ಸಿಲ್ಚರ್: ಅಸ್ಸಾಂನ ಖಚ್ಚರ್ ಜಿಲ್ಲೆಯಲ್ಲಿ ಒಂದು ತಿಂಗಳ ಹಿಂದೆಯಷ್ಟೇ ಉದ್ಘಾಟನೆಯಾಗಿದ್ದ ನವೀಕರಣಗೊಳಿಸಲಾದ ಸೇತುವೆಯೊಂದು ಕುಸಿದು ಬಿದ್ದಿದ್ದು ಎರಡು ಲಾರಿಗಳು ಹಾರಂಗ್ ನದಿಗೆ ಬಿದ್ದಿವೆ. ಈ ದುರಂತದಲ್ಲಿ ಇಬ್ಬರು ಚಾಲಕರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಓವರ್ಲೋಡ್ ಆಗಿದ್ದ ಎರಡು ಲಾರಿಗಳು ಹಾರಂಗ್ ನದಿಗೆ ಉರುಳಿವೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಅಸ್ಸಾಂ ಹಾಗೂ ಮೇಘಾಲಯವನ್ನು ಸಂಪರ್ಕಿಸುವ ಸಿಲ್ಚರ್–ಕಲೈನ್ ರಸ್ತೆಯಲ್ಲಿರುವ ಹಳೆಯ ಈ ಸೇತುವೆ ಇದಾಗಿದೆ. ಎರಡು ವರ್ಷಗಳ ನವೀಕರಣ ಕಾಮಗಾರಿ ನಂತರ ಕಳೆದ ತಿಂಗಳಷ್ಟೇ ಸಂಚಾರಕ್ಕೆ ಮುಕ್ತವಾಗಿತ್ತು. ಘಟನೆ ಸಂಬಂಧ ತನಿಖೆಗೆ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೃದುಲ್ ಯಾದವ್ ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ಕೆಲವು ಸಂಚಾರ ನಿರ್ಬಂಧಗಳಿದ್ದವು, ಓವರ್ಲೋಡ್ ವಾಹನಗಳ ತಪಾಸಣೆಗೆ ನಾಲ್ಕು ಚೆಕ್ ಪಾಯಿಂಟ್ಗಳನ್ನು ನಿರ್ಮಿಸಲಾಗಿತ್ತು. ಯಾವ ಹಂತದಲ್ಲಿ ಯಾವ ಲೋಪಗಳಾಗಿವೆ ಎಂಬ ಬಗ್ಗೆ ತನಿಖೆ ನಡೆಲಾಗುವುದು. ಸೇತುವೆ ಕುಸಿದಿದ್ದರಿಂದ ಶಾಲಾ ಮಕ್ಕಳು ಹಾಗೂ ಸ್ಥಳೀಯ ನಿವಾಸಿಗಳು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನದಿ ದಾಟಲು ಅಲ್ಲಿ ದೋಣಿಗಳನ್ನು ನಿಯೋಜಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ನುಮಾಲ್ ಮಹಟ್ಟಾ ಹೇಳಿದ್ದಾರೆ.
ಸೇತುವೆ ನವೀಕರಣದ ಕಾಮಗಾರಿಗೆ ಕಳಪೆ ಮಟ್ಟದ ವಸ್ತುಗಳನ್ನು ಉಪಯೋಗಿಸಿದ್ದೇ ದುರಂತಕ್ಕೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. ಆದರೆ ಸ್ಥಳೀಯರ ಈ ಆರೋಪವನ್ನು ಸರಕಾರ ತಳ್ಳಿ ಹಾಕಿದೆ. ಸೇತುವೆ ಭಾರ ಹೊರುವ ಸಾಮರ್ಥ್ಯ 40 ಟನ್. ಆದರೆ ಈ ಲಾರಿಗಳು ಸುಮಾರು 120–130 ಟನ್ ಭಾರ ಹೊತ್ತಿದ್ದವು ಎಂದು ಸಮಜಾಯಿಷಿ ನೀಡಲಾಗಿದೆ.