ಮೀಸಲಾತಿ ವಿರೋಧಿಸಿ ಮಂಡಲ್ ವರದಿಗೆ ವಿರುದ್ಧ ಕಮಂಡಲ್ ಚಳುವಳಿ ಹಮ್ಮಿಕೊಂಡಿದ್ದೇ ಈ ಆರೆಸ್ಸೆಸ್ ಮತ್ತು ಸಂಘ ಪರಿವಾರ. ಮೀಸಲಾತಿ ವಿರೋಧಿಸಿ ನ್ಯಾಯಾಲಯಕ್ಕೆ ಹೋಗಿದ್ದು ಇದೇ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ರಾಜ್ಯಸಭೆಯ ಸದಸ್ಯರಾಗಿದ್ದ ರಾಮಾ ಜೋಯಿಸ್. ಸಂವಿಧಾನಕ್ಕೆ ತಿದ್ದುಪಡಿ ತಂದು ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಗೆ ಮಾತ್ರ ಮೀಸಲಾಗಿದ್ದ ಮೀಸಲಾತಿಯನ್ನು ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೂ ವಿಸ್ತರಿಸಿದ್ದು ಇದೇ ಮೋದಿ ಸರಕಾರ. ಆದರೆ ಈಗ ಚುನಾವಣೆಯಲ್ಲಿ ಹೇಗಾದರೂ ಮಾಡಿ ಬಹುಮತ ಗಳಿಸಲು ಮೀಸಲಾತಿ ಪರ ಎಂದು ಆರೆಸ್ಸೆಸ್ ಹೇಳುತ್ತಿದೆ- ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು
ಆರೆಸ್ಸೆಸ್ ಎನ್ನುವ ಹಿಂದುತ್ವವಾದಿ ಸಂಘದ ಅಂತಿಮ ಗುರಿ ಭಾರತವನ್ನು ಹಿಂದೂ ರಾಷ್ಟ್ರವಾಗಿ ಘೋಷಿಸುವುದು ಹಾಗೂ ಅದಕ್ಕೆ ತಕ್ಕಂತೆ ಈಗಿರುವ ಸಮಾನತೆ ಸಾರುವ ಸಂವಿಧಾನವನ್ನು ಬದಲಾಯಿಸಿ ಮನುಸ್ಮೃತಿ ಆಧಾರಿತ ಸಂವಿಧಾನವನ್ನು ಜಾರಿಗೆ ತರುವುದು.
ಈಗಾಗಲೇ ಬಿಜೆಪಿ ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದು ಸಂಘದ ಉದ್ದೇಶವನ್ನು ಬಿಜೆಪಿ ಸಂಸದರೇ ಸಾರ್ವಜನಿಕವಾಗಿ ಸ್ಪಷ್ಟಪಡಿಸಿದ್ದಾರೆ. ಆದರೆ ಸಾರ್ವಜನಿಕವಾಗಿ ಸಂವಿಧಾನ ಬದಲಾವಣೆಯ ವಿಷಯ ಮುಂಚೂಣಿಯಲ್ಲಿ ತಂದರೆ ಎಲ್ಲಿ ಬಿಜೆಪಿ ಪಕ್ಷಕ್ಕೆ ಚುನಾವಣೆಯಲ್ಲಿ ಹಿನ್ನಡೆಯಾಗುತ್ತದೋ ಎನ್ನುವ ಆತಂಕದಿಂದ ಅನಂತಕುಮಾರ ಹೆಗಡೆ, ನಳಿನ್ ಕುಮಾರ್ ಕಟೀಲ್, ಪ್ರತಾಪ ಸಿಂಹ, ಸಿ.ಟಿ.ರವಿ ಯಂತಹ ಉಗ್ರ ಹಿಂದುತ್ವವಾದಿ ಬಿಜೆಪಿ ನಾಯಕರಿಗೆ ಈ ಸಲ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಡದೆ ಉದ್ದೇಶ ಪೂರ್ವಕವಾಗಿ ಹಿನ್ನೆಲೆಗೆ ಸರಿಸಲಾಗಿದೆ.
