ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ – ಚರ್ಚೆ
“ಬಸವಣ್ಣನವರು ಸಾರ್ವತ್ರಿಕವಾದ ಸಾರ್ವಕಾಲಿಕವಾದ ಸರ್ವಜನ ಸಮಭಾವದ ತಾತ್ವಿಕತೆಗಳ ಮೂಲಕ ಕಲ್ಯಾಣ ಸಮಾಜವನ್ನು ಕಟ್ಟುವುದಕ್ಕೆ ಬೇಕಾದ ನೀತಿಯನ್ನು ಬೋಧಿಸಿರುವುದರಿಂದ ನಮ್ಮ ದೇಶದ ಸಂವಿಧಾನದ ಆಶಯಗಳಿಗೆ ಅನುರೂಪವಾದ ಅವರ ಚಿಂತನೆಗಳು, ಬಸವಣ್ಣನವರ ಸಾಂಸ್ಕೃತಿಕ ನಾಯಕತ್ವಕ್ಕೆ ಸಮರ್ಥನೀಯವಾದ ನೆಲೆ ಒದಗಿಸಿವೆ. ಕರ್ನಾಟಕ ಸರ್ಕಾರ (ವ್ಯವಹಾರ ನಿರ್ವಹಣೆ) ನಿಯಮಗಳು 1977 ರ ಮೊದಲ ಅನುಸೂಚಿಯ ಪ್ರಕರಣ 1C ಪ್ರಕಾರ ಜಗಜ್ಯೋತಿ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನನ್ನಾಗಿ ಘೋಷಿಸಲು ಸಚಿವ ಸಂಪುಟ ನಿರ್ಧರಿಸಿದೆ” ಎಂಬುದು ಜ. 18 ರಂದು ವಿಧಾನಸಭೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ನಿರ್ಣಯವಾಗಿದೆ. ಈ ಕುರಿತು ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು ಕನ್ನಡ ಪ್ಲಾನೆಟ್ ಆರೋಗ್ಯಕರ ಚರ್ಚೆಗೆ ವೇದಿಕೆ ಒದಗಿಸಿದೆ. ಮೊದಲ ಲೇಖನವನ್ನು ಶಶಿಕಾಂತ ಯಡಹಳ್ಳಿಯವರು ಬರೆದಿದ್ದಾರೆ.
ಕೊನೆಗೂ ಶಾಮನೂರು ಶಿವಶಂಕರಪ್ಪನವರು ಘೋಷಿಸಿದಂತೆ, ವೀರಶೈವ ಲಿಂಗಾಯತ ಮಹಾಸಭೆ ಅನುಮೋದಿಸಿದಂತೆ ಹಾಗೂ ಇತ್ತೀಚೆಗೆ ಸಿಎಂ ಸಿದ್ದರಾಮಯ್ಯನವರನ್ನು ಭೇಟಿಯಾದ 48 ಮಠಾಧೀಶರ ನಿಯೋಗದ ಮನವಿಯಂತೆ ಸರಕಾರವು “ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ” ಎಂದು ಒಪ್ಪಿ ಸರಕಾರಿ ಆದೇಶ ಹೊರಡಿಸಿದೆ.
