ರಾಣೆಬೆನ್ನೂರು: ಇಂದಿನ ಊರುಗಳಲ್ಲಿ ದೊಡ್ಡದೊಡ್ಡ ದೇವಾಲಯಗಳು ಏಳುತ್ತಿವೆ, ಶಾಲೆಗಳು ಬೀಳುತ್ತಿವೆ ಇದು ಬಾಬಾ ಸಾಹೇಬ ಅಂಬೇಡ್ಕರರ ತತ್ವಾದರ್ಶಗಳನ್ನು ಪಾಲಿಸದೇ ಇರುವುದರ ಪ್ರತೀಕವಾಗಿದೆ ಎಂದು ಪ್ರಾಂಶುಪಾಲ ಡಾ. ಎಸ್.ಪಿ. ಗೌಡರ ಅಭಿಪ್ರಾಯ ಪಟ್ಟರು.
ಸುಣಕಲ್ಲಬಿದರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಮಹಾ ಪರಿನಿಬ್ಬಾಣ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಾಬಾಸಾಹೇಬರು ಕೇವಲ ಒಬ್ಬ ವ್ಯಕ್ತಿಯಲ್ಲ, ಅವರೊಂದು ಶಕ್ತಿ. ಅಸ್ಪೃಶ್ಯತೆ, ಬಡತನ ಮತ್ತು ಅಸಮಾನತೆಯ ವಿರುದ್ಧ ಹೋರಾಡಿ, ಕೋಟ್ಯಂತರ ಶೋಷಿತರ ಬಾಳಿನಲ್ಲಿ ಬೆಳಕು ಮೂಡಿಸಿದವರು. ಅವರು ನಮಗೆ ನೀಡಿದ ಮೂಲಮಂತ್ರ ಶಿಕ್ಷಣ, ಸಂಘಟನೆ ಮತ್ತು ಹೋರಾಟ. ಕೇವಲ ಶಿಕ್ಷಣವೊಂದೇ ಸಮಾಜದ ಬದಲಾವಣೆಗೆ ಮತ್ತು ಮನುಷ್ಯನ ಏಳಿಗೆಗೆ ದಾರಿ ಎಂದು ಅವರು ನಂಬಿದ್ದರು. ಎಷ್ಟೇ ಕಷ್ಟ ಬಂದರೂ ಛಲ ಬಿಡದೆ ಓದಿ, ವಿಶ್ವದ ಶ್ರೇಷ್ಠ ವಿದ್ವಾಂಸರಾಗಿ ಹೊರಹೊಮ್ಮಿದರು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಾಂಸ್ಕೃತಿಕ ವಿಭಾಗ ಸಂಚಾಲಕ ಡಾ. ರವಿ ಎಂ. ಸಿದ್ಲಿಪುರ ಅವರು ಡಿಸೆಂಬರ್ 6, 1956 ರಂದು ಅಂಬೇಡ್ಕರ್ ಅವರು ಇಹಲೋಕ ತ್ಯಜಿಸಿದರು. ಬೌದ್ಧ ಧರ್ಮದ ತತ್ವದಂತೆ, ನಿರ್ವಾಣ ಹೊಂದಿದ ಜ್ಞಾನಿಯ ಮರಣವನ್ನು ‘ಮಹಾಪರಿನಿಬ್ಬಾಣ’ ಎಂದು ಕರೆಯಲಾಗುತ್ತದೆ. ಶಾಂತಿ, ಅಹಿಂಸೆ ಮತ್ತು ಕರುಣೆಯ ಮಾರ್ಗದಲ್ಲಿ ನಡೆದ ಬಾಬಾಸಾಹೇಬರ ಸ್ಮರಣಾರ್ಥ ಈ ದಿನವನ್ನು ಆಚರಿಸಲಾಗುತ್ತದೆ ಎಂದರು.
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ, ದೇಶಕ್ಕೆ ಒಂದು ಬಲಿಷ್ಠವಾದ ಸಂವಿಧಾನವನ್ನು ನೀಡುವ ಗುರುತರ ಜವಾಬ್ದಾರಿಯನ್ನು ಅವರು ಹೊತ್ತರು. ಇಂದು ನಾವು ಅನುಭವಿಸುತ್ತಿರುವ ವಾಕ್ ಸ್ವಾತಂತ್ರ್ಯ, ಸಮಾನತೆ ಮತ್ತು ಹಕ್ಕುಗಳು ಅಂಬೇಡ್ಕರ್ ಅವರು ಬರೆದ ಸಂವಿಧಾನದ ಕೊಡುಗೆಯಾಗಿದೆ.
ಇಂದು ಕೇವಲ ಅಂಬೇಡ್ಕರ್ ಅವರ ಫೋಟೋಗೆ ಹೂವು ಹಾಕಿ ಪೂಜಿಸಿದರೆ ಸಾಲದು, ಅವರ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜಾತಿ-ಭೇದ ಮರೆತು, ನಾವೆಲ್ಲರೂ ಭಾರತೀಯರು ಎಂದು ಬಾಳಬೇಕು. ಸಂವಿಧಾನವನ್ನು ಗೌರವಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ರೇವಣಸಿದ್ದಪ್ಪ ಕೆ.ಬಿ., ಡಾ. ಬಿಕೆ ಮಂಜುನಾಥ, ಪ್ರೊ. ಅಂಬಿಕಾ ಹೊಸಮನಿ, ಪ್ರೊ. ರವಿಕುಮಾರ್ ಎಸ್‌ಯು, ಡಾ. ಹೊನ್ನಪ್ಪ ಹೊನ್ನಪ್ಪನವರ್, ಅಧೀಕ್ಷಕ ಸತೀಶ್ ಎಂ. ಮತ್ತು ಅತಿಥಿ ಉಪನ್ಯಾಸಕರು, ಎಲ್ಲಾ ವಿದ್ಯಾರ್ಥಿಗಳಿದ್ದರು.