ಈಗ ಮತ್ತೆ ಅಧಿಕಾರಕ್ಕೆ ಬರುವವರೆಗೂ ಸಂವಿಧಾನ ಬದಲಾವಣೆ ಹಾಗೂ ಹಿಂದುತ್ವದ ಬಗ್ಗೆ ಮಾತಾಡುವುದನ್ನು ನಿಲ್ಲಿಸಬೇಕು ಎಂದು ನಾಗಪುರದ ಆರೆಸ್ಸೆಸ್ ಕೇಂದ್ರ ಕಚೇರಿಯಿಂದಲೇ ಆದೇಶ ರವಾನೆಯಾಗಿದೆ. ಈ ವಿಷಯಕ್ಕೆ ಪೂರಕವಾಗಿ ಆರೆಸ್ಸೆಸ್ ಸಂಘದ ಹಾಲಿ ಸರಸಂಚಾಲಕರಾದ ಮೋಹನ್ ಭಾಗವತ್ ರವರು ವಡೋದರದಲ್ಲಿ ನಡೆದ ಸಂಘದ ಕಾರ್ಯಕ್ರಮದಲ್ಲಿ ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ.
“ಲೋಕಸಭೆ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಸಂವಿಧಾನ ಬದಲಾವಣೆಯ ಮಾತುಗಳನ್ನು ಆಡಿದರೆ ಅದು ಬಿಜೆಪಿಗೆ ನಷ್ಟವನ್ನುಂಟು ಮಾಡುತ್ತದೆ. ಹೀಗಾಗಿ ಅದನ್ನು ಮೌನವಾಗಿಯೇ ಸಾಧಿಸಬೇಕಿದೆ. ನಮ್ಮಲ್ಲಿ ಸ್ವಲ್ಪ ತಾಳ್ಮೆ ಇರಲಿ” ಎಂದು ಸಂಘಿಗಳಿಗೆ ಕಿವಿಮಾತು ಹೇಳಿದ್ದಾರೆ.
“ಆರೆಸ್ಸೆಸ್ ಅಸ್ತಿತ್ವಕ್ಕೆ ಬಂದು 2025 ಕ್ಕೆ ನೂರು ವರ್ಷಗಳಾಗುತ್ತಿವೆ. ಆದರೆ ಇದನ್ನು ಸಂಭ್ರಮಿಸಲು ನಾವು ಅಂದುಕೊಂಡಿದ್ದನ್ನು ಸಾಧಿಸಿಲ್ಲ. ಹೀಗಾಗಿ ಈ ಸಂಭ್ರಮವನ್ನು ಇನ್ನಷ್ಟು ಕಾಲ ಮುಂದಕ್ಕೆ ಹಾಕಬೇಕಿದ್ದು ಹಿಂದೂರಾಷ್ಟ್ರ ನಿರ್ಮಾಣ ಆದ ನಂತರವೇ ಸಂಘವು ನೂರರ ಸಂಭ್ರಮವನ್ನು ಆಚರಿಸಲಿದೆ. ಕೆಲವೊಂದು ಗುರಿಯನ್ನು ತಲುಪಲು 100 ವರ್ಷ ತೆಗೆದುಕೊಂಡಿದೆ. ಇದು ನಿಜಕ್ಕೂ ನಿಧಾನಗತಿಯ ಸಾಧನೆಯಾಗಿದ್ದು 2000 ವರ್ಷಗಳಿಂದ ನಮ್ಮಲ್ಲಿ ಇದ್ದ ಸಾಮಾಜಿಕ ವ್ಯತ್ಯಾಸವೇ ಇದಕ್ಕೆ ಕಾರಣ” ಎಂದು ಭಾಗವತರು ತಮ್ಮ ಉದ್ದೇಶವನ್ನು ಸ್ಪಷ್ಟಪಡಿಸಿದರು.