ಬಸವಣ್ಣನವರಿಗೆ ಸಾಂಸ್ಕೃತಿಕ ನಾಯಕನ ಪಟ್ಟ ಸಿಕ್ಕಿದ್ದಕ್ಕೆ ಲಿಂಗಾಯತ ಸಮುದಾಯ ಸಂತಸ ಗೊಂಡಿದೆ. ಅದಕ್ಕಿಂತಲೂ ಹೆಚ್ಚಾಗಿ ವೀರಶೈವ ಸ್ಥಾವರಗಳು ತಮ್ಮ ಉದ್ದೇಶ ಈಡೇರಿತು ಎಂದು ಸಂಭ್ರಮಿಸುತ್ತಿವೆ. ಆದರೆ ಇದೆಲ್ಲಾ ಲಿಂಗಾಯತರ ಮೇಲೆ ವೀರಶೈವರು ಮಾಡುತ್ತಿರುವ ಸವಾರಿ ಎಂಬುದು ಲಿಂಗಾಯತ ಮಠಮಾನ್ಯರಿಗೆ ಅರ್ಥವಾಗುತ್ತಿಲ್ಲ. ಬಸವಣ್ಣನವರನ್ನು ಒಂದು ರಾಜ್ಯಕ್ಕೆ ಮಿತಿಗೊಳಿಸುವ ಮೂಲಕ ಜಗತ್ತಿಗೆ ಜ್ಯೋತಿಯಾದ ಜಗಜ್ಯೋತಿ ಬಸವೇಶ್ವರರನ್ನು ಒಂದು ಚೌಕಟ್ಟಿಗೆ ಸೀಮಿತಗೊಳಿಸಿರುವುದು ಬಯಲನ್ನು ಆಲಯದಲ್ಲಿ ಬಂಧಿಸಿದಂತೆ ಎಂಬುದು ಲಿಂಗಾಯತ ಸಮುದಾಯದವರಿಗೂ ಅರಿವಾಗುತ್ತಿಲ್ಲ.
ಕೆಲವು ಪ್ರಜ್ಞಾವಂತ ಲಿಂಗಾಯತರು ಅಖಿಲ ಭಾರತ ವೀರಶೈವ ಮಹಾಸಭಾಕ್ಕೆ ಪ್ರತಿಯಾಗಿ ಜಾಗತಿಕ ಲಿಂಗಾಯತ ಮಹಾಸಭಾ ರಚಿಸಿಕೊಂಡು ಪ್ರತ್ಯೇಕ ಲಿಂಗಾಯತ ಧರ್ಮದ ಮಾನ್ಯತೆಗಾಗಿ ದಶಕಗಳಿಂದ ಆಗ್ರಹಿಸುತ್ತಿದ್ದಾರೆ. ಲಿಂಗಾಯತ ಧರ್ಮಕ್ಕಾಗಿ ಹಲವಾರು ಸಮ್ಮೇಳನಗಳನ್ನು ಆಯೋಜಿಸಿದ್ದಾರೆ. ಲಿಂಗಾಯತ ಧರ್ಮ ಸಮಾನತೆಯನ್ನು ಸಾರುವಂತಹುದು, ಏಕದೇವೋಪಾಸನೆ ತತ್ವವನ್ನು ಹೊಂದಿರುವಂತಹುದು, ಕಾಯಕ ಮತ್ತು ದಾಸೋಹ ಸಿದ್ಧಾಂತಕ್ಕೆ ಬದ್ಧವಾಗಿರುವಂತಹುದು, ಬಸವಣ್ಣನವರಿಂದ ಸ್ಥಾಪನೆಯಾಗಿರುವಂತಹುದು ಹಾಗೂ ವಚನಗಳನ್ನೊಳಗೊಂಡ ಧರ್ಮಗ್ರಂಥದ ಪ್ರಕಾರ ನಡೆಯುವಂತಹುದು, ಆದ್ದರಿಂದ ಬೌದ್ಧ ಜೈನ, ಸಿಕ್ ಧರ್ಮದ ಹಾಗೆ ಪ್ರತ್ಯೇಕ ಧರ್ಮವಾಗಬೇಕು ಎಂಬುದು ನಿಜವಾದ ಲಿಂಗಾಯತರ ನ್ಯಾಯಯುತವಾದ ಬೇಡಿಕೆ.
