ಬಲ್ಡೋಟಾ ಕಾರ್ಖಾನೆ ವಿಸ್ತರಣೆಗೆ ಕೊಪ್ಪಳ ಜನರ ವಿರೋಧ: ನಿಲ್ಲಿಸಲು ಸಿಎಂ ಸೂಚನೆ

Most read

ಬೆಂಗಳೂರು: ಜಿಲ್ಲೆಯ ಜನರ ವಿರೋಧ ಹೆಚ್ಚುತ್ತಿದ್ದಂತೆ ಬಲ್ಡೋಟಾ ಸ್ಟೀಲ್‌ ಮತ್ತು ಪವರ್ ಲಿಮಿಟೆಡ್ (ಬಿಎಸ್‌ಪಿಎಲ್‌) ಕಂಪನಿಯು 1.50 ಕೋಟಿ ಟನ್ ಉತ್ಪಾದನಾ ಸಾಮರ್ಥ್ಯದ ಇಂಟಿಗ್ರೇಟೆಡ್‌ ಉಕ್ಕಿನ ಕಾರ್ಖಾನೆಯ ಸಿದ್ಧತಾ ಕಾರ್ಯಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಮುಖ್ಯಮಂತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿ ನಲಿನ್ ಅತುಲ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಅವರಿಗೆ ಸೂಚಿಸಿದ್ದಾರೆ.

‌ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ಪಕ್ಷಗಳ ಜನಪ್ರತಿನಿಧಿಗಳು ಹಾಗೂ ಕೊಪ್ಪಳ ಪರಿಸರ ಹಿತರಕ್ಷಣಾ ವೇದಿಕೆ ಪ್ರಮುಖರು ಮಂಗಳವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿಯಾದರು. ಆಗ ನಿಯೋಗ ಕಾರ್ಖಾನೆ ವಿಸ್ತರಣೆ ಮಾಡಿದರೆ ಜಿಲ್ಲಾ ಕೇಂದ್ರಕ್ಕೆ ವಿಪರೀತ ದೂಳು ಬರುತ್ತದೆ. ಜನರ ಆರೋಗ್ಯದ ಮೇಲೆ ಗಂಭೀರ ದುಷ್ಪಪರಿಣಾಮ ಬೀರುತ್ತದೆ. ಆದ್ದರಿಂದ ವಿಸ್ತರಣೆಗೆ ಅವಕಾಶ ಕೊಡಬಾರದು ಎಂದು ಮನವರಿಕೆ ಮಾಡಿಕೊಟ್ಟರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಈ ಕುರಿತು ತ್ವರಿತ ಕ್ರಮ ವಹಿಸಬೇಕು ಎಂದು ಹೇಳಿದ್ದಾರೆ ಎಂದು ನಿಯೋಗದಲ್ಲಿದ್ದ ಸದಸ್ಯರು ತಿಳಿಸಿದರು.

ಕಾರ್ಖಾನೆ ಆರಂಭಿಸಲು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ‌ ಅನುಮತಿ ಕೊಟ್ಟಿಲ್ಲ. ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಬಗ್ಗೆ ‌ಮಾಧ್ಯಮಗಳಲ್ಲಿ ಪ್ರಕಟವಾದ ವರದಿ ಗಮನಿಸಿದ್ದೇನೆ. ಈ ಕುರಿತು ‌ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರೊಂದಿಗೆ ಸಭೆ ನಡೆಸುವುದಾಗಿ ಸಿ.ಎಂ. ಭರವಸೆ ನೀಡಿದರು. ಕಾರ್ಖಾನೆ ಆರಂಭಕ್ಕೆ ನಡೆಯುತ್ತಿರುವ ಕೆಲಸ ಪರಿಶೀಲಿಸಿ ವರದಿ ನೀಡುವಂತೆ ಸಿ.ಎಂ. ಹೇಳಿದ್ದಾರೆ.

ನಿಯೋಗದಲ್ಲಿ ಸಂಸದ ರಾಜಶೇಖರ ಹಿಟ್ನಾಳ, ಶಾಸಕರಾದ ಜನಾರ್ದನ ರೆಡ್ಡಿ, ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ದೊಡ್ಡನಗೌಡ ಪಾಟೀಲ, ರಾಘವೇಂದ್ರ ಹಿಟ್ನಾಳ, ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ, ಶರಣಗೌಡ ಬಯ್ಯಾಪುರ, ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್, ಮುಖಂಡರಾದ ವೀರೇಶ ಮಹಾಂತಯ್ಯನಮಠ, ಸಂತೋಷ ದೇಶಪಾಂಡೆ, ಶರಣಪ್ಪ ಸಜ್ಜನ, ಮುನಿರಾಬಾದ್ ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ, ಮಾಜಿ ಶಾಸಕರಾದ ಕೆ. ಬಸವರಾಜ ಹಿಟ್ನಾಳ, ಕೆ. ಶರಣಪ್ಪ ಕರಿಯಣ್ಣ ಸಂಗಟಿ ಸೇರಿದಂತೆ ವಿವಿಧ ಪಕ್ಷಗಳ ನಾಯಕರು, ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು.

More articles

Latest article