ಅವರ ಮಾತುಗಳಿಂದಲೇ ಹಿಂದೂರಾಷ್ಟ್ರ ನಿರ್ಮಾಣದ ಗುರಿ ಸ್ಪಷ್ಟವಾಗಿದ್ದು ಅದನ್ನು ಸಾಧಿಸಲು ಸಂಘದ ಪ್ರಯತ್ನ ಮುಂದುವರೆದಿದೆ. ಸಾಧಿಸಿದ ನಂತರವೇ ಸಂಭ್ರಮಾಚರಣೆ ಮಾಡಲಾಗುತ್ತದಂತೆ. ಸಂಘದ ಪ್ರಕಾರ ಹಿಂದೂ ರಾಷ್ಟ್ರ ನಿರ್ಮಾಣ ಎಂದರೆ ಹಿಂದುತ್ವವಾದಿಗಳ ನೇತೃತ್ವದ ಬ್ರಾಹ್ಮಣಶಾಹಿ ಚಾತುರ್ವರ್ಣ ವ್ಯವಸ್ಥೆಯಾಗಿದೆ. ಅದನ್ನು ಸಾಧಿಸಲು ಅನ್ಯಧರ್ಮ ದ್ವೇಷವನ್ನು ಹೆಚ್ಚಿಸಿ ಹಿಂದೂಗಳನ್ನು ಒಗ್ಗಟ್ಟಾಗಿಸಿ ಹಿಂದುತ್ವವಾದಿ ರಾಷ್ಟ್ರವನ್ನು ಸ್ಥಾಪಿಸುವುದೇ ಮಾರ್ಗವಾಗಿದೆ. ಅವರ ಉದ್ದೇಶ ಸಾಧನೆಗೆ ಅಡ್ಡಿಯಾಗಿರುವುದೇ ಧರ್ಮನಿರಪೇಕ್ಷತೆ ಸಾರುವ ಅಂಬೇಡ್ಕರರ ಸಂವಿಧಾನ.
ಇನ್ನೂ ಮುಂದುವರೆದು ಮೋಹನ ಭಾಗವತರು ” ನಮ್ಮ ಪಕ್ಷದ ಕೆಲವರು ಸಂವಿಧಾನದ ಬದಲಾವಣೆ ಕುರಿತು ಮಾತನಾಡುತ್ತಿದ್ದು, ಅದು ನೇರವಾಗಿ ಚುನಾವಣೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೀಗಾಗಿ ಆ ಕುರಿತು ಹೆಚ್ಚು ಮಾತಾಡದೇ, ಬಹುಮತವನ್ನು ಸಾಧಿಸಿದ ಬಳಿಕ ನಿಧಾನವಾಗಿ ಸಂವಿಧಾನವನ್ನು ಧರ್ಮದ ಶಿಸ್ತಿಗೆ ಅನುಗುಣವಾಗಿ ಬದಲಾಯಿಸುವ ಕೆಲಸ ಮಾಡೋಣ” ಎಂದು ಸಂಘದ ಅಧಿನಾಯಕರು ಕಾರ್ಯಕರ್ತರಿಗೆ ಹೇಳಿದರು.
ಅವರ ಈ ಮಾತುಗಳಿಂದಲೇ ಸ್ಪಷ್ಟವಾಗುತ್ತದೆ ಸಂಘದ ಗುರಿ ಸಂವಿಧಾನ ಬದಲಾವಣೆ. ಸಂವಿಧಾನವನ್ನು ಧರ್ಮದ ಶಿಸ್ತಿಗೆ ಅನುಗುಣವಾಗಿ ಬದಲಾಯಿಸುವುದು ಅಂದರೆ ಸನಾತನ ಮನುಧರ್ಮ ಶಾಸ್ತ್ರದ ಆಧಾರದಲ್ಲಿ ಸಂವಿಧಾನವನ್ನು ಮಾರ್ಪಡಿಸುವುದು. ಅದಕ್ಕಾಗಿ ಬಹುಮತವನ್ನು ಗಳಿಸುವುದು. ಅಲ್ಲಿಯವರೆಗೂ ಸಂವಿಧಾನ ಬದಲಾವಣೆ ಬಗ್ಗೆ ಮಾತಾಡದೇ ಇರುವುದು. ಮತ್ತೆ ಅಧಿಕಾರ ಪಡೆದು ಹಿಂದೂರಾಷ್ಟ್ರ ಅಂದರೆ ಹಿಂದುತ್ವವಾದಿ ರಾಷ್ಟ್ರವನ್ನು ಘೋಷಿಸುವುದು.