ಬಸವಧರ್ಮದ ಈ ಎಲ್ಲಾ ತತ್ವ ಸಿದ್ಧಾಂತಗಳಿಗೂ ಪಂಚಾಚಾರ್ಯರ ವೀರಶೈವ ಆಚರಣೆಗಳಿಗೂ ಯಾವುದೇ ಸಾಮ್ಯತೆ ಇಲ್ಲ. ಆದರೂ ವೀರಶೈವರು ಲಿಂಗಾಯತರನ್ನು ಬಿಟ್ಟು ಕೊಡಲು ಸಿದ್ಧರಿಲ್ಲ. ವೀರಶೈವರನ್ನು ಬಿಟ್ಟು ಅದು ಹೇಗೆ ಲಿಂಗಾಯತವು ಸ್ವತಂತ್ರ ಧರ್ಮ ಆಗಲು ಸಾಧ್ಯ? ಆಗುವುದಿದ್ದರೆ ವೀರಶೈವ ಲಿಂಗಾಯತ ಎರಡೂ ಸೇರಿಯೇ ಸ್ವತಂತ್ರ ಧರ್ಮ ಆಗಬೇಕು ಎನ್ನುವುದು ವೀರಶೈವ ಮಹಾಸಭಾದ ಉಕ್ಕಿನ ಹಿಡಿತ. ‘ವೀರಶೈವರು ಲಿಂಗಾಯತರ ಗುರುಗಳಾಗಿದ್ದು, ಲಿಂಗಾಯತರ ಎಲ್ಲಾ ಶುಭ- ಅಶುಭ ಕಾರ್ಯಕ್ಕೂ ಅಯ್ನೋರ ಪೌರೋಹಿತ್ಯ ಇರಲೇಬೇಕು’ ಎನ್ನುವುದು ವೀರಶೈವ ಗುರು ಮಠಗಳ ಒತ್ತಾಯ. ಹಾಗೆ ನೋಡಿದರೆ ಧಾರ್ಮಿಕವಾಗಿ ವೀರಶೈವರ ವಿಚಾರ ಆಚಾರಗಳಿಗೂ ಹಾಗೂ ವೈದಿಕ ಪುರೋಹಿತಶಾಹಿಗಳಿಗೂ ಅಂತಹ ವ್ಯತ್ಯಾಸವೇನಿಲ್ಲ. ಅದು ಹೇಗೆ ನಾವೆಲ್ಲಾ ಹಿಂದೂ ಎನ್ನುತ್ತಾ ವೈದಿಕರು ಅಸಂಖ್ಯಾತ ಶೂದ್ರರು, ದಲಿತರು, ಆದಿವಾಸಿಗಳನ್ನು ಹಿಂದೂ ಧರ್ಮದಲ್ಲಿ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೋ ಹಾಗೆಯೇ ಈ ವೀರಶೈವ ಪುರೋಹಿತಶಾಹಿಗಳೂ ಸಹ ಲಿಂಗಾಯತರನ್ನು ತಮ್ಮ ಆಜ್ಞಾವರ್ತಿಗಳಾಗಿ ಇರುವಂತೆ ಒತ್ತಡ ಹೇರುತ್ತಲೇ ಬಂದಿದ್ದಾರೆ. ಈ ವೀರಶೈವ ಗುರುಪೀಠಗಳ ಒತ್ತಾಯಕ್ಕೆ ಹಲವಾರು ಲಿಂಗಾಯತ ವಿರಕ್ತಮಠಗಳೂ ಮಣಿದು ವೀರಶೈವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿವೆ. ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಮಾನ್ಯತೆ ಬೇಕು ಅಂದಾಗಲೆಲ್ಲಾ ವೀರಶೈವರು ಅಡ್ಡಗಾಲು ಹಾಕುತ್ತಲೇ ಬಂದಿದ್ದಾರೆ.
