ಕನ್ನಡ ಪ್ಲಾನೆಟ್‌ ಅಂಕಣಕಾರ ರಂಗಕರ್ಮಿ ಶಶಿಕಾಂತ ಯಡಹಳ್ಳಿ ʼಆರ್ಯಭಟʼ ಪ್ರಶಸ್ತಿಗೆ ಆಯ್ಕೆ

Most read

“ಆರ್ಯಭಟ ಸಾಂಸ್ಕೃತಿಕ ಸಂಸ್ಥೆ”ಯು 49 ನೇ ವಾರ್ಷಿಕ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಕೊಡಮಾಡುತ್ತಿದ್ದು ಆರು ಮಂದಿ ವಿದೇಶದಲ್ಲಿದ್ದು ಸಾಧನೆ ಮಾಡಿದ ಕನ್ನಡಿಗರ ಸಮೇತ ವಿವಿಧ ಕ್ಷೇತ್ರಗಳಲ್ಲಿ ಕೃಷಿ ಮಾಡಿದ ಒಟ್ಟು 60  ಸಾಧಕರಿಗೆ ಈ ವರ್ಷದ “ಆರ್ಯಭಟ” ಪ್ರಶಸ್ತಿಯನ್ನು ಘೋಷಿಸಿದೆ.

ಕಳೆದ ಮೂರು ದಶಕಗಳಿಂದ ಕನ್ನಡ ರಂಗಭೂಮಿಯಲ್ಲಿ ಕಲಾವಿದರಾಗಿ, ನಿರ್ದೇಶಕರಾಗಿ, ನಾಟಕಕಾರರಾಗಿ, ರಂಗವಿಮರ್ಶಕರಾಗಿ, ರಂಗ ತರಬೇತಿ ಶಿಕ್ಷಕರಾಗಿ, ರಂಗಭೂಮಿ ಪತ್ರಿಕೆಯ ಸಂಪಾದಕರಾಗಿ, ರಂಗ ಸಂಘಟಕರಾಗಿ ವಿವಿಧ ಆಯಾಮಗಳಲ್ಲಿ ನಿರಂತರವಾಗಿ ರಂಗಸೇವೆ ಸಲ್ಲಿಸುತ್ತಾ ಬಂದಿರುವ ಶಶಿಕಾಂತ ಯಡಹಳ್ಳಿಯವರು ಈ ಸಲದ ಅಂತಾರಾಷ್ಟ್ರೀಯ “ಆರ್ಯಭಟ” ಪ್ರಶಸ್ತಿಗೆ ರಂಗಭೂಮಿ ವಿಭಾಗದಿಂದ ಆಯ್ಕೆಯಾಗಿದ್ದಾರೆ.

“ಸೃಷ್ಟಿ ಜನನಾಟ್ಯ ಕಲಾ ಕೇಂದ್ರ” ಎನ್ನುವ ಸಂಸ್ಥೆಯನ್ನು ಹುಟ್ಟುಹಾಕಿ ನಿರಂತರವಾಗಿ ನಾಟಕಗಳನ್ನು ರಚಿಸಿ ನಿರ್ದೇಶಿಸಿ ನಿರ್ಮಿಸುತ್ತಾ ಬಂದಿರುವ ಯಡಹಳ್ಳಿಯವರು ಕನ್ನಡ ರಂಗಭೂಮಿಗರ ತಮ್ಮದೇ ಆದ ರೀತಿಯಲ್ಲಿ ಕೊಡುಗೆಯನ್ನು ಕೊಡುತ್ತಾ ಬಂದಿದ್ದಾರೆ. “ಸೃಷ್ಟಿ ಅಕಾಡೆಮಿ”ಯನ್ನು ಸ್ಥಾಪಿಸಿ ಕಳೆದ 24 ವರ್ಷಗಳಿಂದ ಮೂರು ಸಾವಿರಕ್ಕೂ ಹೆಚ್ಚು ಯುವಜನರ ರಂಗಭೂಮಿಯಾದಿಯಾಗಿ ದೃಶ್ಯಮಾಧ್ಯಮಗಳ ಕುರಿತು ಅಭಿನಯ ಮತ್ತು ನಿರ್ದೇಶನದ ತರಬೇತಿಯನ್ನು ಕೊಡುತ್ತಾ ಬಂದಿದ್ದಾರೆ. ತಮ್ಮದೇ ಆದ “ಸೃಷ್ಟಿ ಆಪ್ತ ರಂಗಮಂದಿರ” ವನ್ನು ದೊಮ್ಮಲೂರಿನಲ್ಲಿ ಸ್ಥಾಪಿಸಿ ಬಡಾವಣಾ ರಂಗಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದಾರೆ.

