19 ವರ್ಷಗಳಿಂದ ಅಕ್ರಮವಾಗಿ ನೆಲಸಿದ್ದ ಬಾಂಗ್ಲಾದೇಶದ ಪ್ರಜೆ ಬಂಧನ

Most read



ಬೆಂಗಳೂರು : ಬೆಂಗಳೂರು ನಗರದಲ್ಲಿ ಕಳೆದ 19 ವರ್ಷಗಳಿಂದ ಅಕ್ರಮವಾಗಿ ನೆಲಸಿದ್ದ ಬಾಂಗ್ಲಾದೇಶದ ಪ್ರಜೆ ಮಹಮ್ಮದ್‌ ಸಿದ್ದಿಕ್‌ (55) ಎಂಬಾತನನ್ನು ಕಾಡುಗೋಡಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಕಾಡುಗೋಡಿಯ ದೊಡ್ಡಬನಹಳ್ಳಿ ಬಳಿ ಬಾಡಿಗೆ ಮನೆ ಪಡೆದು, ಪತ್ನಿ ಹಾಗೂ ಮಕ್ಕಳ ಜತೆಗೆ ಮಹಮ್ಮದ್ ಸಿದ್ದಿಕ್ ವಾಸಿಸುತ್ತಿದ್ದ. ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸ್ರು ತಿಳಿಸಿದ್ದಾರೆ.

2006ರಲ್ಲಿ ಸಿದ್ದಿಕ್‌ ಭಾರತಕ್ಕೆ ಬಂದಿದ್ದ. ಪಶ್ಚಿಮ ಬಂಗಾಳದ ಶಾಲೆಯೊಂದರಿಂದ ವರ್ಗಾವಣೆ ಪತ್ರ ಪಡೆದಂತೆ ನಕಲಿ ದಾಖಲೆ ಸೃಷ್ಟಿಸಿಕೊಂಡಿದ್ದ. ಅದೇ ದಾಖಲೆಯನ್ನು ಬಳಸಿಕೊಂಡು ಪಾಸ್ಪೋರ್ಟ್, ಮತದಾರರ ಗುರುತಿನ ಚೀಟಿ, ಪಾನ್‌ ಕಾರ್ಡ್ ಸೇರಿದಂತೆ ಅಗತ್ಯ
ದಾಖಲೆಗಳನ್ನು ಮಾಡಿಸಿಕೊಂಡಿದ್ದ ಎಂಬ ಮಾಹಿತಿ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿ ಮಹಮ್ಮದ್ ಸಿದ್ದಿಕ್‌ ಹಣ ಪಡೆದು ಇತರರಿಗೂ ನಕಲಿ ದಾಖಲೆಗಳನ್ನು ಮಾಡಿಸಿಕೊಡುತ್ತಿದ್ದ. ಇದೇ ರೀತಿ 20 ಮಂದಿಗೆ ನಕಲಿ ದಾಖಲೆಗಳನ್ನು ಮಾಡಿಸಿಕೊಟ್ಟಿರುವ ಮಾಹಿತಿ ಲಭ್ಯವಾಗಿದೆ. ಆರೋಪಿ ಸಿದ್ದಿಕ್‌ ಮನೆಯಲ್ಲಿ ಶೋಧ ನಡೆಸಿದಾಗ ಎಂಟು ನಕಲಿ ಆಧಾರ್‌ ಕಾರ್ಡ್‌ಗಳು ಪತ್ತೆಯಾಗಿದ್ದು, ಅವುಗಳನ್ನು ಜಪ್ತಿ ಮಾಡಲಾಗಿದೆ. ಥಣಿಸಂದ್ರದ ಏಜೆಂಟ್‌ ಒಬ್ಬ ನಕಲಿ ದಾಖಲೆಗಳನ್ನು ತಯಾರಿಸಿಕೊಟ್ಟಿದ್ದ ಎಂದು ವಿಚಾರಣೆ ವೇಳೆ ಆರೋಪಿ ಸಿದ್ದಿಕ್‌ ತಿಳಿಸಿದ್ದಾನೆ. ಆರೋಪಿಯ ಹೇಳಿಕೆ ಆಧರಿಸಿ ತನಿಖೆ ಮುಂದುವರೆಸಲಾಗಿದೆ.

More articles

Latest article