ಜ.16 ರಂದು ಹರಿಹರದ ಪಂಚಮಸಾಲಿ ಗುರುಪೀಠದ ಹರಜಾತ್ರೆಯಲ್ಲಿ ಆ ಮಠದ ಸ್ವಾಮಿಗಳಾದ ವಚನಾನಂದರು “ಅಯೋಧ್ಯೆಯಲ್ಲಿ ನಡೆಯಲಿರುವ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಸಂದರ್ಭ ವೀರಶೈವ ಲಿಂಗಾಯತ ಸಮುದಾಯದ ಎಲ್ಲರೂ ಪೂಜೆ ಸಲ್ಲಿಸಬೇಕು” ಎಂದು ಅಪ್ಪಣೆ ಕೊಟ್ಟಿದ್ದಾರೆ. ಈ ಸ್ವಾಮಿಗಳ ಹೆಸರೇ ವಚನಾನಂದ, ಇವರದ್ದು ಪಂಚಮಸಾಲಿ ಲಿಂಗಾಯತ ಮಠ. ಇವರ ನಡೆ ನುಡಿ ಮಾತ್ರ ಬಸವ ವಿರೋಧಿಯಾಗಿರುವಂತಹುದು. ಯಾಕೆಂದರೆ ಬಸವಾದಿ ಶರಣರು ಏಕದೇವೋಪಾಸಕರು. ಇಷ್ಟಲಿಂಗವನ್ನು ಹೊರತುಪಡಿಸಿ ಅನ್ಯದೇವರ ಆರಾಧನೆ ಪೂಜೆ ಪ್ರಾರ್ಥನೆ ಮಾಡದವರು. ಇಂತಹ ಲಿಂಗಾಯತ ಪರಂಪರೆಯ ಮಠದ ಸ್ವಾಮಿಗಳು ರಾಮನಿಗೆ ಪೂಜೆ ಸಲ್ಲಿಸಬೇಕು ಎಂದು ಕರೆಕೊಡುವುದೇ ಬಸವಧರ್ಮಕ್ಕೆ ಮಾಡುವ ಅಪಚಾರ. ಇಂತಹುದೇ ವಿರೋಧಾಭಾಸಕರ ನಡೆ ನುಡಿಯನ್ನು ಬಹುತೇಕ ಲಿಂಗಾಯತ ಮಠದ ಸ್ವಾಮಿಗಳು ಮುಂದುವರೆಸಿದ್ದಾರೆ; ಶರಣಧರ್ಮದ ಸಿದ್ಧಾಂತಗಳ ವಿರುದ್ಧವಾಗಿದ್ದಾರೆ. ಇದೆಲ್ಲವನ್ನೂ ಆಲೋಚಿಸುವ ಬೌದ್ಧಿಕತೆ ಇಲ್ಲದ ಲಿಂಗಾಯತ ಮತದ ಅನುಯಾಯಿಗಳು ಈ ಸ್ವಾಮಿಗಳು ಹೇಳಿದಂತೆ ವೈದಿಕ – ವೀರಶೈವ ಆಚರಣೆಗಳನ್ನು ಮೈಗೂಡಿಸಿಕೊಂಡಿದ್ದಾರೆ. “ಎನ್ನ ನಡೆಯೊಂದು ಪರಿ, ಎನ್ನ ನುಡಿಯೊಂದು ಪರಿ. ಎನ್ನೊಳಗೇನೂ ಶುದ್ಧವಿಲ್ಲ ನೋಡಯ್ಯಾ” ಎಂದು ಬಸವಣ್ಣನವರು ಇಂತವರನ್ನು ಊಹಿಸಿಯೇ ವಚನ ರಚಿಸಿದ್ದಾರೆ.
ಈಗ ಲಿಂಗಾಯತ ಸ್ವತಂತ್ರ ಧರ್ಮ ಆಗುವುದಕ್ಕೆ ಕೇಂದ್ರ ಬಿಂದುವೇ ಬಸವಣ್ಣ. ವೈದಿಕ ಹಾಗೂ ವೀರಶೈವ ಪುರೋಹಿತಶಾಹಿಗೆ ಬಹುದೊಡ್ಡ ಪ್ರತಿರೋಧವೇ ಬಸವಣ್ಣ. ಈ ಸನಾತನಿಗಳನ್ನು ವಿರೋಧಿಸಿದ್ದ ಬಸವಣ್ಣನವರನ್ನು ವಿರೋಧಿಸಿದರೆ ಎಲ್ಲಿ ಬಹುಸಂಖ್ಯಾತ ಲಿಂಗಾಯತರು ವೀರಶೈವರ ಹಿಡಿತದಿಂದ ಬೇರೆಯಾಗುತ್ತಾರೋ ಎನ್ನುವ ಆತಂಕ ವೀರಶೈವರದ್ದು. ಲಿಂಗಾಯತರಿಗೆ ಸ್ವತಂತ್ರ ಧರ್ಮದ ಮಾನ್ಯತೆ ಸಿಕ್ಕರೆ ಬಹುಸಂಖ್ಯಾತ ಸಮುದಾಯವೊಂದು ಎಲ್ಲಿ ಹಿಂದೂ ಧರ್ಮದಿಂದ ದೂರಾಗುತ್ತದೋ ಎನ್ನುವ ಭಯ ವೈದಿಕಶಾಹಿಗಳದ್ದು. ಹೀಗಾಗಿ ಲಿಂಗಾಯತರು ಹಿಂದೂ ಧರ್ಮದ ಭಾಗವಾಗಿ, ವೀರಶೈವರ ಹಿಡಿತದಲ್ಲೇ ಇರಬೇಕೆಂದರೆ ಲಿಂಗಾಯತರ ಆರಾಧ್ಯ ದೈವ ಬಸವಣ್ಣನವರಿಗೆ ಒಂದಿಷ್ಟು ಪ್ರಾಮುಖ್ಯತೆಯನ್ನು ಕೊಡುವ ಮೂಲಕ ಪ್ರತ್ಯೇಕ ಲಿಂಗಾಯತ ಧರ್ಮದ ಬೇಡಿಕೆಯನ್ನು ಡೈಲ್ಯೂಟ್ ಮಾಡುವ ತಂತ್ರಗಾರಿಕೆಯ ಭಾಗವೇ ಈ ಸಾಂಸ್ಕೃತಿಕ ನಾಯಕತ್ವದ ದಾಳ.
ಒಂದು ಧರ್ಮದ ಸ್ಥಾಪಕರಾದ ಬಸವಣ್ಣನವರನ್ನು ಒಂದು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಕರೆಯುವುದೇ ಆ ಸಮಾನತಾ ಧರ್ಮ ಸಂಸ್ಥಾಪಕನಿಗೆ ಮಾಡುವ ಅಪಮಾನ. ಬುದ್ದನನ್ನು, ಮಹಾವೀರರನ್ನು, ಮಹಮದ್ ಪೈಗಂಬರರನ್ನು, ಏಸು ಕ್ರಿಸ್ತರನ್ನು ಇಲ್ಲವೇ ಗುರುನಾನಕ್ ರವರನ್ನು ಧರ್ಮಸ್ಥಾಪಕರೆಂದು ಮಾನ್ಯ ಮಾಡಬಹುದೇ ಹೊರತು ಸಾಂಸ್ಕೃತಿಕ ನಾಯಕನೆಂದು ಕರೆಯಲಾಗದು. ಅದೇ ರೀತಿ ಮಹಾಶರಣ ಬಸವಣ್ಣ ಲಿಂಗಾಯತ ಧರ್ಮ ಸ್ಥಾಪಕರೇ ಹೊರತು ವೀರಶೈವರು ಹೇಳುವಂತೆ ಸಾಂಸ್ಕೃತಿಕ ನಾಯಕನಲ್ಲ.
ಪ್ರತಿಯೊಂದು ಜಾತಿಗೂ ಈಗ ಸಾಂಸ್ಕೃತಿಕ ನಾಯಕರಿದ್ದಾರೆ. ಉದಾಹರಣೆಗೆ ಕುರುಬರು ಕನಕದಾಸರನ್ನು, ಒಕ್ಕಲಿಗರು ಕೆಂಪೇಗೌಡರನ್ನು, ಬೇಡ ಜನಾಂಗದವರು ವಾಲ್ಮೀಕಿಯನ್ನು, ದಲಿತ ಸಮುದಾಯದವರು ಬಾಬಾಸಾಹೇಬರನ್ನು ತಮ್ಮ ಜಾತಿ ಜನಾಂಗದ ಸಾಂಸ್ಕೃತಿಕ ನಾಯಕ ಎಂದು ಒಪ್ಪಿಕೊಂಡಿದ್ದಾರೆ. ಅದೇ ರೀತಿ ಲಿಂಗಾಯತರನ್ನೂ ಒಂದು ಜಾತಿಗೆ ಸೀಮಿತಗೊಳಿಸಿ ಅವರ ಆರಾಧ್ಯ ದೈವ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಕರೆದು ಧರ್ಮ ಸಂಸ್ಥಾಪಕರ ಸ್ಥಾನವನ್ನು ಮರೆಮಾಚುವುದು ವೀರಶೈವ ಪುರೋಹಿತಶಾಹಿಗಳ ಹುನ್ನಾರವಾಗಿದೆ. ಈ ಹುನ್ನಾರಕ್ಕೆ ಮರುಳಾದ ಲಿಂಗಾಯತ ಮಠಾಧೀಶರುಗಳೇ ಮುಂದಾಗಿ ಬಸವಣ್ಣನವರನ್ನು “ಸಾಂಸ್ಕೃತಿಕ ನಾಯಕ” ಎಂದು ಘೋಷಿಸುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸಿ ಅದರಲ್ಲಿ ಯಶಸ್ವಿಯಾಗಿದ್ದು ವಿಪರ್ಯಾಸ.
