ಬೆಂಗಳೂರು: ದೃಷ್ಟಿದೋಷ ಹೊಂದಿರುವ ಪ್ರಯಾಣಿಕರ ಅನುಕೂಲಕ್ಕಾಗಿ ರಾಜ್ಯದ ಎಲ್ಲಾ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಮುಂದಿನ 2 ವರ್ಷಗಳಲ್ಲಿ ಬಸ್ ಸಂಚಾರ ವಿವರಗಳ ಧ್ವನಿವರ್ಧಕ ಪ್ರಕಟಣೆಯ ಆಡಿಯೊ ವ್ಯವಸ್ಥೆ (ಆಡಿಯೊ ಅನೌನ್ಸ್‌ಮೆಂಟ್ ಸಿಸ್ಟಂ) ಕಲ್ಪಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಈ ಸಂಬಂಧ 2022ರಲ್ಲಿ ದೃಷ್ಟಿದೋಷ ಹೊಂದಿರುವ ಹೈಕೋರ್ಟ್ ವಕೀಲ ಎನ್.ಶ್ರೇಯಸ್ ಮತ್ತು ಶ್ರೇಯಸ್ ಗ್ಲೋಬಲ್ ಟ್ರಸ್ಟ್ ಫಾರ್ ಸೋಷಿಯಲ್ ಕಾಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಎನ್. ಕೃತಿಕಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿಅರವಿಂದ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ.
ವಿವಿಧ ಬಸ್ ನಿಲ್ದಾಣಗಳಲ್ಲಿ ಬಸ್ ಗಳ ಆಗಮನ ಮತ್ತು ನಿರ್ಗಮನದ ಸ್ಥಳಗಳಲ್ಲಿ ದೃಷ್ಟಿದೋಷ ಹೊಂದಿದವರೂ ಸೇರಿದಂತೆ ಎಲ್ಲಾ ರೀತಿಯ ಅಂಗವಿಕಲರ ಅನುಕೂಲಕ್ಕಾಗಿ ಬಸ್‌ಗಳಲ್ಲಿ ಆಡಿಯೊ ಅನೌನ್ಸ್‌ಮೆಂಟ್ ಸಿಸ್ಟಂ (ಎಎಎಸ್) ಕಾರ್ಯ ನಿರ್ವಹಿಸುವ ವ್ಯವಸ್ಥೆ ಕಲ್ಪಿಸುವ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದೆ. ಅಂಗವಿಕಲರ ಅನುಕೂಲಕ್ಕಾಗಿ ಧ್ವನಿವರ್ಧಕ ಪ್ರಕಟಣೆಯ ಆಡಿಯೊ ವ್ಯವಸ್ಥೆ (ಎಎಎಸ್) ಯನ್ನು ರಾಜ್ಯದ ಪ್ರತಿಯೊಂದು ಜಿಲ್ಲೆ ಮತ್ತು ತಾಲ್ಲೂಕುಗಳ ಎಲ್ಲಾ ಪ್ರಮುಖ ಬಸ್ ನಿಲ್ದಾಣ ಮತ್ತು ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಮತ್ತು ಇಳಿಸುವ ಸ್ಥಳಗಳಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಈ ಯೋಜನೆಯು ನಿರಂತರವಾಗಿ ಮುಂದುವರೆಸಬೇಕು. ಇದಕ್ಕಾಗಿ ಬಜೆಟ್‌ನಲ್ಲಿ ಸಾಕಷ್ಟು ಅನುದಾನವನ್ನು ಮೀಸಲಿರಿಸಬೇಕು. ಈ ಯೋಜನೆ ಮುಂದಿನ ಎರಡು ವರ್ಷಗಳಲ್ಲಿ ಜಾರಿಗೊಳ್ಳಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸ್ಪಷ್ಟವಾಗಿ ತಿಳಿಸಿದೆ.
ಇದಕ್ಕಾಗಿ ಸುಧಾರಿತ ತಾಂತ್ರಿಕ ಉಪಕರಣ ಮತ್ತು ಸೌಲಭ್ಯಗಳನ್ನು ಬಳಸಿಕೊಳ್ಳುವಂತೆಯೂ ನ್ಯಾಯಪೀಠ ಪ್ರತಿವಾದಿಗಳಾದ ರಾಜ್ಯ ಸರ್ಕಾರ ಹಾಗೂ ಸಾರಿಗೆ ನಿಗಮಗಳಿಗೆ ನಿರ್ದೇಶಿಸಿದೆ.
ಈ ಹಿಂದೆ ಆಡಿಯೊ ಅನೌನ್ಸ್‌ಮೆಂಟ್ ಯೋಜನೆ ಜಾರಿಯಲ್ಲಿತ್ತು. ಆದರೆ ನಂತರ ಸ್ಥಗಿತಗೊಂಡಿತ್ತು. ಈ ಸೌಲಭ್ಯವನ್ನು ಪುನಾರಂಭಿಸಲು ಕ್ರಮ ಕೈಗೊಂಡಿರುವ ಅಧಿಕಾರಿಗಳನ್ನು ನ್ಯಾಯಾಲಯ ಅಭಿನಂದಿಸಿದೆ.