ಅಫಘಾನಿಸ್ತಾನದಲ್ಲಿಯೂ ಹೀಗೆಯೇ ಆಗಿತ್ತು. ಅದು ಮುಸ್ಲಿಂ ಬಾಹುಳ್ಯದ ರಾಷ್ಟ್ರವಾಗಿದ್ದರೂ ಆಧುನಿಕತೆಗೆ ತೆರೆದುಕೊಂಡಿತ್ತು. ಆದರೆ ತಾಲಿಬಾನಿ ಧರ್ಮಾಂಧರು ಯಾವಾಗ ಈ ದೇಶವನ್ನು ಮತ್ತೆ ವಶಪಡಿಸಿಕೊಂಡು ಅಧಿಕಾರವನ್ನು ಮರುಸ್ಥಾಪಿಸಿದರೋ ಆಗ ಕಟ್ಟರ್ ಮುಸ್ಲಿಂ ರಾಷ್ಟ್ರವೆಂದು ಘೋಷಿಸಲಾಯ್ತು. ಷರಿಯತ್ ಕಾನೂನುಗಳನ್ನು ದೇಶದ ಜನರ ಮೇಲೆ ಹೇರಲಾಯ್ತು. ತಮ್ಮಿಷ್ಟದ ಬಟ್ಟೆ ತೊಟ್ಟು ತಮಗೆ ಬೇಕಾದ ನೌಕರಿಯನ್ನು ಮಾಡುತ್ತಾ ನೆಮ್ಮದಿಯಾಗಿದ್ದ ಮಹಿಳೆಯರನ್ನು ಬುರ್ಕಾದಲ್ಲಿ ಬಂಧಿಸಿ ಮನೆಯೊಳಗೆ ಇರಿಸಲಾಯ್ತು. ಮಹಿಳೆಯರಿಗೆ ಶಿಕ್ಷಣ ಉದ್ಯೋಗವನ್ನು ನಿರ್ಬಂಧಿಸಲಾಯ್ತು. ಅಸಮಾನ ವ್ಯವಸ್ಥೆ ಜಾರಿಗೆ ಬಂದಿತು. ಪ್ರಶ್ನಿಸಿದವರಿಗೆ ಕ್ರೂರ ಶಿಕ್ಷೆ ವಿಧಿಸಲಾಯ್ತು. ಈಗಲೂ ಈ ದೇಶದ ಬಹುಸಂಖ್ಯಾತರು ಭಯದ ನೆರಳಲ್ಲೇ ಬದುಕುವಂತಾಗಿದೆ.
ಅದೇ ರೀತಿ ಭಾರತದಲ್ಲಿ ಈ ಹಿಂದುತ್ವವಾದಿ ಶಕ್ತಿಗಳು ಪ್ರಜಾಪ್ರಭುತ್ವದ ಮಾರ್ಗದಲ್ಲೇ ಅಧಿಕಾರವನ್ನು ಕಬಳಿಸಿ ಮತ್ತೆ ಬಹುಮತ ಪಡೆದಿದ್ದೇ ಆದರೆ ಮೋಹನ್ ಭಾಗವತರು ಹೇಳಿದಂತೆ ಹಿಂದೂ ಧರ್ಮಾಧಾರಿತ ಸಂವಿಧಾನ ಜಾರಿಯಾಗುವುದು ಖಂಡಿತ. ಹಾಗೇನಾದರೂ ಆಗಿದ್ದೇ ಆದಲ್ಲಿ ಶೂದ್ರರು, ದಲಿತರು, ಮಹಿಳೆಯರು ಎರಡನೇ ದರ್ಜೆ ಪ್ರಜೆಗಳಂತೆ ಗುಲಾಮಗಿರಿಗೆ ಒಳಗಾಗಿ ಬದುಕುವುದಂತೂ ನಿಶ್ಚಿತ. ಅಲ್ಲಿ ಕರಾಳ ಷರಿಯತ್ ಕಾನೂನುಗಳು ಬಂದಂತೆ ಇಲ್ಲಿ ಮನುಸ್ಮೃತಿಯ ನೀತಿ ನಿಯಮಗಳು ಕಾಯಿದೆಯಾಗುವುದು ಖಚಿತ.