ಈ ವೀರಶೈವ ಪ್ರಚೋದಿತ, ವೈದಿಕಶಾಹಿ ಪ್ರೇರಿತ ಲಿಂಗಾಯತ ಮಠಾಧೀಶರುಗಳು ಲಿಂಗಾಯತ ಸಮುದಾಯ ಕೇಳುವ ಈ ಪ್ರಶ್ನೆಗಳಿಗೆ ಉತ್ತರಿಸಬೇಕಿದೆ.
1. ಲಿಂಗಾಯತ ಎನ್ನುವುದು ಧರ್ಮವೋ ಇಲ್ಲಾ ಹಲವು ಜಾತಿಗಳ ಒಕ್ಕೂಟವೋ?
2. ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪಕರೋ ಇಲ್ಲಾ ಕೇವಲ ಸಾಂಸ್ಕೃತಿಕ ನಾಯಕರೋ?
3. ಲಿಂಗಾಯತ ಸ್ವತಂತ್ರ ಧರ್ಮ ಆದರೆ ಲಿಂಗಾಯತ ಸಮುದಾಯಕ್ಕೆ ಪ್ರಯೋಜನವೋ ಅಥವಾ ಸಾಂಸ್ಕೃತಿಕ ನಾಯಕನೆಂಬ ಪಟ್ಟದಿಂದ ದೊರೆಯುವುದು ಕೇವಲ ಸಂತೃಪ್ತಿಯೋ?
4. ಬಸವಧರ್ಮಕ್ಕೆ ವಿರುದ್ಧವಾಗಿರುವ ವೀರಶೈವ ಎನ್ನುವ ಪುರೋಹಿತಶಾಹಿಗಳ ಹಿಡಿತದಲ್ಲಿ ಲಿಂಗಾಯತರು ಇರಬೇಕೋ ಅಥವಾ ಅವರ ನಿಯಂತ್ರಣದಿಂದ ಬೇರೆಯಾಗಿ ಲಿಂಗಾಯತ ಸ್ವತಂತ್ರ ಧರ್ಮವಾಗಿ ವಿಶ್ವ ಧರ್ಮಗಳ ಪಟ್ಟಿಯಲ್ಲಿ ತನ್ನ ಐಡೆಂಟಿಟಿ ಉಳಿಸಿಕೊಳ್ಳಬೇಕೋ?
5. ಮನುಕುಲಕ್ಕೆ ಕಾಯಕ ಹಾಗೂ ದಾಸೋಹ ಸಿದ್ಧಾಂತವನ್ನು ಕೊಟ್ಟು ಸಮಾನತೆ ಸಾರಿದ ಬಸವಣ್ಣ ಧರ್ಮ ಸಂಸ್ಥಾಪಕರಾಗಿ ವಿಶ್ವ ಮಾನ್ಯತೆ ಪಡೆಯಬೇಕೋ ಅಥವಾ ರಾಜ್ಯವೊಂದರ ನಾಮಕಾವಸ್ಥೆ ಸಾಂಸ್ಕೃತಿಕ ನಾಯಕನೆಂಬ ಬಿರುದಿಗೆ ಸೀಮಿತನಾಗಬೇಕೋ?
