ಬೆಂಗಳೂರು: ಗೃಹ ಸಚಿವ ಡಾ. ಜಿ. ಪರಮೇಶ್ವರ ನೇತೃತ್ವದಲ್ಲಿ ಕಾಂಗ್ರೆಸ್ ನ ದಲಿತ ಶಾಸಕರ ಸಭೆ ಆಗಸ್ಟ್ 2ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ಪರಮೇಶ್ವರ್ ಅವರ ನಿವಾಸದಲ್ಲಿ ನಡೆಯಲಿರುವ ಈ ಸಭೆಗೆ ದಲಿತ ಸಮುದಾಯದ ಎಡಗೈ ಹಾಗೂ ಬಲಗೈ ಎರಡೂ ಸಮುದಾಯಕ್ಕೆ ಸೇರಿದ ಸಚಿವರು ಹಾಗೂ ಶಾಸಕರಿಗೆ ಆಹ್ವಾನ ನೀಡಲಾಗುತ್ತದೆ. ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸುವ ಸಂಬಂಧ ಈಗಾಗಲೇ ಸಮೀಕ್ಷೆ ಮುಗಿದಿರುವ ಕಾರಣ ಮುಂದಿನ ನಿರ್ಧಾರಗಳ ಬಗ್ಗೆ ಚರ್ಚಿಸಲು ಈ ಸಭೆ ಆಯೋಜಿಸಲಾಗಿದೆ ಎಂದು ಪರಮೇಶ್ವರ್ ಆಪ್ತರು ತಿಳಿಸಿದ್ದಾರೆ.
ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್‌ದಾಸ್ ನೇತೃತ್ವದ ಏಕ ಸದಸ್ಯ ಆಯೋಗವು ಆಗಸ್ಟ್ 4ರಂದು ಒಳ ಮೀಸಲಾತಿ ಸಂಬಂಧಿಸಿದ ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆ ಇದೆ ಎಂದೂ ಮೂಲಗಳು ಖಚಿತಪಡಿಸಿವೆ.