ಬೆಂಗಳೂರು: ಆಯುಧ ಪೂಜೆ ಸಂದರ್ಭದಲ್ಲಿ ಸ್ವಚ್ಚತೆಗಾಗಿ ಮಿತವಾಗಿ ಹಾಗೂ ನ್ಯಾಯಯುತವಾಗಿ ನೀರಿನ ಬಳಕೆಯನ್ನು ಮಾಡುವಂತೆ ಹಾಗೂ ಶುದ್ದ ಕುಡಿಯುವ ನೀರನ್ನು ಅನಗತ್ಯವಾಗಿ ವ್ಯರ್ಥ ಆಗದ ರೀತಿಯಲ್ಲಿ ಕಾಳಜಿ ವಹಿಸುವಂತೆ ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ ರಾಮ್ ಪ್ರಸಾತ್ ಮನೋಹರ್ ಮನವಿ ಮಾಡಿಕೊಂಡಿದ್ದಾರೆ.
ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆಯುಧ ಪೂಜೆ ಸಂಧರ್ಭದಲ್ಲಿ ಸಾರ್ವಜನಿಕರು ಸ್ವಚ್ಚತಾ ಕಾರ್ಯಗಳನ್ನು ಕೈಗೊಳ್ಳುತ್ತಾರೆ. ಈ ಸಂಧರ್ಭದಲ್ಲಿ ಬಳಸುವ ನೀರಿನ ಪ್ರಮಾಣದ ಬಗ್ಗೆ ಕಾಳಜಿ ಇರಬೇಕು. ಸ್ವಚ್ಚತೆಗಾಗಿ ನೀರನ್ನು ಬಳಸುವಾಗಿ ಮಿತವಾಗಿ ಹಾಗೂ ನ್ಯಾಯಯುತವಾಗಿ ಬಳಕೆ ಮಾಡಬೇಕು. ಕಾವೇರಿ ನದಿಯ ನೀರು ಬಹಳಷ್ಟು ಪವಿತ್ರವಾಗಿದೆ. ಇದನ್ನು ನ್ಯಾಯಯುತವಾಗಿ ಬಳಕೆ ಮಾಡಬೇಕು. ಅನಗತ್ಯವಾಗಿ ವ್ಯರ್ಥ ಮಾಡುವುದು ಸರಿಯಲ್ಲ ಎಂದು ಮನವಿ ಮಾಡಿಕೊಂಡಿದ್ದಾರೆ.