6. ದಯೆಯೇ ಧರ್ಮದ ಮೂಲವೆಂದ ಬಸವಣ್ಣನವರ ಲಿಂಗಾಯತ ಧರ್ಮವು ಲಿಂಗಾಯತರಿಗೆ ಆದ್ಯತೆಯಾಗಬೇಕೋ ಅಥವಾ ದಯೆ ಮರೆತು ಅಸಮಾನತೆಯನ್ನು ಮೈಗೂಡಿಸಿಕೊಂಡಿರುವ ಪುರೋಹಿತಶಾಹಿ ಧರ್ಮದ ಅಡಿಯಾಳಾಗಿ ಲಿಂಗಾಯತ ಧರ್ಮೀಯರು ತಮ್ಮ ಧರ್ಮ ಸಂಸ್ಥಾಪಕನ ಐಡೆಂಟಿಟಿಯನ್ನೇ ಬಿಟ್ಟುಕೊಡಬೇಕೋ?
7. ಹೋಗಲಿ ಬಸವಣ್ಣನವರನ್ನು ಧರ್ಮಸ್ಥಾಪಕ ಎಂದು ಎಂದೂ ಒಪ್ಪಿಕೊಳ್ಳದ ಈ ವೀರಶೈವರು ಈಗ ಸಾಂಸ್ಕೃತಿಕ ನಾಯಕ ಎಂಬುದನ್ನು ಒಪ್ಪಿಕೊಳ್ಳುತ್ತಿರುವುದರಿಂದ ಅವರು ಬಸವಣ್ಣನವರ ಆಶಯಗಳನ್ನು ಆಚರಿಸಲು ಸಾಧ್ಯವೇ? ಬಹುದೇವೋಪಾಸನೆಯನ್ನು ಬಿಟ್ಟು ಇಷ್ಟಲಿಂಗವನ್ನು ಮಾತ್ರ ಆರಾಧಿಸಲು ಸಾಧ್ಯವೇ? ಗುಡಿ ಗುಂಡಾರಗಳನ್ನು ತ್ಯಜಿಸಲು ಆಗುತ್ತದೆಯೇ?
8. ಸಾಂಸ್ಕೃತಿಕ ನಾಯಕ ಎಂದು ಒಪ್ಪಿಕೊಂಡ ಮೇಲೆ. ಅಂತಹ ನಾಯಕನ ಆಶಯಗಳನ್ನು ಅನುಸರಿಸುವುದು ನಾಯಕತ್ವ ಒಪ್ಪಿಕೊಂಡವರ ಕರ್ತವ್ಯವಲ್ಲವೇ? ಹಾಗಾದರೆ ಬಸವಣ್ಣನವರ ವಚನಗಳಲ್ಲಿ ಹೇಳಿದಂತೆ ತಮ್ಮ ನಡೆ ನುಡಿಗಳನ್ನು ಬದಲಾಯಿಸಿ ಬದುಕಲು ಈ ವೀರಶೈವ ಪುರೋಹಿತಶಾಹಿಗಳಿಗೆ ಆಗುತ್ತದೆಯೇ?
9. “ಕಲ್ಲು, ಮಣ್ಣು, ಮರ ಪಂಚಲೋಹ, ಪುಣ್ಯತೀರ್ಥಕ್ಷೇತ್ರ ದೇವರು ದೇವರಲ್ಲ, ತನ್ನ ತಾನರಿದು ತಾನಾರೆಂದು ತಿಳಿದರೆ ತನಗೆ ತಾನೇ ದೇವ” ಎಂಬ ಬಸವಣ್ಣನವರ ವಚನವನ್ನು ಪರಿಪಾಲಿಸುತ್ತೇವೆಂದು ವೀರಶೈವ ಮಠಗಳು ಘೋಷಿಸುತ್ತವೆಯೇ?
10. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕನೆಂದು ಮಾನ್ಯ ಮಾಡಿದ ಮೇಲೆ, ಲಿಂಗ ಅಸಮಾನತೆ, ಜಾತಿ ಧರ್ಮ ಶ್ರೇಷ್ಟತೆಯ ವ್ಯಸನ, ಅಸ್ಪೃಶ್ಯತೆ ಮುಂತಾದ ಅನಿಷ್ಟಗಳನ್ನು ತ್ಯಜಿಸಿ ಸಮಾನತೆಯ ಆಧಾರದ ಮೇಲೆ ವೀರಶೈವ ಗುರುಮಠಗಳು ಕಾರ್ಯನಿರ್ವಹಿಸುತ್ತವೆ ಎಂದು ನಿರ್ಧರಿಸಿ ಆಚರಿಸಲು ಆಗುತ್ತದೆಯೇ?
