ಅಯೋಧ್ಯೆ: ಉತ್ತರ ಭಾರತದಲ್ಲಿ ಪಾನ್ ಉಗಿದು ಸಾರ್ವಜನಿಕ ಸ್ಥಳಗಳನ್ನು ಗಬ್ಬೆಬ್ಬಿಸುವುದು ಮಾಮೂಲಿ ಸಂಗತಿ. ಇದೀಗ ಹೊಸದಾಗಿ ಆರಂಭಗೊಂಡ ಅಯೋಧ್ಯಾ ಧಾಮ್ ರೈಲ್ವೆ ನಿಲ್ದಾಣವನ್ನೂ ಬಿಡದ ಯಾತ್ರಿಗಳು ಪಾನ್ ಉಗಿದು ಗಲೀಜು ಮಾಡುತ್ತಿದ್ದಾರೆ.
ಪ್ರಯಾಣಿಕರೊಬ್ಬರು ರೈಲ್ವೆ ನಿಲ್ದಾಣದಲ್ಲಿ ಪಾನ್ ಉಗುಳುವಿಕೆಯಿಂದ ಗಲೀಜಾಗಿರುವ ರೈಲ್ವೆ ನಿಲ್ದಾಣದ ನೆಲವನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣ ರೆಡ್ಡಿಟ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ವಿಡಿಯೋ ವೈರಲ್ ಆಗಿದ್ದು, ಇದನ್ನು ನೋಡಿದ ಬಳಕೆದಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೊಸದಾಗಿ ಆರಂಭವಾದ ರೈಲ್ವೆ ನಿಲ್ದಾಣವನ್ನೂ ಹೀಗೆ ಗಲೀಜು ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ.
Ok_Background_4323 ಎಂಬ ಐಡಿಯಿಂದ ಏಳು ಸೆಕೆಂಡ್ ಗಳ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ಅಯೋಧ್ಯಾ ಧಾಮ್ ರೈಲ್ವೆ ನಿಲ್ದಾಣದ ನೆಲವು ಪಾನ್ ಕಲೆಯಿಂದ ಗಲೀಜಾಗಿರುವುದನ್ನು ತೋರಿಸುತ್ತದೆ.
ಇದಕ್ಕೂ ಮುನ್ನ, ಅಯೋಧ್ಯಾ ಧಾಮ್ ರೈಲ್ವೆ ನಿಲ್ದಾಣದ ಸ್ವಚ್ಛತೆ ಸರಿ ಇಲ್ಲ ಎಂಬ ಅನೇಕ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಅಲ್ಲಿನ ಸ್ಯಾನಿಟೈಸೇಷನ್ ಕಂಟ್ರಾಕ್ಟರ್ ಗೆ 50,000 ರುಪಾಯಿ ದಂಡ ವಿಧಿಸಲಾಗಿತ್ತು.