ಬೆಂಗಳೂರು: ಬಳ್ಳಾರಿ ಜಿಲ್ಲಾ ಆಸ್ಪತ್ರೆ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವುಗಳ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರಿಗೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಔಷಧ ತಯಾರಿಕಾ ಕಂಪನಿಯ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ನಿನ್ನೆಯೂ ಓರ್ವ ಬಾಣಂತಿ ಮೃತಪಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ನನ್ನ ರಾಜೀನಾಮೆಯಿಂದ ಎಲ್ಲವೂ ಸರಿಯಾಗುತ್ತದೆ ಎನ್ನುವುದಾದರೆ ಅದಕ್ಕೂ ಸಿದ್ಧ. ಇದರಲ್ಲಿ ನನ್ನ ಪ್ರತಿಷ್ಠೆ ಏನಿಲ್ಲ ಎಂದರು.
ಬಳ್ಳಾರಿಯಲ್ಲಿ 9 ಮಂದಿಗೆ ಆರೋಗ್ಯ ಸಮಸ್ಯೆಯಾಗಿತ್ತು. ಇವರಲ್ಲಿ ನಾಲ್ವರು ತೀರಿಕೊಂಡಿದ್ದಾರೆ. ಚಿಕಿತ್ಸೆ ಪಡೆಯುತ್ತಿದ್ದ ಐದನೆಯವರೂ ತೀರಿಕೊಂಡಿದ್ದಾರೆ. ಅವರಿಗೆ ಈ ಹಿಂದೆ ನೀಡಲಾಗಿದ್ದ ಬ್ಯಾಚ್ನ ರಿಂಗರ್ ಲ್ಯಾಕ್ಟೇಟ್ ದ್ರಾವಣ ಕೊಡಲಾಗಿತ್ತು. ಈಗಾಗಲೇ ಕಂಪೆನಿ ವಿರುದ್ಧ ಕ್ರಮಕ್ಕೆ ಮುಂದಾಗಿದ್ದೇವೆ. ಮೃತರಿಗೆ ಬೇರೆ ಆರೋಗ್ಯ ಸಮಸ್ಯೆಯೂ ಇತ್ತು ಎಂದು ತಿಳಿದು ಬಂದಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದರು. ಆದರೆ ಗುರುವಾರ ಮತ್ತೆ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ವೈದ್ಯರು ತಿಳಿಸಿದ್ದರು ಎಂದು ಸಚಿವರು ಹೇಳಿದರು.
ಬಿಜೆಪಿಯವರು ಲೋಕಾಯುಕ್ತಕ್ಕೆ ದೂರು ನೀಡಲು ಯಾವುದೇ ಅಭ್ಯಂತರ ಇಲ್ಲ. ಇಂತಹ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಕ್ರಮ ಆಗಲೇಬೇಕು ಎಂದರು. ಈ ವರ್ಷ ರಾಜ್ಯದಲ್ಲಿ ಈವರೆಗೆ 327 ಬಾಣಂತಿಯರ ಸಾವು ಸಂಭವಿಸಿದೆ. ಎಲ್ಲವನ್ನೂ ಪರಿಶೀಲಿಸಿ ಎಂದು ಸೂಚನೆ ನೀಡಿದ್ದೇವೆ. ನಮ್ಮ ಕಾನೂನುಗಳು ಫಾರ್ಮಾಸ್ಯುಟಿಕಲ್ ಕಂಪನಿಗಳನ್ನು ರಕ್ಷಿಸುವ ಕಾನೂನುಗಳಾಗಿವೆ. ತಪ್ಪು ಮಾಡಿದರೆ ಶಿಕ್ಷೆ ಕೊಡುವಲ್ಲಿ ನಮ್ಮ ಕಾನೂನುಗಳು ವಿಫಲವಾಗಿವೆ ಎಂದು ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದರು.
ಬಳ್ಳಾರಿಯ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಯ ನಂತರ ನೀಡಲಾದ ಐವಿ ದ್ರಾವಣದಿಂದಾಗಿ ನಾಲ್ವರು ಬಾಣಂತಿಯರು ಮೃತಪಟ್ಟಿದ್ದರು. ಗುರುವಾರ ಮತ್ತೊಬ್ಬರು ಬಾಣಂತಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಏತನ್ಮಧ್ಯೆ, ಔಷಧ ತಯಾರಿಸಿದ ಕಂಪನಿ ಮೇಲೆ ಕ್ರಮ ಕೈಗೊಳ್ಳುತ್ತಿದ್ದೇವೆ. ಮೃತ ಬಾಣಂತಿಯರ ಕುಟುಂಬಸ್ಥರಿಗೆ ಪರಿಹಾರ ಘೋಷಿಸಿದ್ದೇವೆ. ಇನ್ಮುಂದೆ ಇಂತಹ ಘಟನೆಗಳು ಆಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಗುಂಡೂರಾವ್ ಹೇಳಿದ್ದಾರೆ.