ಬೆಳಗಾವಿ: ಗೋವಾ ರಾಜ್ಯದ ಮಾಜಿ ಶಾಸಕ ಲಾವೊ ಮಾಮಲೇದಾರ್ ಅವರ ಮೇಲೆ ಆಟೋ ಚಾಲಕನೊಬ್ಬ ಹಲ್ಲೆ ಮಾಡಿದ್ದಾನೆ. ಕೂಡಲೇ ಅವರು ಕುಸಿದು ಬಿದ್ದು ಅಸುನೀಗಿದ್ದಾರೆ. ನಗರದ ಖಡೇಬಜಾರ್ ರಸ್ತೆಯಲ್ಲಿರುವ ಶ್ರೀನಿವಾಸ ಲಾಡ್ಜ್ ಎದುರು ಈ ದುರಂತ ನಡೆದಿದೆ. 69 ವರ್ಷದ ಲಾವೊ ಅವರು ಲಾಡ್ಜ್ ಒಳಗೆ ಹೋಗುವಾಗ ಕುಸಿದುಬಿದ್ದ ಮೃತಪಟ್ಟಿದ್ದಾರೆ. ಈ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಲಾವೊ ಮಾಮಲೇದಾರ್ ಅವರು ವೈಯಕ್ತಿಕ ತಮ್ಮ ಕೆಲಸದ ನಿಮಿತ್ತ ಬೆಳಗಾವಿಗೆ ಆಗಮಿಸಿದ್ದು, ಖಡೇಬಜಾರ್‌ನಲ್ಲಿರುವ ಶ್ರೀನಿವಾಸ ಲಾಡ್ಜ್ ನಲ್ಲಿ ತಂಗಿದ್ದರು. ಮಧ್ಯಾಹ್ನ ಲಾಡ್ಜ್ ಗೆ ಮರಳುವಾಗ ಅವರ ಕಾರು ಎದುರಿಗೆ ಇದ್ದ ಆಟೋಗೆ ತಾಗಿತ್ತು. ಕೋಪಗೊಂಡ ಆಟೊ ಚಾಲಕ ಲಾವೊ ಅವರೊಂದಿಗೆ ಜಗಳ ಆರಂಭಿಸಿದ್ದ. ಆಗ ಲಾವೊ ಅವರೂ ಏರಿದ ಧ್ವನಿಯಲ್ಲಿ ಮಾತನಾಡಿದ್ದರು.
ಸಿಟ್ಟಿಗೆದ್ದ ಆಟೊ ಚಾಲಕ ಲಾವೊ ಅವರ ಮೇಲೆ ಹಲ್ಲೆ ಮಾಡಿದ್ದ. ಸುತ್ತ ಸೇರಿದ ಜನ ಜಗಳ ಬಿಡಿಸಿ ಕಳುಹಿಸಿದ್ದರು. ಬಳಿಕ ಲಾವೊ ಅವರು ಲಾಡ್ಜ್ ಒಳಗೆ ಹೋಗಲು ಮೆಟ್ಟಿಲು ಹತ್ತುತ್ತಿರುವಾಗ ಮೆಟ್ಟಿಲು ಬಳಿಯೇ ಕುಸಿದುಬಿದ್ದು ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಮಾರ್ಕೆಟ್ ಠಾಣೆ ಪೊಲೀಸರು ಲಾವೊ ಅವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿದರಾದರೂ ಅಷ್ಟರೊಳಗೆ ಅವರು ಪ್ರಾಣ ಬಿಟ್ಟಿದ್ದರು. ಆರೋಪಿ ಆಟೊ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಂಗ್ರೆಸ್ ಮುಖಂಡರಾಗಿರುವ ಲಾವೊ ಅವರು 201200 ನಲ್ಲಿ ಮಹಾರಾಷ್ಟ್ರವಾದಿ ಗೋಮಂತಕ್ ಪಕ್ಷದಿಂದ ಸ್ಪರ್ಧಿಸಿ ಗೋವಾ ವಿಧಾನಸಭೆಗೆ ಆಯ್ಕೆಯಾಗಿದ್ದರು. ನಂತರ 2017ರಲ್ಲಿ ಅವರು ಪರಾಭವಗೊಂಡರು. ನಂತರ ತೃಣಮೂಲ ಕಾಂಗ್ರೆಸ್ ಸೇರಿ ಎರಡು ವರ್ಷಗಳ ಹಿಂದೆ ಕಾಂಗ್ರೆಸ್ ಸೇರಿದ್ದರು