ಬೆಂಗಳೂರು: ಮಳೆಗಾಲ ಆರಂಭವಾಗಿದ್ದು, ವಿಧಾನಸೌದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಸಭೆ ನಡೆಸಿದರು. ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಕೃಷ್ಣಭೈರೇಗೌಡ, ಚೆಲುವರಾಯಸ್ವಾಮಿ, ಪ್ರಿಯಾಂಕ್ ಖರ್ಗೆ, ಕೆ.ಜೆ. ಜಾರ್ಜ್ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮೊದಲಾದವರು ಭಾಗವಹಿಸಿದ್ದರು.
ಸಭೆಯ ಆರಂಭದಲ್ಲಿ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ನೀಡಿದ ಸೂಚನೆಗಳು ಹೀಗಿವೆ:
*ಸಂವಿಧಾನದ ಆಶಯ ಮತ್ತು ಧ್ಯೇಯೋದ್ದೇಶಗಳಿಗೆ ಯಾರೂ ವಿರುದ್ಧವಾಗಿ ಕಾರ್ಯನಿರ್ವಹಿಸಬಾರದು. ಅಂತಹ ಶಕ್ತಿಗಳು ಬೆಳೆಯಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಇತ್ತೀಚಿನ ದಿನಗಳಲ್ಲಿ ಇಂತಹ ಶಕ್ತಿಗಳು ತಲೆ ಎತ್ತುತ್ತಿದ್ದು, ಅಂತಹ ಶಕ್ತಿಗಳನ್ನು ಮೊಳಕೆಯಲ್ಲೇ ಚಿವುಟಿ ಹಾಕಬೇಕು. ಅಂತಹ ವ್ಯಕ್ತಿಗಳೂ ಯಾರೇ ಆಗಿದ್ದರೂ, ಅವರನ್ನು ಮಟ್ಟ ಹಾಕುವುದು ಅಂತಹ ಶಕ್ತಿಗಳು ಬೆಳೆಯದಂತೆ ನೋಡಿಕೊಳ್ಳಬೇಕಾದುದು ಡಿಸಿ, ಸಿಇಒ, ಎಸ್ ಪಿಗಳ ಜವಾಬ್ದಾರಿ ಎಂದು ಮುಖ್ಯಮಂತ್ರಿಗಳು ಖಾರವಾಗಿ ಪ್ರಶ್ನಿಸಿದರು.
*ಹಿಂದಿನ ಸಭೆಯಲ್ಲಿ ನೀಡಿದ ಸೂಚನೆಗಳು, ತೆಗೆದುಕೊಂಡ ನಿರ್ಣಯಗಳಲ್ಲಿ ಕೆಲವು ಇಲಾಖೆಗಳು ಶೇ.ನೂರರಷ್ಟು ಪ್ರಗತಿ ತೋರಿಸಿಲ್ಲ. ಇದನ್ನು ಸಹಿಸಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ರಾಜಿ ಇಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ಮೇಲೆ ನಿಷ್ಠುರವಾಗಿ ಕ್ರಮ ಕೈಗೊಳ್ಳುವುದು ನಮಗೆ ಅನಿವಾರ್ಯ ಆಗುತ್ತದೆ.
*ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿಗಳು ಮತ್ತು ಸಿಇಒ ಗಳು ತಮ್ಮ ಅಹಂ ಬದಿಗೊಟ್ಟಿ ಸಮನ್ವಯದಿಂದ ಕೆಲಸ ಮಾಡಿದರೆ ಮಾತ್ರ ರಾಜ್ಯದ ಸಮಗ್ರ ಅಭಿವೃದ್ಧಿ ಸಾಧ್ಯ. ಈ ಉದ್ದೇಶಕ್ಕೇ ನೀವುಗಳು ಐಎಎಸ್ ಮಾಡಿರುವುದು. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