ಅದಕ್ಕಾಗಿಯೇ ಮೋದಿಯವರು “ಇಸ್ ಬಾರ್ ಚಾರ್ ಸೌ ಪಾರ್” ಎಂದು ಹೇಳುತ್ತಿದ್ದಾರೆ. ಪ್ರಜಾಪ್ರಭುತ್ವದ ಅಂಗಗಳನ್ನು ತಮ್ಮ ಕೈಗೊಂಬೆಯಾಗಿಸಿ ಕೊಂಡಿದ್ದಾರೆ. ತನಿಖಾ ಸಂಸ್ಥೆಗಳನ್ನು ಮನಬಂದಂತೆ ಬಳಸುತ್ತಿದ್ದಾರೆ. ಚುನಾವಣಾ ಆಯೋಗದಲ್ಲೇ ತಮ್ಮ ಮಾತು ಕೇಳುವವರನ್ನು ಆಯುಕ್ತರನ್ನಾಗಿಸಿದ್ದಾರೆ. ಚುನಾವಣೆಗೂ ಮುನ್ನವೇ ಪ್ರತಿಪಕ್ಷದ ಅಭ್ಯರ್ಥಿಗಳನ್ನೇ ಕೊಂಡುಕೊಂಡು ಅವಿರೋಧ ಗೆಲುವನ್ನೂ ದಾಖಲಿಸುತ್ತಿದ್ದಾರೆ. ಇಷ್ಟೆಲ್ಲಾ ಮಾಡಿದರೂ ನಿರೀಕ್ಷಿಸಿದಷ್ಟು ಗೆಲುವು ಸಾಧ್ಯವಿಲ್ಲವೆಂಬುದು ಮನದಟ್ಟಾಗಿ ಮತ್ತೆ ಕೋಮುಭಾವನೆ ಪ್ರಚೋದಿಸುವಂತಹ ಭಾಷಣ ಮಾಡುತ್ತಿದ್ದಾರೆ. ಶತಾಯ ಗತಾಯ ಬಹುಮತ ಸಾಧಿಸಲೇಬೇಕು. ಹಿಂದೂ ರಾಷ್ಟ್ರ ನಿರ್ಮಿಸಲೇ ಬೇಕು ಹಾಗೂ ಸನಾತನ ಧರ್ಮಾಧಾರಿತ ಸಂವಿಧಾನ ಜಾರಿಗೆ ತಂದು ಆರೆಸ್ಸೆಸ್ ಸಂಘದ ಶತಮಾನೋತ್ಸವ ಸಂಭ್ರಮವನ್ನು ಆಚರಿಸಬೇಕು ಎನ್ನುವುದೇ ಮೋದಿಯವರ ಆಶಯ ಹಾಗೂ ಮೋಹನ್ ಭಾಗವತರ ಸಂಕಲ್ಪ.
ಇದನ್ನೂ ಓದಿ- ಅಭಿವೃದ್ಧಿ ಎಂಬ ಭ್ರಮೆ
ಸಂವಿಧಾನ ಬದಲಾವಣೆ ಅಜೆಂಡಾ ಕುರಿತು ಯಾವಾಗ ಪ್ರತಿಪಕ್ಷಗಳು ಧ್ವನಿ ಎತ್ತಿದವೋ ಆಗ ಮೋದಿಯವರ ವರಸೆಯೇ ಬದಲಾಯಿತು. ವಿರೋಧ ಪಕ್ಷಗಳ ಈ ಅಸ್ತ್ರವನ್ನು ಪ್ರತಿಪಕ್ಷಗಳತ್ತ ತಿರುಗಿಸಿದರು. “ಕಾಂಗ್ರೆಸ್ ಪಕ್ಷ ಸಂವಿಧಾನವನ್ನು ಬದಲಾಯಿಸಿ ಹಿಂದೂಗಳ ಆಸ್ತಿಯನ್ನು ಮುಸಲ್ಮಾನರಿಗೆ ಹಂಚುತ್ತದೆ” ಎನ್ನುವ ಸುಳ್ಳನ್ನು ಜೋರಾಗಿ ಹೇಳಲು ತೊಡಗಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ಕೊಡುತ್ತಾರೆ ಎಂದು ಧರ್ಮದ್ವೇಷದ ಅಪಪ್ರಚಾರ ಶುರುವಿಟ್ಟರು.