ಈ ಎಲ್ಲಾ ಪ್ರಶ್ನೆಗಳಿಗೂ ಆಗಬಹುದು, ಆಗುತ್ತದೆ, ಆಗಲೇಬೇಕು ಎಂದು ಕರ್ನಾಟಕದ ಮಠಮಾನ್ಯಗಳು, ಪುರೋಹಿತಶಾಹಿ ಪೀಠಗಳು, ವೀರಶೈವ ಸಮುದಾಯದವರು ಉತ್ತರಿಸಿದ್ದೇ ಆದರೆ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಒಪ್ಪಿಕೊಳ್ಳಬಹುದು. ಆದರೆ ಈ ಸಾಂಸ್ಕೃತಿಕ ನಾಯಕತ್ವದ ಪಟ್ಟ ಕಟ್ಟಿರುವುದೇ ತೋರುಂಬ ಲಾಭಕ್ಕೆ ಎನ್ನುವುದಾದರೆ ಅದು ಬಸವಣ್ಣನವರಿಗೆ ಮಾಡುವ ಅಪಚಾರ. ನಿಜವಾದ ಲಿಂಗಾಯತರಿಗೆ ಮಾಡುವ ಮಹಾಮೋಸ. ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಬಲಾಢ್ಯ ಸಮುದಾಯವಾದ ವೀರಶೈವದ ನಾಯಕರು ಹಾಗೂ ಅವರ ಕೈಗೊಂಬೆಯಾಗಿರುವ ಮಠಾಧೀಶರುಗಳು ಆಳುವ ಸರಕಾರದ ಮೇಲೆ ಒತ್ತಡ ತಂದು ಬಸವಣ್ಣನವರಿಗೆ ಸಾಂಸ್ಕೃತಿಕ ನಾಯಕ ಎಂದು ಮಾನ್ಯತೆ ಪಡೆದಿದ್ದರ ಹಿಂದೆ ರಾಜಕೀಯ ಹಿತಾಸಕ್ತಿ ಇದೆಯೇ ಹೊರತು ಬಸವಣ್ಣನವರ ಮೇಲೆ ಹಾಗೂ ಅವರು ಪ್ರತಿಪಾದಿಸಿದ ಆಶಯಗಳ ಮೇಲಿರುವ ಆಸಕ್ತಿಯಿಂದಲ್ಲ.
ಕರ್ಮಸಿದ್ಧಾಂತಿಗಳ ಈ ಒಳಮರ್ಮ ನಿಜವಾದ ಬಸವಾನುಯಾಯಿ ಲಿಂಗಾಯತರಿಗೆ ಅರ್ಥವಾಗುವವರೆಗೂ ಬಸವಣ್ಣ ಸಾಂಸ್ಕೃತಿಕ ನಾಯಕನಾಗಿರುತ್ತಾನೆ. ಅರ್ಥವಾದಾಗ ವೀರಶೈವ ಹಾಗೂ ವೈದಿಕ ಹಿತಾಸಕ್ತಿಗಳ ಹಿಡಿತದಿಂದ ಹೊರಬಂದು ಸ್ವತಂತ್ರ ಲಿಂಗಾಯತ ಧರ್ಮದ ಮಾನ್ಯತೆಗಾಗಿ ಲಿಂಗಾಯತರು ಹೋರಾಡುತ್ತಾರೆ. ಬಸವಣ್ಣನವರು ಲಿಂಗಾಯತ ಧರ್ಮಸಂಸ್ಥಾಪಕ ಎಂಬ ಮಾನ್ಯತೆ ಪಡೆಯುತ್ತಾರೆ.
ಶಶಿಕಾಂತ ಯಡಹಳ್ಳಿ
ರಂಗಕರ್ಮಿ ಹಾಗೂ ಪತ್ರಕರ್ತರು