ಚಿನ್ನ ಖರೀದಿ ವಂಚನೆ ಪ್ರಕರಣ; ಆರೋಪಿ ದಂಪತಿಗಳ ಬಿಡುಗಡೆಗೆ ಕೋರ್ಟ್‌ ಆದೇಶ

Most read

ಬೆಂಗಳೂರು:  14 ಕೋಟಿ ರೂ. ಬೆಲೆ ಬಾಳುವ ಚಿನ್ನಾಭರಣ ಪಡೆದು ವಂಚಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಐಶ್ವರ್ಯಾ ಗೌಡ ಹಾಗೂ ಆಕೆಯ ಪತಿ ಕೆ.ಎನ್.ಹರೀಶ್‌ ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಹೈಕೋರ್ಟ್‌ ಆದೇಶ ಹೊರಡಿಸಿದೆ. ಐಶ್ವರ್ಯಾ ಮಾಜಿ ಸಂಸದ
ಡಿಕೆ ಸುರೇಶ್‌ ಅವರ ಸಹೋದರಿ ಎಂದು ಹೇಳಿಕೊಂಡು ಹಲವು ಚಿನ್ನಾಭರಣ ಅಂಗಡಿಗಳಿಗೆ ವಂಚಿಸಿದ್ದರು.

ಈ ಸಂಬಂಧ ಬಂಧಿಸಲ್ಪಟ್ಟು ಜೈಲಿನಲ್ಲಿರುವ ಐಶ್ವರ್ಯಾ ಗೌಡ ಹಾಗೂ ಅವರ ಪತಿ ಕೆ.ಎನ್‌.ಹರೀಶ್‌ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ ಚಂದನಗೌಡರ್‌ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು. ಐಶ್ವರ್ಯಾ ಗೌಡ ಹಾಗೂ ಹರೀಶ್‌ ಪರ ಹಾಜರಾಗಿದ್ದ ವಕೀಲ ಸಂದೇಶ್‌ ಜೆ.ಚೌಟ ಹಾಗೂ ಎಸ್‌. ಸುನಿಲ್‌ ಕುಮಾರ್, ವಾದ ಮಂಡಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನೀಡಿದ್ದ ನೋಟಿಸ್‌ ಅನುಸಾರ ಅರ್ಜಿದಾರರು ಸ್ವ ಇಚ್ಛೆಯಿಂದ ಠಾಣೆಗೆ ತೆರಳಿ ತನಿಖೆಗೆ ಸಹಕರಿಸಿದ್ದಾರೆ. ಆದರೆ ಪೊಲೀಸರು ಏಕಾಏಕಿ ಅವರನ್ನು ಬಂಧಿಸಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಅರ್ಜಿದಾರರನ್ನು ಬಂಧಿಸುವುದಕ್ಕೂ ಮುನ್ನ ಆರೋಪಿಗಳಿಗೆ ಪೊಲೀಸರು ಕಾನೂನುಬದ್ಧವಾಗಿ ನೀಡಬೇಕಾದ ಬಂಧನಕ್ಕೆ ಕಾರಣವಾಗುವ ಅಂಶಗಳನ್ನು ಲಿಖಿತ ರೂಪದಲ್ಲಿ ಒದಗಿಸಿಲ್ಲ.ಇದು ಅರ್ಜಿದಾರರ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆಯಾಗಿದ್ದು, ಅವರ ಬಂಧನವನ್ನು ಕಾನೂನುಬಾಹಿರ ಎಂದು ಘೋಷಿಸಿ ಇಬ್ಬರನ್ನೂ ಬಿಡುಗಡೆ ಮಾಡಲು ಆದೇಶಿಸಬೇಕು  ಎಂದು ವಾದಿಸಿದರು.
ವಾರಾಹಿ ವರ್ಲ್ಡ್ ಆಫ್ ಗೋಲ್ಡ್‌  ಅಂಗಡಿ ಮಾಲೀಕರಾದ ವನಿತಾ ಎಸ್. ಐತಾಳ್ ಪರ ಹಾಜರಾಗಿದ್ದ ವಕೀಲ ಪಿ.ಅರವಿಂದ ಕಾಮತ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಇದೊಂದು ಬಹುಕೋಟಿ ಹಗರಣವಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸುವ ಮುನ್ನ ಮತ್ತು ನಂತರ ಎಲ್ಲಾ ರೀತಿಯ ಕಾನೂನು ಪ್ರಕ್ರಿಯೆಯಗಳನ್ನು ಅನುಸರಿಸಿದ್ದಾರೆ ಎಂದು ವಾದಿಸಿದರು. ಈ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠ, ಅರ್ಜಿದಾರರ ಪರ ವಕೀಲರು ಸಾಂವಿಧಾನಿಕ ಹಕ್ಕಿನ ಉಲ್ಲಂಘನೆ ಕುರಿತು ವಾದ ಮಂಡಿಸಿದ್ದು ಬಿಡುಗಡೆ ಮಾಡುವಂತೆ ಕೋರಿದ್ದಾರೆ. ಹಾಗೆಯೇ ಇದು ಪ್ರತಿಯೊಬ್ಬ ನಾಗರೀಕನ ಸಾಂವಿಧಾನಿಕ ಹಕ್ಕಿನ ರಕ್ಷಣೆ ವಿಷಯವೂ ಆಗಿದೆ. ಆದ್ದರಿಂದ, ಈ ಅರ್ಜಿಯನ್ನು ಮೆರಿಟ್‌ ಆಧಾರದಲ್ಲಿ ನಿರ್ಣಯಿಸಲು ಸಾಧ್ಯವಿಲ್ಲ ಎಂಬ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿತು. ಅರ್ಜಿದಾರರು ಕಾಲಕಾಲಕ್ಕೆ ತನಿಖೆಗೆ ಸಹಕರಿಸಬೇಕು. ಸಾಕ್ಷ್ಯಗಳನ್ನು ನಾಶಪಡಿಸಬಾರದು ಎಂಬ ಷರತ್ತುಗಳನ್ನು ವಿಧಿಸಿ ಕೂಡಲೇ ಇಬ್ಬರನ್ನೂ ಬಿಡುಗಡೆ ಮಾಡುವಂತೆ ಆದೇಶ ನೀಡಿತು.


More articles

Latest article