ಮೋದಿ ಮಾತಿಗೆ ಪೂರಕವಾಗಿ ಮಾತಾಡಿದ ಮೋಹನ್ ಭಾಗವತರು “ಮೀಸಲಾತಿಗೆ ನಮ್ಮ ವಿರೋಧವಿಲ್ಲ” ಎಂದೂ ಹೇಳಿಕೆ ಕೊಟ್ಟು ಆರೆಸ್ಸೆಸ್ ಮೀಸಲಾತಿ ವಿರೋಧಿ ಎನ್ನುವ ಹಣೆಪಟ್ಟಿಯಿಂದ ತಾತ್ಕಾಲಿಕವಾಗಿ ಅದನ್ನು ಹೊರತರಲು ಯತ್ನಿಸಿದರು. ಆದರೆ ಮೀಸಲಾತಿ ವಿರೋಧಿಸಿ ಮಂಡಲ್ ವರದಿಗೆ ವಿರುದ್ಧ ಕಮಂಡಲ್ ಚಳುವಳಿ ಹಮ್ಮಿಕೊಂಡಿದ್ದೇ ಈ ಆರೆಸ್ಸೆಸ್ ಮತ್ತು ಸಂಘ ಪರಿವಾರ. ಹಿಂದೂ ಜಾತಿ ಸಮುದಾಯಗಳನ್ನು ಮೀಸಲಾತಿ ವಿರುದ್ಧ ಎತ್ತಿಕಟ್ಟಿ ದೇಶಾದ್ಯಂತ ದಂಗೆ ಎಬ್ಬಿಸಿ ಹಲವಾರು ಅಮೂಲ್ಯ ಜೀವಗಳ ಸಾವಿಗೆ ಕಾರಣವಾಗಿದ್ದರ ಹಿಂದೆ ಇದ್ದಿದ್ದೂ ಇದೇ ಆರೆಸ್ಸೆಸ್. ಮೀಸಲಾತಿ ವಿರೋಧಿಸಿ ನ್ಯಾಯಾಲಯಕ್ಕೆ ಹೋಗಿದ್ದು ಇದೇ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ರಾಜ್ಯಸಭೆಯ ಸದಸ್ಯರಾಗಿದ್ದ ರಾಮಾ ಜೋಯಿಸ್. ಸಂವಿಧಾನಕ್ಕೆ ತಿದ್ದುಪಡಿ ತಂದು ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಗೆ ಮಾತ್ರ ಮೀಸಲಾಗಿದ್ದ ಮೀಸಲಾತಿಯನ್ನು ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೂ ವಿಸ್ತರಿಸಿದ್ದು ಇದೇ ಮೋದಿ ಸರಕಾರ. ಆದರೆ ಈಗ ಚುನಾವಣೆಯಲ್ಲಿ ಹೇಗಾದರೂ ಮಾಡಿ ಬಹುಮತ ಗಳಿಸಲು ಮೀಸಲಾತಿ ಪರ ಎಂದು ಆರೆಸ್ಸೆಸ್ ಹೇಳುತ್ತಿದೆ.
ಇದೆಲ್ಲಾ ಕೇವಲ ಬಹುಮತ ಪಡೆಯಲು ಸಂಘ ಪರಿವಾರ ಮಾಡುತ್ತಿರುವ ಬೃಹನ್ನಾಟಕವಾಗಿದೆ. ಇವರ ಕುತಂತ್ರವನ್ನು ಈ ಸಲ ಈ ದೇಶದ ಜನ ಅರ್ಥಮಾಡಿ ಕೊಳ್ಳಬೇಕಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳ ಅಭ್ಯರ್ಥಿಗಳನ್ನು ಸೋಲಿಸಲೇ ಬೇಕಿದೆ. ಯಾಕೆಂದರೆ ಪ್ರಜಾಪ್ರಭುತ್ವ ಉಳಿಯಬೇಕಿದೆ. ಸಮಾನತೆ ಸಾರುವ ಸಂವಿಧಾನ ಮುಂದುವರೆಯಬೇಕಿದೆ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ-ಕಡಿಮೆ ಮತದಾನ ; ಯಾರು ಕಾರಣ?