*10-10-1949 ರಂದು ಸಂವಿಧಾನ ಜಾರಿ ಸಭೆಯಲ್ಲಿ ಇಂಡಿಯನ್ ಸಿವಿಲ್ ಸರ್ವೀಸ್ ಬೇಕಾ ಎಂದು ಚರ್ಚೆ ಆಗಿ ಐಎಎಸ್ ಬೇಕು ಎನ್ನುವ ನಿರ್ಧಾರಕ್ಕೆ ಬರಲಾಗಿದೆ. ಆ ಸಭೆಯಲ್ಲಿ ವಲ್ಲಭಾಬಾಯಿ ಪಟೇಲರು “ದೇಶವನ್ನು ನೈಜ ಸ್ವಾತಂತ್ರ್ಯ ಹೋರಾಟಗಳ ಆಶಯದಲ್ಲಿ ಮುನ್ನಡೆಸಲು ಐಎಎಸ್ ಸೇವೆ ಇರಬೇಕು, ಇದರ ನೈಜ ಕಾಳಜಿಯನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಸಾಮಾಜಿಕ ನ್ಯಾಯ
*ವಲ್ಲಭಬಾಯಿ ಅವರ ಮಾತನ್ನು ನಾವು ಅರ್ಥಮಾಡಿಕೊಳ್ಳಬೇಕು. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಕೆಲಸ ಮಾಡುವವರ ವಿರುದ್ಧ ಮತ್ತು ಜನಪರ ಆಶಯಗಳಿಗೆ ಸ್ಪಂದಿಸದಿದ್ದರೆ ಅವರ ವಿರುದ್ಧ ನಾವು ಕ್ರಮ ಕೈಗೊಳ್ಳಬೇಕಾಗುತ್ತದೆ. ನೀವೆಲ್ಲಾ ಸಂವಿಧಾನ ಓದಿದ್ದೀರಿ, ಅದರ ಆಶಯಗಳಿಗೆ, ಧ್ಯೇಯೋದ್ದೇಶಗಳಿಗೆ ಬದ್ದರಾಗಿದ್ದೀರಿ ಎಂದು ನಂಬಿದ್ದೇನೆ. ಇದನ್ನು ಕಾರ್ಯ ರೂಪಕ್ಕೆ ತರುವುದರಲ್ಲಿ ವಿಫಲರಾದವರ ವಿರುದ್ಧ ನಾನು ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲು ನಿರ್ಧಿರಿಸಿದ್ದೇನೆ ಎಂದು ಎಚ್ಚರಿಸಿದರು.
*ಸಂವಿಧಾನ ವಿರೋಧಿ, ಜನ ವಿರೋಧಿ ದುಷ್ಟ ಶಕ್ತಿಗಳು ಕೆಲವು ಕಡೆ ಬಾಲ ಬಿಚ್ಚುತ್ತಿವೆ. ಅವರು ಎಷ್ಟೇ ಪ್ರಭಾವಿ ಆಗಿರಲಿ, ಕಾನೂನು ಹಾಳು ಮಾಡಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಿ. ಇಲ್ಲದಿದ್ದರೆ ನಿಮ್ಮ ವಿರುದ್ಧ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿಮತ್ತು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
*ಕಾನೂನು ಸುವ್ಯವಸ್ಥೆ ಹದಗೆಟ್ಟರೆ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಇವೆರಡಕ್ಕೂ ನೇರಾ ನೇರಾ ಸಂಬಂಧವಿದೆ.
*ಕಾನೂನು ಸುವ್ಯವಸ್ಥೆ ಹದಗೆಟ್ಟರೆ, ಅಭಿವೃದ್ಧಿ ಕುಂಟಿತವಾದಂತೆ. ಇದಕ್ಕೆ ಜಿಲ್ಲಾಧಿಕಾರಿಗಳು, ಜಿಲ್ಲಾ ರಕ್ಷಣಾಧಿಕಾರಿಗಳು ನೇರ ಹೊಣೆ ಎಂದು ಎಚ್ಚರಿಸಿದರು.
*ನಾವು ಜನರ ತೆರಿಗೆ ದುಡ್ಡಿನಲ್ಲಿ ಆಡಳಿತ ನಡೆಸುತ್ತಿದ್ದೇವೆ. ನಾವು ಮತ್ತು ನೀವು ಎಲ್ಲಾ ಸವಲತ್ತುಗಳನ್ನು ಅನುಭವಿಸುತ್ತಿರುವುದು ಜನರ ತೆರಿಗೆ ಹಣದಿಂದ ಎನ್ನುವುದನ್ನು ಮರೆಯಬಾರದು. ಕಾರು, ಮನೆ ಸೇರಿ ಎಲ್ಲಾ ಸವಲತ್ತುಗಳನ್ನು ನಾವು ಕೊಟ್ಟಿರುವುದು ತೆರಿಗೆ ಹಣದಲ್ಲಿ. ಆದ್ದರಿಂದ ಜನಪರ ಧೋರಣೆಯಲ್ಲಿ ಕೆಲಸ ಮಾಡಬೇಕು. ಇದೇ ಪ್ರಜಾಪ್ರಭುತ್ವದ ಮೂಲ ಆಶಯ.
