳುತ್ತಿದ್ದರು. ಆಭರಣಗಳನ್ನು ಕದಿಯುವ ಉದ್ದೇಶದಿಂದಲೇ ಕಳ್ಳರು ಅವರ ಬ್ಯಾಗ್‌ ನಿಂದ ಕೀಯನ್ನು ಕಳವು ಮಾಡಿ ಆಭರಣಗಳನ್ನು ಕದ್ದಿದ್ದಾರೆ ಎಂದು ಶಂಕಿಸಲಾಗಿದೆ.

ಅವರು ತಡವಾಗಿ ದೂರು ನೀಡಿದ್ದಾರೆ. ಬ್ಯಾಂಕ್‌ ನಲ್ಲಿ ಆಂತರಿಕ ತಪಾಸಣೆ ನಡೆಯುತ್ತಿದ್ದರಿಂದ ದೂರು ನೀಡಲು ತಡವಾಗಿದೆ ಎಂದು ರಾಗಿಣಿ ತಿಳಿಸಿದ್ದಾರೆ. ಇವರ ಬ್ಯಾಗ್‌ ನಿಂದ ಕೀ ಕದಿಯುವ ಸಿಸಿಟಿವಿ ದೃಶ್ಯಗಳೂ ಲಭ್ಯವಿಲ್ಲ. ಕಳುವಾದ ಅಭರಣಗಳ ಮೌಲ್ಯ ಸುಮಾರು 20 ಲಕ್ಷ ರೂ ಎಂದು ಅಂದಾಜು ಮಾಡಲಾಗಿದೆ. ಬಿ ಎನ್‌ ಎಸ್‌ 306 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬ್ಯಾಂಕ್‌ ಉದ್ಯೋಗಿಗಳನ್ನು ಈ ಸಂಬಂಧ ಪ್ರಶ್ನಿಸಲಾಗುತ್ತದೆ. ಕೀ ಕಳುವಾದ ಕೂಡಲೇ ದೂರು ದಾಖಲಿಸಿದ್ದರೆ ಶಂಕಿತರನ್ನು ಪತ್ತೆ ಮಾಡಲು ಸಾದ್ಯವಾಗುತ್ತಿತ್ತು ಎನ್ನುವುದು ಪೊಲೀಸರು  ಅಭಿಪ್ರಾಯಪಡುತ್ತಾರೆ.

More articles

Latest article