ನಿವೃತ್ತ ಐಎಎಸ್ ಅಧಿಕಾರಿ ಮೇಲೆ ಹಲ್ಲೆ; ಕಂಡಕ್ಟರ್‌ ಅಮಾನತು

Most read

ಜೈಪುರ: ಪ್ರಯಾಣದ ಸಂದರ್ಭದಲ್ಲಿ ಹೆಚ್ಚುವರಿಯಾಗಿ ರೂ.10 ಟಿಕೆಟ್ ಹಣ ಕೇಳಿದ್ದನ್ನು ಪ್ರಶ್ನಿಸಿದ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರ ಮೇಲೆ ಬಸ್ ಕಂಡಕ್ಟರ್ ಹಲ್ಲೆ ಮಾಡಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಕಳೆದ ಶುಕ್ರವಾರ ನಡೆದಿದೆ ಎನ್ನಲಾದ ಈ ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ತೀವ್ರ ಕುತೂಹಲ ಮೂಡಿಸಿದೆ.

ರಾಜಸ್ಥಾನದ ನಿವೃತ್ತ ಐಎಎಸ್ ಅಧಿಕಾರಿ ಆರ್‌.ಎಲ್. ಮೀನಾ (75) ಎನ್ನುವವರು ಜೈಪುರ ನಗರ ಸಾರಿಗೆ ಬಸ್‌ನಲ್ಲಿ ಆಗ್ರಾ ರಸ್ತೆಯ ಮಾರ್ಗವಾಗಿ ಕನೋಟಾ ನಿಲ್ದಾಣಕ್ಕೆ ತೆರಳುತ್ತಿದ್ದರು. ಈ ವೇಳೆ ಕನೋಟಾ ನಿಲ್ದಾಣ ಸಮೀಪಿಸಿದ್ದನ್ನು ಕಂಡಕ್ಟರ್ ಪ್ರಯಾಣಿಕರ ಗಮನಕ್ಕೆ ತಂದಿರಲಿಲ್ಲ. ಇದರಿಂದ, ಮೀನಾ ಅವರಿಗೆ, ಮುಂದಿನ ನೈಲಾ ಎಂಬಲ್ಲಿನ ನಿಲ್ದಾಣಕ್ಕೆ ಇಳಿದುಕೊಳ್ಳುವಂತೆ ಸೂಚಿಸಿ ಹಾಗೂ ಹೆಚ್ಚುವರಿ ರೂ.10 ಟಿಕೆಟ್ ಹಣ ನೀಡುವಂತೆ ಕಂಡಕ್ಟರ್ ಒತ್ತಾಯಿಸಿದ್ದಾನೆ.

ಇದನ್ನು ಒಪ್ಪದ ಮೀನಾ ಅವರು ಕಂಡಕ್ಟರ್‌ ಜೊತೆ ಜಗಳಕ್ಕೆ ಮುಂದಾಗಿದ್ದಾರೆ. ಆಗ ಕಂಡಕ್ಟರ್ ಮೀನಾ ಅವರ ಮೇಲೆ ಮನಸೋಇಚ್ಛೆ ಹಲ್ಲೆ ಮಾಡಿದ್ದಾನೆ. ಈ ಕುರಿತು ಆರ್‌.ಎಲ್. ಮೀನಾ ಅವರು ದೂರು ದಾಖಲಿಸಿದ್ದಾರೆ. ಇವರು ನೀಡಿರುವ ದೂರು ದಾಖಲಿಸಿಕೊಂಡಿರುವ ಪೊಲೀಸರು ಹಲ್ಲೆ ಮಾಡಿದ ಕಂಡಕ್ಟರ್‌ನನ್ನು ಬಂಧಿಸಿದ್ದಾರೆ. ಘಟನೆ ಸಂಬಂಧ ಜೈಪುರ ನಗರ ಸಾರಿಗೆ ಇಲಾಖೆ ಬಸ್ ಕಂಡಕ್ಟರ್‌ನನ್ನು ಸೇವೆಯಿಂದ ಅಮಾನತು ಮಾಡಿದೆ.

More articles

Latest article