*ಜಿಲ್ಲಾ ಮಟ್ಟದ ಶಾಂತಿ ಸಮಿತಿ ಅಧ್ಯಕ್ಷರು ಜಿಲ್ಲಾಧಿಕಾರಿಗಳೇ ಆಗಿರುತ್ತಾರೆ. ಶಾಂತಿ ಕಾಪಾಡಲು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಅದನ್ನು ಬಿಟ್ಟು ಶಾಂತಿಭಂಗ ಆದ ಮೇಲೆ ಪೋಸ್ಟ್ ಮಾರ್ಟಂ ಮಾಡುತ್ತಾ ಕೂರಬಾರದು. ಮೊದಲೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ಏನು ಸಮಸ್ಯೆ ನಿಮಗೆ ಎಂದು ಪ್ರಶ್ನಿಸಿದರು.
*ಬಾಲ್ಯ ವಿವಾಹ ಆಗುವುದು ಜಿಲ್ಲಾಧಿಕಾರಿಗಳ ಗಮನಕ್ಕೆ ಏಕೆ ಬರುವುದಿಲ್ಲ? ನಿಮ್ಮ ಕೆಳಗಿನವರು ನಿಮಗೆ ವರದಿ ಮಾಡುವುದಿಲ್ಲವೇ? ಕೆಳಗಿನವರು ನಿಮಗೆ ಹೇಳದಿದ್ದರೆ ನಿಮಗೆ ದಕ್ಷತೆ ಇಲ್ಲ ಎಂದು ಅರ್ಥ. ನಿಮಗೆ ಅಧಿಕಾರಿಗಳ ಮೇಲೆ ನಿಯಂತ್ರಣ ಇಲ್ಲ, ನಿಮ್ಮ ಬಗ್ಗೆ ಅವರಿಗೆ ಭಯ ಇಲ್ಲ ಎಂದೇ ಅರ್ಥ ಎಂದು ತರಾಟೆಗೆ ತೆಗೆದುಕೊಂಡರು.
*ಈ ವರ್ಷ 700 ಬಾಲ್ಯ ವಿವಾಹ ನಡೆದಿದೆ, ಬಾಲ್ಯದಲ್ಲೇ ತಾಯಂದಿರಾದ ಘಟನೆಗಳೂ ವರದಿಗಳಾಗಿವೆ. ಈ ಬಗ್ಗೆ ಹಲವು ಕಡೆ ಎಫ್ ಐಆರ್ ಕೂಡ ದಾಖಲಾಗಿಲ್ಲ ಎನ್ನುವುದು ನನ್ನ ಗಮನಕ್ಕೆ ಬಂದಿದೆ. ಸ್ವಾತಂತ್ರ್ಯ ಬಂದು ಇಷ್ಟ ವರ್ಷಗಳಾದರೂ 7೦೦ ಬಾಲ್ಯ ವಿವಾಹ ನಡೆಯುತ್ತಿದೆ ಎಂದರೆ ಹೇಗೆ? ಬಾಲ್ಯವಿವಾಹ ತಡೆಗೆ ಕಾಯ್ದೆ, ಕಾನೂನುಗಳಿವೆ. ಆದರೂ ಇದನ್ನು ಪರಿಣಾಮಕಾರಿಯಾಗಿ ಕೆಲವು ಕಡೆ ಬಳಸಿಲ್ಲ. ಇದು ತಪ್ಪಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.
ಕೆರೆ ಒತ್ತುವರಿ ಗರಂ ಆದ ಸಿಎಂ:
ಮುಖ್ಯಮಂತ್ರಿಗಳು ಒಂದೂ ಕೆರೆ ಒತ್ತುವರಿ ತೆರವುಗೊಳಿಸಿದ ಜಿಲ್ಲಾಧಿಕಾರಿ, ಸಿಇಓ ಗಳ ವಿರುದ್ಧ ಸೂಕ್ತ ಕ್ರಮಕ್ಕೆ ರಾಜ್ಯ ಮುಖ್ಯ ಕಾರ್ಯದರ್ಶಿಯವರಿಗೆ ಸೂಚಿಸಿದರು. ಸಭೆಯ ವೇಳೆ ಯಾವ್ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಕೆರೆಗಳ ಒತ್ತುವರಿ ತೆರವುಗೊಳಿಸಲಾಗಿದೆ ಎನ್ನುವುದನ್ನು ಮುಖ್ಯಮಂತ್ರಿಗಳು ಪರಿಶೀಲನೆ ನಡೆಸಿದರು. ಎರಡು ಮೂರು ಜಿಲ್ಲೆಗಳಲ್ಲಿ ಒಂದೂ ಕೆರೆ ಒತ್ತುವರಿ ಮಾಡದಿರುವುದನ್ನು ಗಮನಿಸಿ ಗರಂ ಆದ ಮುಖ್ಯಮಂತ್ರಿಗಳು, ಆ ಬಗ್ಗೆ ವರದಿ ತರಿಸಿಕೊಂಡು ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸಭೆಯಲ್ಲೇ ಸೂಚನೆ ನೀಡಿದರು.