ವಿಜಯಪುರ: ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ತೆರೆದ ಕೊಳವೆ ಬಾವಿಯಲ್ಲಿ ಬಿದ್ದಿರುವ ಎರಡು ವರ್ಷದ ಮಗು ಸಾತ್ವಿಕ್ ರಕ್ಷಣೆ ಕೊನೆಗೂ ಯಶಸ್ವಿಯಾಗಿದ್ದು, ಮಗುವನ್ನು ಹೊರಗೆ ತರಲಾಗಿದೆ.
ಮಗುವನ್ನು ಹೊರತರಲು ಹರಸಾಹಸ ನಡೆಸಿದ ರಕ್ಷಣಾ ಸಿಬ್ಬಂದಿ ಕೊನೆಗೂ ಮಗುವನ್ನು ರಕ್ಷಣೆ ಮಾಡುವುದರಲ್ಲಿ ಯಶಸ್ವಿಯಾಗಿದೆ.
ಸತತ 20 ಗಂಟೆಗಳ ಕಾರ್ಯಾಚರಣೆ ಅಂತ್ಯಗೊಂಡಿದ್ದು ಕೊಳವೆ ಬಾವಿಯಿಂದ ಮಗು ಸುರಕ್ಷಿತವಾಗಿ ಹೊರಬಂದಿದೆ. ನಿನ್ನೆ ಸಂಜೆ 6 ಗಂಟೆಗೆ ಕೊಳವೆ ಬಾವಿಗೆ ಬಿದ್ದಿದ್ದ ಸಾತ್ವಿಕ್ ಜೀವನ್ಮರಣದ ಹೋರಾಟ ನಡೆಸಿದ್ದ. ಕೋಟ್ಯಂತರ ಜನರು ಆತ ಬದುಕಿ ಬರಲಿ ಎಂದು ಪ್ರಾರ್ಥಿಸಿದ್ದರು. ಆಟವಾಡುವಾಗ ಆಯ ತಪ್ಪಿ 20 ಅಡಿ ಆಳದಲ್ಲಿ ಸಾತ್ವಿಕ್ ಬಿದ್ದು ಸಿಲುಕಿದ್ದ.
ನಿನ್ನೆಯಿಂದಲೇ ಕಾರ್ಯಾಚರಣೆ ನಡೆಸಿದ NDRF ಸಿಬ್ಬಂದಿ ಮತ್ತು ಜಿಲ್ಲಾಡಳಿತ ಕೊನೆಗೂ ಬಾಲಕನನ್ನು ರಕ್ಷಿಸಲು ಯಶಸ್ವಿಯಾದವು.
ಮಗುವನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕಳುಹಿಸಲಾಗುತ್ತಿದ್ದು, ಅಗತ್ಯ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ.
ಕೊನೆಯ ಹಂತದ ಕಾರ್ಯಾಚರಣೆಯಲ್ಲಿ ಮಗು ಬಿದ್ದಿದ ಕೊಳವೆ ಬಾವಿಯ ರಂಧ್ರ ಚಿಕ್ಕದಾಗಿದ್ದ ಹಿನ್ನೆಲೆಯಲ್ಲಿ ಯಂತ್ರಗಳ ಬದಲಿಗೆ ಕೈಗಳಲ್ಲೇ ಕಲ್ಲುಗಳನ್ನು ತೆರವುಗೊಳಿಸಲಾಯಿತು.
ಬೋರ್ ವೆಲ್ ನಲ್ಲಿ ಮಗು ತಲೆ ಕೆಳಗಾಗಿ ಬಿದ್ದಿದ್ದು ಎರಡು ಕೈಗಳು ಮಗುವಿನ ದೇಹಕ್ಕೆ ಒತ್ತಿಕೊಂಡಿದ್ದವು. ತಲೆಕೆಳಗಾಗಿ ಬಿದ್ದಿದ್ದರಿಂದ ಮಗು ಪೈಪ್ ಒಳಗೆ ಜಾಮ್ ಆಗಿ ಹೊರತೆಗೆಯಲು ಸೂಕ್ಷ್ಮವಾಗಿ ಕಾರ್ಯಾಚರಣೆ ನಡೆಸಲಾಯಿತು.
ಸ್ಥಳೀಯ ಶಾಸಕ ಯಶವಂತರಾಯಗೌಡ ಪಾಟೀಲ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಅಧಿಕಾರಿಗಳಿಂದ ಕ್ಷಣಕ್ಷಣದ ಮಾಹಿತಿ ಪಡೆಯುತ್ತಿದ್ದಾರೆ.