ಗಾಝಾ ಮೇಲೆ ಮತ್ತೆ ಇಸ್ರೇಲ್‌ ಬಾಂಬ್‌ ದಾಳಿ; ಶಾಲೆಯಲ್ಲಿದ್ದ ಮಕ್ಕಳು ಸೇರಿ 30ಕ್ಕೂ ಹೆಚ್ಚು ಮಂದಿ ಬಲಿ

Most read

ಗಾಝಾ ಮೇಲೆ ಇಸ್ರೇಲ್‌ ಮತ್ತೆ ಮಾರಾಣಂತಿಕ ದಾಳಿಯನ್ನು ಮುಂದುವರಿಸಿದೆ. ಗಾಜಾ ಪಟ್ಟಿಯ ನುಸೆರಾತ್ ಶಿಬಿರದಲ್ಲಿ ನಿರಾಶ್ರಿತರು ಆಶ್ರಯ ಪಡೆದಿದ್ದ ಶಾಲೆಯ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು, ದಾಳಿಯಲ್ಲಿ ಮಕ್ಕಳು ಸೇರಿದಂತೆ ಮೂವತ್ತು ಪ್ಯಾಲೆಸ್ಟೈನಿಯರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ದಾಳಿ ಬೆನ್ನಲ್ಲೇ ಇಸ್ರೇಲ್‌ ಹಮಾಸ್‌ ಉಗ್ರರನ್ನು ಹತ್ಯೆ ಮಾಡಿರುವುದಾಗಿ ಹೇಳಿದೆ, ಆದ್ರೆ ಇದನ್ನ ತಳ್ಳಿಹಾಕಿರುವ ಗಾಜಾ, ಇಸ್ರೇಲ್‌ ಅಮಾಯಕ ನಿರಾಶ್ರಿತರನ್ನು ಹತ್ಯೆ ಮಾಡಿದೆ ಎಂದು ಕಿಡಿಕಾರಿದೆ.

ಮಧ್ಯ ಗಾಝಾದ ನುಸಿರಾತ್‌ನಲ್ಲಿರುವ ಯುಎನ್ ಶಾಲೆಯಲ್ಲಿ ಹಮಾಸ್ ಕಮಾಂಡ್ ಪೋಸ್ಟ್ ಅಡಗಿಕೊಂಡಿತ್ತು ಹೀಗಾಗಿ ದಾಳಿ ಮಾಡಿದ್ದೇವೆ ಎಂದು ಇಸ್ರೇಲ್‌ ಹೇಳಿಕೆಯನ್ನು ಗಾಝಾ ತಳ್ಳಿಹಾಕಿ, ತನ್ನ ದಾಳಿಯನ್ನು ಸಮರ್ಥಿಸಿಕೊಳ್ಳಲು ಇಸ್ರೇಲ್‌ ಸುಳ್ಳು ಕಥೆಗಳನ್ನು ಹೆಣೆಯುತ್ತಿದೆ ಎಂದು ತಿರುಗೇಟು ಕೊಟ್ಟಿದೆ.

ಕದನ ವಿರಾಮ ಜಾರಿಯಾಗಬೇಕಾದರೆ ಇಸ್ರೇಲ್ ಗಾಝಾ ಮೇಲಿನ ಯುದ್ಧವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಇಸ್ರೇಲ್ ಸೇನೆ ಗಾಜಾದಿಂದ ಸಂಪೂರ್ಣವಾಗಿ ಹಿಂತೆಗೆಯಬೇಕೆಂದು ಹಮಾಸ್​ ಷರತ್ತು ವಿಧಿಸಿತ್ತು, ಈ ಹಿನ್ನೆಲೆಯಲ್ಲಿ ಕಳೆದ ವಾರ ಯುಎಸ್ ಅಧ್ಯಕ್ಷ ಜೋ ಬೈಡನ್ ಮುಂದಿಟ್ಟಿದ್ದ ಕದನ ವಿರಾಮ ಪ್ರಸ್ತಾಪಕ್ಕೆ ಹಿನ್ನಡೆಯಾಗಿದೆ. ಸಿಐಎ ನಿರ್ದೇಶಕ ವಿಲಿಯಂ ಬರ್ನ್ಸ್ ಬುಧವಾರ ದೋಹಾದಲ್ಲಿ ಕತಾರ್ ಮತ್ತು ಈಜಿಪ್ಟ್​ನ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ಕದನ ವಿರಾಮ ಪ್ರಸ್ತಾಪದ ಬಗ್ಗೆ ಚರ್ಚಿಸಿದರು.

ಕದನ ವಿರಾಮವನ್ನು ಏರ್ಪಡಿಸುವ ಎಲ್ಲಾ ಪ್ರಯತ್ನಗಳು ಕೂಡ ವಿಫಲವಾಗಿವೆ. ಇಸ್ರೇಲ್ ಯುದ್ಧವನ್ನು ಸಂಪೂರ್ಣವಾಗಿ ನಿಲ್ಲಿಸಬೇಕೆಂದು ಹಮಾಸ್ ಬೇಡಿಕೆ ಇಟ್ಟಿದ್ದರೂ ಕೂಡ, ಹಮಾಸ್​ ಅನ್ನು ಸಂಪೂರ್ಣ ನಿರ್ನಾಮಗೊಳಿಸುವವರೆಗೂ ತಾತ್ಕಾಲಿಕ ಕದನ ವಿರಾಮಕ್ಕೆ ಮಾತ್ರ ತಾನು ಬದ್ಧ ಎಂದು ಇಸ್ರೇಲ್ ಹೇಳುತ್ತಿದೆ.

ಇಸ್ರೇಲ್‌ ದಾಳಿಯಿಂದಾಗಿ ಈವರೆಗೆ ಮಕ್ಕಳು-ಮಹಿಳೆಯರು ಸೇರಿದಂತೆ 36,000ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಲಕ್ಷಾಂತರ ಮಂದಿ ಮನೆಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ.ಇಷ್ಟಾದ್ರೂ ಕೂಡ ತನ್ನ ಹಗೆಯನ್ನು ಕಡಿಮೆಮಾಡಿಕೊಳ್ಳದ ಇಸ್ರೇಲೆ ಹಮಾಸ್‌ ಅನ್ನು ನಿರ್ನಾಮ ಮಾಡಿಯೇ ತೀರುತ್ತೇವೆ ಎಂದು ಶಪಥ ಮಾಡಿದೆ.. ಇಸ್ರೇಲ್‌ ಈ ಹೇಳಿಕೆ ಮತ್ತಷ್ಟು ಯುದ್ಧದ ಭೀತಿಯನ್ನು ಹೆಚ್ಚಿಸಿದ್ದು, ಮುಂದೆ ಯಾವ ಹಂತಕ್ಕೆ ತಲುಪಲಿದೆ ಎಂಬುದನ್ನು ಕಾದು ನೋಡಬೇಕು.

More articles

Latest article