ಬೆಂಗಳೂರು: ಟಿನ್ ಫ್ಯಾಕ್ಟರಿಯಿಂದ ಕೋರಮಂಗಲಕ್ಕೆ ಹೋಗಲು ಉಬರ್, ಓಲಾದಲ್ಲಿ ಎಷ್ಟು ಚಾರ್ಜ್ ಮಾಡಬಹುದು? ಬೆಂಗಳೂರಿನಲ್ಲಿ ಎಲ್ಲಿಂದ ಎಲ್ಲಿಗೆ ಹೋದರೂ ಒಂದು ಆಟೋ ದರ ಒಂದು ಸಾವಿರ ರುಪಾಯಿ ದಾಟುವುದಿಲ್ಲ. ಆದರೆ ಇಲ್ಲೊಂದು ವಿಚಿತ್ರ ಘಟನೆ ಸಂಭವಿಸಿದ್ದು, ಉಬರ್ ಆಟೋ ಬುಕ್ ಮಾಡಿದ ವ್ಯಕ್ತಿಯೊಬ್ಬರಿಗೆ 1.03 ಕೋಟಿ ರುಪಾಯಿ ದರ ವಿಧಿಸಲಾಗಿದೆ.
ಆಂಧ್ರಪ್ರದೇಶ ಮೂಲದ ವ್ಯಕ್ತಿಯೊಬ್ಬರು ಟಿನ್ ಫ್ಯಾಕ್ಟರಿಯಿಂದ ಕೋರಮಂಗಲಕ್ಕೆ ಆಟೋ ಬುಕ್ ಮಾಡಿದ್ದರು. ಇದಕ್ಕಾಗಿ ಉಬರ್ ಸಂಸ್ಥೆ ವಿಧಿಸಿದ ದರ ನೋಡಿ ಗ್ರಾಹಕ ಕಂಗಾಲಾಗಿ ಹೋಗಿದ್ದಾನೆ. ಪ್ರಯಾಣದ ಬಳಿಕ 1,03,11,055 ಪಾವತಿಸುವಂತೆ ಆಪ್ ನಲ್ಲಿ ಹೇಳಲಾಗಿದೆ.
ಆಟೋ ದರವನ್ನು ನೋಡುತ್ತಿದ್ದಂತೆ ಗಾಬರಿಯಾದ ಪ್ರಯಾಣಿಕ ಈ ಬಗ್ಗೆ ಚಾಲಕನೊಂದಿಗೆ ಮಾತುಕತೆ ನಡೆಸಿದ್ದಾರೆ. ತಾಂತ್ರಿಕ ತೊಂದರೆಯಿಂದ ಈ ರೀತಿ ಆಗಿರಬಹುದು ಎಂದು ಚಾಲಕ ಹೇಳಿದ್ದಾರೆ.
ಒಂದು ಕೋಟಿಗೂ ಹೆಚ್ಚು ಆಟೋ ದರ ವಿಧಿಸಿದ ಕುರಿತು ಆಟೋ ಚಾಲಕ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಈಗ ಅದು ವೈರಲ್ ಆಗಿದೆ.
ಟಿನ್ ಫ್ಯಾಕ್ಟರಿಯಿಂದ ಕೋರಮಂಗಲಕ್ಕೆ 17.8 ಕಿ.ಮೀ ಪ್ರಯಾಣ ನಡೆಸಬೇಕಿದ್ದು, ಪ್ರಯಾಣದ ಅವಧಿ ಸರಿಸುಮಾರು 53 ನಿಮಿಷಗಳು ಮಾತ್ರ. ಇಷ್ಟು ಪ್ರಯಾಣಕ್ಕೆ ಉಬರ್ ಅಥವಾ ಓಲಾದಲ್ಲಿ 400 ರಿಂದ 500 ರೂಪಾಯಿ ಆಗಬಹುದು.