ಬೆಂಗಳೂರು: ರೌಡಿಶೀಟರ್ ಶಿವಪ್ರಕಾಶ ಅಲಿಯಾಸ್ ಬಿಕ್ಲು ಶಿವ ಹತ್ಯೆ ಪ್ರಕರಣ ಸಂಬಂಧ ಶಾಸಕ ಬೈರತಿ ಬಸವರಾಜ್ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶನಿವಾರ ಆದೇಶ ಹೊರಡಿಸಿದೆ.
9 ದಿನಗಳ ಸಿಐಡಿ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆ ಬೈರತಿ ಅವರನ್ನು ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮುಂದೆ ಹಾಜರು ಪಡಿಸಲಾಗಿತ್ತು. ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಮತ್ತೆ ಸಿಐಡಿ ಕಸ್ಟಡಿಗೆ ಅಧಿಕಾರಿಗಳು ಮನವಿ ಮಾಡಿದರು. ಇನ್ನೂ ತನಿಖೆಗೆ ಸಂಪೂರ್ಣ ಸಹಕಾರ ನೀಡಿಲ್ಲ. ಇನ್ನಷ್ಟು ತನಿಖೆ ಅಗತ್ಯ ಇದೆ ಎಂದು ವಕೀಲರು ವಾದ ಮಂಡಿಸಿದರು.
ಬಳಿಕ ಆರೋಪಿ ಪರ ವಕೀಲರು ಕೂಡ ಪ್ರತಿವಾದ ಮಾಡಿ, ಈಗಾಗಲೇ 9 ದಿನಗಳು ಕಸ್ಟಡಿಗೆ ನೀಡಲಾಗಿದೆ. ವೈದ್ಯಕೀಯ ವರದಿ ಆಧರಿಸಿ ಕಸ್ಟಡಿಗೆ ನೀಡಬಾರದು ಎಂದು ವಾದ ಮಂಡಿಸಿದರು. ಎರಡೂ ಕಡೆ ವಾದ ಆಲಿಸಿದ ನಂತರ ನ್ಯಾಯಾಲಯ ಬೈರತಿ ಬಸವರಾಜ್ ಅವರನ್ನು 5 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ.