ಒಂದೂವರೆ ದಶಕಗಳ ಕಾಲ “ಇಪ್ಟಾ” ಸಂಸ್ಥೆಯ ಸಂಘಟಕರಾಗಿ ಹಲವಾರು ಬೀದಿನಾಟಕಗಳನ್ನು ರಚಿಸಿ, ನಿರ್ದೇಶಿಸಿ ರಾಜ್ಯಾದ್ಯಂತ ಪ್ರದರ್ಶಿಸಿ ಸಾವಿರಾರು ಪ್ರದರ್ಶನಗಳನ್ನು ಮಾಡಿಸಿದ್ದಾರೆ. ಸಾಮಾಜಿಕ ಕಾಳಜಿ ಹಾಗೂ ಜನಸಾಮಾನ್ಯರ ಬಗ್ಗೆ ಕಳಕಳಿ ಇರುವ ನಾಟಕಗಳನ್ನೇ ಹೆಚ್ಚಾಗಿ ಮಾಡಿಸಿದ್ದು ಜನರಲ್ಲಿ ಜಾಗೃತಿಯನ್ನುಂಟು ಮಾಡುವ ನಿಟ್ಟಿನಲ್ಲಿ ತಮ್ಮೆಲ್ಲಾ ಬೀದಿ ನಾಟಕಗಳನ್ನು ಕಟ್ಟಿ ಕೊಟ್ಟಿದ್ದಾರೆ. 30 ಕ್ಕೂ ಹೆಚ್ಚು ಪೂರ್ಣಪ್ರಮಾಣದ ನಾಟಕಗಳನ್ನು ರಚಿಸಿದ್ದು 20 ಕ್ಕೂ ಹೆಚ್ಚು ಪ್ರೊಸೀನಿಯಂ ನಾಟಕಗಳನ್ನು ನಿರ್ದೇಶಿಸಿದ್ದಾರೆ.

ಐದು ವರ್ಷಗಳ ಕಾಲ “ರಂಗಭೂಮಿ ವಿಶ್ಲೇಷಣೆ” ಎನ್ನುವ ರಂಗ ಪತ್ರಿಕೆಯ ಸಂಪಾದಕರಾಗಿ ರಂಗಚಟುವಟಿಕೆಗಳನ್ನು ದಾಖಲಿಸಿದ್ದ ಯಡಹಳ್ಳಿಯವರು ಫ್ರೀಲಾನ್ಸ್ ಪತ್ರಕರ್ತರಾಗಿಯೂ ಕ್ರಿಯಾಶೀಲವಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವಾರು ಟಿವಿ ಸುದ್ದಿ ವಾಹಿನಿಗಳಲ್ಲಿ ಪ್ಯಾನಲಿಸ್ಟ್ ಆಗಿ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಆಗುಹೋಗುಗಳ ಕುರಿತು ವಿಶ್ಲೇಷಣೆ ಮಾಡುತ್ತಾ ಬಂದಿದ್ದಾರೆ.

ಚಲನಚಿತ್ರ ನಟರಾದ ರಕ್ಷಿತ್ ಶೆಟ್ಟಿ, ಮೇಘಾಶೆಟ್ಟಿಯಾದಿಯಾಗಿ ಹಲವು ಸಾಧಕರಿಗೂ ಈ ಪ್ರಶಸ್ತಿ ದೊರಕಿದ್ದು ಅವರ ಜೊತೆ ಯಡಹಳ್ಳಿಯವರೂ “ಆರ್ಯಭಟ” ಪ್ರಶಸ್ತಿ ಸ್ವೀಕರಿಸುತ್ತಿದ್ದಾರೆ. 

ಇಂದು (ಜೂನ್ 23) ರವೀಂದ್ರ  ಕಲಾಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ “ಆರ್ಯಭಟ ಪ್ರಶಸ್ತಿಯನ್ನು ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಡಾ.ಹೆಚ್.ಬಿ.ಪ್ರಭಾಕರ ಶಾಸ್ತ್ರಿಯವರು ಪ್ರದಾನ ಮಾಡಲಿದ್ದಾರೆ.

ಬಹುಮುಖ ಸಾಂಸ್ಕೃತಿಕ ಲೋಕದ ಪ್ರತಿಭಾನ್ವಿತರಿಗೆ “ಆರ್ಯಭಟ”ದಂತಹ ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿ ದೊರಕಿದ್ದು ಸೂಕ್ತವಾಗಿದೆ. ತಮ್ಮ ಬಿಡುವಿಲ್ಲದ ಸಮಾಜಮುಖಿ ಚಟುವಟಿಕೆಗಳ ನಡುವೆಯೇ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕೇವಲ ಸಾಮಾಜಿಕ ಸ್ವಾಸ್ಥ್ಯವನ್ನಷ್ಟೆ ಗುರಿಯಾಗಿರಿಸಿಕೊಂಡು ಕನ್ನಡ ಪ್ಲಾನೆಟ್‌ಗೆ ನಿರಂತರವಾಗಿ ಬರೆಯುತ್ತಿರುವ ಶಶಿಕಾಂತ ಯಡಹಳ್ಳಿಯವರಿಗೆ ಅಭಿನಂದನೆಗಳು.

ಇದನ್ನೂ ಓದಿ-http://ಹೆಸರಾಂತ ಲೇಖಕ, ವಿಮರ್ಶಕ, ಕನ್ನಡ ಪ್ಲಾನೆಟ್‌ನ ಅಂಕಣಕಾರ, ರಂಗಕರ್ಮಿ ಶಶಿಕಾಂತ ಯಡಹಳ್ಳಿಗೆ ‘ಆರ್ಯಭಟ’ ಪ್ರಶಸ್ತಿ https://kannadaplanet.com/shashikanth-yadahalli-aryabhata-awarad/

More articles

Latest article